ಹುಬ್ಬಳ್ಳಿ: ಮೊಬೈಲ್ ನಲ್ಲಿ ಆನ್ ಲೈನ್ ಗೇಮ್ ಆಡದಂತೆ ತಾಯಿ ಬುದ್ಧಿವಾದ ಹೇಳಿ ಮೊಬೈಲ್ ಕಿತ್ತುಕೊಂಡಿದ್ದಕ್ಕೆ ಮನನೊಂದ 14 ವರ್ಷದ ಬಾಲಕನೋರ್ವ ಆತ್ಮಹತ್ಯೆ ಮಾಡಿಕೊಂಡಿರುವ ಧಾರುಣ ಘಟನೆ ಹುಬ್ಬಳ್ಳಿಯ ಬೆಂಗೇರಿಯ ಉದಯನಗರದಲ್ಲಿ ನಡೆದಿದೆ.
ಮೃತ ಬಾಲಕನನ್ನು ಸಮರ್ಥ್ ಪಟಿಕೆ ಎಂದು ಗುರುತಿಸಲಾಗಿದೆ. ಈತ ಕಳೆದ ಕೆಲವು ದಿನಗಳಿಂದ ‘ಫ್ರೀ ಫೈರ್’ (Free Fire) ಎಂಬ ಆನ್ ಲೈನ್ ಗೇಮ್ ಗೆ ತೀವ್ರವಾಗಿ ವ್ಯಸನಿಯಾಗಿದ್ದ ಎನ್ನಲಾಗಿದೆ.
ಘಟನೆಯ ದಿನ ರಾತ್ರಿ ಸಮರ್ಥ್ ಸತತವಾಗಿ ಮೊಬೈಲ್ ನಲ್ಲಿ ಗೇಮ್ ಆಡುತ್ತಿದ್ದನ್ನು ಗಮನಿಸಿದ ತಾಯಿ, “ಮೊಬೈಲ್ ಸಾಕು ಮಾಡು, ಓದಿನ ಕಡೆ ಗಮನ ಕೊಡು” ಎಂದು ಬುದ್ಧಿವಾದ ಹೇಳಿದ್ದಾರೆ. ಅಲ್ಲದೆ, ಆತನ ಕೈಯಲ್ಲಿದ್ದ ಮೊಬೈಲ್ ಫೋನನ್ನು ಕಿತ್ತುಕೊಂಡಿದ್ದಾರೆ. ಇದರಿಂದ ತೀವ್ರವಾಗಿ ನೊಂದ ಬಾಲಕ ತಕ್ಷಣವೇ ತನ್ನ ಕೋಣೆಗೆ ಹೋಗಿ ಒಳಗಿನಿಂದ ಬಾಗಿಲು ಹಾಕಿಕೊಂಡಿದ್ದಾನೆ. ಸುಮಾರು 15–20 ನಿಮಿಷಗಳಾದರೂ ಮಗ ಹೊರಬಾರದಿದ್ದಾಗ ಆತಂಕಗೊಂಡ ತಂದೆ ಕಿಟಕಿಯಿಂದ ಇಣುಕಿ ನೋಡಿದಾಗ, ಸಮರ್ಥ್ ಸೀರೆಯಿಂದ ನೇಣು ಬಿಗಿದುಕೊಂಡಿರುವುದು ಕಂಡುಬಂದಿದೆ.
ತಕ್ಷಣವೇ ಬಾಗಿಲು ಮುರಿದು ಬಾಲಕನನ್ನು ಕಿಮ್ಸ್ (KIMS) ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಪರೀಕ್ಷಿಸಿದ ವೈದ್ಯರು ಬಾಲಕ ಮೃತಪಟ್ಟಿರುವುದಾಗಿ ಘೋಷಿಸಿದ್ದಾರೆ. ಈ ಸಂಬಂಧ ಹುಬ್ಬಳ್ಳಿಯ ಕೇಶ್ವಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


