ತುಮಕೂರು: ಕಾರ್ಮಿಕರ ಸೌಲಭ್ಯಗಳು, ಕಾನೂನು ಮತ್ತು ಸಾಮಾಜಿಕ ಭದ್ರತೆಗಳನ್ನು ಕಸಿಯುತ್ತಿರುವ ಇಂದಿನ ಸಮಯದಲ್ಲಿ ಹಿಂದಿಗಿಂತಲೂ ಸ್ವಲ್ಪ ಸೊರಗಿರುವ ಕಾರ್ಮಿಕರ ಚಳುವಳಿ ಪುಟ್ಟಿದೇಳಬೇಕು. ಸಂಘಟನೆಯು ತಾತ್ವಿಕ ನೆಲೆಯಲ್ಲಿ ಕಟ್ಟಬೇಕು. ಕಾರ್ಮಿಕರ ಹಿತಾಸಕ್ತಿಗೆ ವಿರುದ್ಧವಾದವರಿಗೆ ಮತ ನೀಡುವುದು ಸರಿಯಲ್ಲ. ಜಾತಿ, ಮತಗಳ ಹಿಂದೆ ಹೋಗುವುದು ಸರಿಯಲ್ಲ ಎಂಬ ನಿರ್ಧಾರಕ್ಕೆ ಬರಬೇಕು. ಸರ್ಕಾರಗಳು ಜೀವನ ನಡೆಸುವಂತಹ ಕನಿಷ್ಠ ವೇತನವನ್ನು ನೀಡುತ್ತಿಲ್ಲ. ಅದರ ನಿಗದಿಯಲ್ಲೂ ಸಹ ಸರ್ಕಾರ ಬದ್ಧತೆ ತೋರದೆ ಇರುವ ಬಗ್ಗೆ ಕಾರ್ಮಿಕರು ಒಂದಾಗಿ ಹೋರಾಟ ನಡೆಸುವ ಅಗತ್ಯವಿದೆ ಎಂದು ಮಾಜಿ ರಾಜ್ಯ ಸದಸ್ಯರು, ಲೇಖಕರು ಆದ ಎಲ್. ಹನುಮಂತಯ್ಯ ಅವರು ಅಭಿಪ್ರಾಯಪಟ್ಟರು.
ಸಿಐಟಿಯು ತುಮಕೂರು ಜಿಲ್ಲಾ ಸಮಿತಿಯು ಆಯೋಜಿಸಿದ್ದ ವಿಶ್ವ ಕಾರ್ಮಿಕ ದಿನಾಚರಣೆ ಬಹಿರಂಗ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಸ್ವಾತಂತ್ರ್ಯ ಬಂದ ಸಮಯದಲ್ಲಿ ಇದ್ದ ಕಲ್ಯಾಣದ ಪರಿಕಲ್ಪನೆ ಇಂದು ಇನ್ನಷ್ಟು ಬಲಗೊಳ್ಳಬೇಕಾಗಿತ್ತು. ಆದರೆ ಅದನ್ನು ಕಸಿಯಲಾಗುತ್ತಿದೆ. ನಿರುದ್ಯೋಗಿಗಳಿಗೆ ಉದ್ಯೋಗ ಸೃಷ್ಟಿ ಸಂಬಂಧಿಸಿ ಮಾತನಾಡಿದ ಅವರು, ಕೇಂದ್ರ ಸರ್ಕಾರದಲ್ಲಿ ಸುಮಾರು 14 ಲಕ್ಷ ಮತ್ತು ರಾಜ್ಯ ಸರ್ಕಾರದಲ್ಲಿ 3 ಲಕ್ಷದಷ್ಟು ಉದ್ಯೋಗಗಳು ಖಾಲಿ ಇವೆ, ಇದನ್ನು ತುಂಬಬೇಕಾದ ಅಗತ್ಯವಿದೆ ಎಂದರು.
ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಹಿಂದೆ ಜನತೆ ಹಸಿವಿನಿಂದ ಸಾಯಬಾರದು ಮತ್ತು ಅವರಿಗೆ ಉದ್ಯೋಗ ಗ್ರಾಮೀಣ ಪ್ರದೇಶದಲ್ಲೇ ಸಿಗುವ ಯೋಜನೆಯನ್ನು ಯುಪಿಐ ಅವಧಿಯಲ್ಲಿ ರೂಪಿಸಿದ್ದರು. ಆದರೆ ಅಂದು 60 ಜನ ಎಡಪಕ್ಷಗಳ (ಕಮ್ಯುನಿಸ್ಟ್ ಪಕ್ಷದ) ಅಂದಿನ ಸಂಸತ್ ಸದಸ್ಯರ ಒತ್ತಾಸೆಯಿತ್ತು ಎಂದ ಅವರು, ಅದನ್ನು ಬಿಜೆಪಿ ಸರ್ಕಾರ ನಾಶ ಮಾಡುತ್ತಿದೆ ಎಂದು ಆಕ್ಷೇಪಿಸಿದರು. ಇದರ ವಿರುದ್ಧವೂ ಜನ ಧ್ವನಿ ಎತ್ತಬೇಕು ಎಂದರು.
ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಿ. ಕಮಲ ಮಾತನಾಡಿ, ಆಳುತ್ತಿರುವ ಸರ್ಕಾರಗಳು ಜನಹಿತ ಮರೆತು ಸ್ವಹಿತಕ್ಕೆ ಬಂಡವಾಳದ ಹಿತಕ್ಕೆ ಮಾತ್ರ ದುಡಿಯುತ್ತಿವೆ ಎಂದು ಆಪಾದಿಸಿದರು. ಕಸದ ವಾಹನ ಚಾಲಕರು ಮತ್ತು ಸಹಾಯಕರ ಸಂಘದ ಪ್ರಧಾನ ಕಾರ್ಯದರ್ಶಿ ಮಾರುತಿ ಅವರು ಮಾತನಾಡಿ, ಸ್ವಚ್ಛತಾ/ಮುನ್ಸಿಪಲ್ ಕಾರ್ಮಿಕರ ನಡುವೆ ತಾರತಮ್ಯ ಮಾಡಲಾಗಿದೆ. ನಾಮಿಲ್ಲದ ವೇತನಕ್ಕೆ ಹೆಚ್ಚು ದುಡಿಸಲಾಗುತ್ತಿದೆ. ಸರ್ಕಾರ ನ್ಯಾಯೋಚಿತವಾಗಿ ವರ್ತಿಸುವಂತೆ ಒತ್ತಾಯಿಸಿದರು.
ಸಿಐಟಿಯು ಜಿಲ್ಲಾಧ್ಯಕ್ಷ ಸೈಯದ್ ಮುಜೀಬ್ ಮಾತನಾಡಿ, ಭಾರತ ಸರ್ಕಾರವು ಸಂವಿಧಾನ ವಿರೋಧಿ, ಕಾರ್ಮಿಕ ವಿರೋಧಿ ಕಾರ್ಮಿಕ ಸಂಹಿತೆ ಮತ್ತು ಶ್ರಮ ನೀತಿ ಜಾರಿಗೆ ಹೊರಟಿದೆ. ಇದು ಕಾರ್ಮಿಕರ ತೀವ್ರ ವಿರೋಧದ ನಡುವೆ ಯಾರ ಒತ್ತಕ್ಕೆ ಜಾರಿ ಮಾಡಲಾಗುತ್ತಿದೆ ಎಂದು ಪ್ರಶ್ನಿಸಿದರು. ಕಾರ್ಮಿಕರ ಐಕ್ಯತೆ ಮತ್ತು ಸಮರ್ಥಿರ ಹೋರಾಟ ಇಂದಿನ ಅಗತ್ಯ ಎಂದರು. ಕಾಲಕ್ಕೆ ತಕ್ಕಂತೆ ಕಾರ್ಮಿಕ ಸಂಘಟನೆಗಳನ್ನು ಬದಲಿಸಬೇಕಾದ ಅಗತ್ಯವಿದೆ. ಅಳುತ್ತಿರುವ ಸರ್ಕಾರಗಳನ್ನು ಬದಲಿಸುವ ಶಕ್ತಿ ಕಾರ್ಮಿಕರಿಗೆ ದುಡಿಯುವವರಿಗೆ ಇದೆ, ಅದನ್ನು ವಿವೇಚನೆಯಿಂದ ಬಳಸಬೇಕು ಎಂದರು.
ಅಂಗನವಾಡಿ ನೌಕರರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗುಲ್ಬಾರ್ ಬಾನು ಮಾತನಾಡಿ, ಕನಿಷ್ಠ ವೇತನ, ಸಾಮಾಜಿಕ ಭದ್ರತೆ ಇಲ್ಲ. ಸರ್ಕಾರವೇ ಸ್ಕೀಮ್ ನೌಕರರನ್ನು ದುಡಿಸಿಕೊಳ್ಳುವ ಸರ್ಕಾರ, ಶೋಷಕನಂತೆ ವರ್ತಿಸುತ್ತಿದೆ ಎಂದರು.
ಆರಂಭದಲ್ಲಿ ಮೇ ಡೇ ಸಮಿತಿ ಸಂಚಾಲಕ ಷಣ್ಮುಖಪ್ಪ ಸ್ವಾಗತಿಸಿ, ಸುಜಿತ್ ನಾಯಕ್ ವಂದಿಸಿದರು. ಈ ಸಂದರ್ಭದಲ್ಲಿ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಣೆ ಮಾಡಲಾಯಿತು.
ವೇದಿಕೆಯಲ್ಲಿ ಜಿಲ್ಲಾ ಖಜಾಂಚಿ ಎ. ಲೋಕೇಶ್, ಕಟ್ಟಡ ಕಾರ್ಮಿಕ ಸಂಘಟನೆಯ ಜಿಲ್ಲಾಧ್ಯಕ್ಷ ಬಿ.ಉಮೇಶ್, ಐರಾಂಟಿಂಕಾಲೀಲ್, ಸಾರಿಗೆ ನೌಕರರ ಸಂಘದ ಅಧ್ಯಕ್ಷ ದೇವರಾಜು, ಸಿಐಟಿಯು ಕಾರ್ಯದರ್ಶಿಗಳಾದ ಪುಷ್ಪ, ಶಿವಕುಮಾರಸ್ವಾಮಿ, ಎನ್.ಕೆ.ಸುಬ್ರಹ್ಮಣ್ಯ, ಅಬ್ದುಲ್ ಮುನಾಫ್, ಉಪಾಧ್ಯಕ್ಷರುಗಳಾದ ಅನುಸೂಯ, ಪಾರ್ವತಮ್ಮ, ಬಿಡಿ ಕಾರ್ಮಿಕ ಸಂಘಟನೆಯ ಚಿಕ್ಕೇಗೌಡ, ಪುಟ್ಟಣ್ಣ, ವ್ಯಾಪಾರಿಗಳ ಸಂಘದ ಕಾರ್ಯದರ್ಶಿ ವಸೀಂಅಕ್ರಮ್, ಮುತ್ತುರಾಜ್, ಹಮಾಲಿ ಸಂಘಟನೆಯ ನಾಗರಾಜು, ನಿಖಿತಾ ಕಾರ್ಮಿಕ ಸಂಘದ ಯತೀಶ್ ಕುಮಾರ್, ಮಹಾನಗರಪಾಲಿಕೆ ನೀರು ಸರಬರಾಜು ನೌಕರರ ಸಂಘ, ಕುಮಾರ್, ಐಸಾಕ್ ಕಾರ್ಮಿಕ ಸಂಘ ಸ್ಟಾಲಿ ಸುಕುಮಾರ್, ಆಟೋಚಾಲಕರ ಸಂಘಟನೆಯ ಇಂತಿಯಾಜ್ ಪಾಷ, ತಿಪ್ಪೇಸ್ವಾಮಿ, ತುಮಕೂರು ತಾಂತ್ರಿಕ ಸಂಸ್ಥೆಗಳ ಮುಖಂಡ ದೊಡ್ಡರಾಮೇಗೌಡ, ತುಮಕೂರು ವಿವಿ ಗಂಗಮ್ಮ ಮತ್ತಿತರರು ಹಾಜರಿದ್ದರು.
ಕಾರ್ಯಕ್ರಮದಲ್ಲಿ ಅರುಣ್ ಮತ್ತು ತಿರುಮಲಯ್ಯ ಸಂಘಟಿಗಾರು ಹೋರಾಟ ಗೀತೆಗಳನ್ನು ಹಾಡಿದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


