ಬೆಳಕವಾಡಿ: ಸಮೀಪದ ಒಕ್ಕರಹಳ್ಳಿ ವ್ಯಾಪ್ತಿಯ ಜಮೀನಿನ ತೋಟದ ಮನೆಯೊಂದರಲ್ಲಿ ಮಂಗಳವಾರ ರಾತ್ರಿ ಚಿರತೆಯೊಂದು ಸಾಕು ನಾಯಿಯ ಮೇಲೆ ದಾಳಿ ನಡೆಸಿ, ಅದನ್ನು ಕೊಂದು ಹಾಕಿದೆ.
ಅಂತರಾಯನಪುರ ದೊಡ್ಡಿ ಗ್ರಾಮದ ನಿವಾಸಿ ಶಿವಮೂರ್ತಿ ಎಂಬುವವರಿಗೆ ಸೇರಿದ ಜಮೀನಿನ ತೋಟದ ಮನೆಯಲ್ಲಿ ಈ ಘಟನೆ ನಡೆದಿದೆ. “ನಮ್ಮ ತೋಟದ ಮನೆಯಲ್ಲಿ ಸಾಕಲಾಗಿದ್ದ ನಾಯಿಗಳ ಪೈಕಿ ಇದುವರೆಗೆ ಒಟ್ಟು ಮೂರು ನಾಯಿಗಳನ್ನು ಚಿರತೆ ಕೊಂದು ಹಾಕಿದೆ. ಈ ಬಗ್ಗೆ ಈಗಾಗಲೇ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ” ಎಂದು ಶಿವಮೂರ್ತಿ ಅವರು ಬೇಸರ ವ್ಯಕ್ತಪಡಿಸಿದ್ದಾರೆ.
ಬಿಜಿಪುರ ಹೋಬಳಿಯ ಸುತ್ತಮುತ್ತಲಿನ ಭಾಗಗಳಲ್ಲಿ ಚಿರತೆ ಹಾವಳಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಮೇಕೆ, ಕುರಿ, ನಾಯಿ ಹಾಗೂ ಕರು ಸೇರಿದಂತೆ ತಮ್ಮ ಸಾಕು ಪ್ರಾಣಿಗಳನ್ನು ರಕ್ಷಿಸಿಕೊಳ್ಳುವುದು ಸ್ಥಳೀಯ ರೈತರಿಗೆ ಮತ್ತು ಗ್ರಾಮಸ್ಥರಿಗೆ ಕಷ್ಟಕರವಾಗಿ ಪರಿಣಮಿಸಿದೆ. ಸದ್ಯ ಸುತ್ತಮುತ್ತಲಿನ ಗ್ರಾಮಗಳಲ್ಲಿ ಭೀತಿಯ ವಾತಾವರಣ ನಿರ್ಮಾಣವಾಗಿದ್ದು, ಅರಣ್ಯ ಇಲಾಖೆಯ ಸಂಬಂಧಪಟ್ಟ ಅಧಿಕಾರಿಗಳು ತಕ್ಷಣವೇ ಕಾರ್ಯಪ್ರವೃತ್ತರಾಗಿ ಚಿರತೆಯನ್ನು ಸೆರೆಹಿಡಿಯಬೇಕು ಎಂದು ಗ್ರಾಮಸ್ಥರು ತೀವ್ರವಾಗಿ ಆಗ್ರಹಿಸಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


