ಪಾವಗಡ: ತಾಲೂಕಿನ ನಾಗಲಮಡಿಕೆ ಹೋಬಳಿಯ ರ್ಯಾಪ್ಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಪ್ಪಾಜಿಹಳ್ಳಿ ಗ್ರಾಮದಲ್ಲಿ ಸೋಮವಾರ ಮುಂಜಾನೆ ಸುರಿದ ಧಾರಾಕಾರ ಮಳೆ ಗ್ರಾಮಸ್ಥರನ್ನು ಬೆಚ್ಚಿಬೀಳಿಸಿದೆ. ಕೇವಲ ಮೂರು ಗಂಟೆಗಳ ಕಾಲ (ಬೆಳಗಿನ ಜಾವ 4 ರಿಂದ 6 ಗಂಟೆಯವರೆಗೆ) ಸುರಿದ ಭಾರಿ ಮಳೆಗೆ ಹಳ್ಳಕೊಳ್ಳಗಳು ತುಂಬಿ ತುಳುಕುತ್ತಿದ್ದು, ಗ್ರಾಮದಲ್ಲಿ ಸಂಚಾರ ಸಂಪೂರ್ಣವಾಗಿ ಕಡಿತಗೊಂಡಿದೆ.
ಅಪ್ಪಾಜಿಹಳ್ಳಿಯಿಂದ ಹೊರವಲಯದಲ್ಲಿರುವ ಮಿದ್ದಿ ಭಾಗಕ್ಕೆ ತೆರಳಲು ಸೂಕ್ತ ಸೇತುವೆ ವ್ಯವಸ್ಥೆ ಇಲ್ಲದಿರುವುದೇ ಈ ಎಲ್ಲಾ ಅವಾಂತರಗಳಿಗೆ ಕಾರಣವಾಗಿದೆ. ಪ್ರತಿ ಬಾರಿ ಮಳೆ ಬಂದಾಗಲೂ ಇದೇ ಪರಿಸ್ಥಿತಿ ಮರುಕಳಿಸುತ್ತಿದ್ದು, ಸ್ಥಳೀಯರು ಜೀವದ ಹಂಗು ತೊರೆದು ಹಳ್ಳ ದಾಟಬೇಕಾದ ಅನಿವಾರ್ಯತೆ ಎದುರಾಗಿದೆ. ವ್ಯವಸ್ಥೆಯ ವಿರುದ್ಧ ಗ್ರಾಮಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಳೆಯ ಆರ್ಭಟದಿಂದಾಗಿ ಶಾಲಾ–ಕಾಲೇಜುಗಳಿಗೆ ತೆರಳಬೇಕಾದ ವಿದ್ಯಾರ್ಥಿಗಳು ಹಾಗೂ ದಿನನಿತ್ಯದ ಕೆಲಸಗಳಿಗೆ ಹೊರಡುವ ಸಾರ್ವಜನಿಕರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ರಭಸವಾಗಿ ಹರಿಯುತ್ತಿರುವ ನೀರಿನಲ್ಲಿ ವೃದ್ಧರನ್ನು ಯುವಕರು ಕೈಹಿಡಿದು, ಹೊತ್ತು ದಾಟಿಸುತ್ತಿರುವ ಶೋಚನೀಯ ದೃಶ್ಯಗಳು ಗ್ರಾಮದಲ್ಲಿ ಕಂಡುಬಂದವು.
ಇಷ್ಟೇ ಅಲ್ಲದೆ, ಮಿದ್ದಿ ಭಾಗದಲ್ಲಿರುವ ಸುಮಾರು 20ಕ್ಕೂ ಹೆಚ್ಚು ಮನೆಗಳಿಗೆ ಕನಿಷ್ಠ ಕುಡಿಯುವ ನೀರು ಮತ್ತು ವಿದ್ಯುತ್ ಸೌಲಭ್ಯಗಳು ಸಹ ಸಮರ್ಪಕವಾಗಿ ಲಭ್ಯವಿಲ್ಲ. ಈ ಬಗ್ಗೆ ಹಲವು ಬಾರಿ ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಗ್ರಾಮಸ್ಥರು ಅಸಮಾಧಾನ ಹೊರಹಾಕಿದ್ದಾರೆ.
ಇನ್ನು ಅಪ್ಪಾಜಿಹಳ್ಳಿ ಮತ್ತು ಹುಸೇನ್ಪುರ ಪ್ರದೇಶಗಳಲ್ಲಿ ಸುರಿದ ಮಳೆಯ ನೀರು ಬುಗುಡೂರು ಕೆರೆಯ ಮೂಲಕ ನಾಗಲಮಡಿಕೆ ಡ್ಯಾಂಗೆ ಸೇರುತ್ತಿದೆ ಎಂದು ತಿಳಿದುಬಂದಿದೆ. ಇನ್ನಾದರೂ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಎಚ್ಚೆತ್ತುಕೊಂಡು ಇಲ್ಲಿನ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಬೇಕಿದೆ.
ವರದಿ: ನಂದೀಶ್ ನಾಯ್ಕ, ಪಾವಗಡ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


