ಬೆಂಗಳೂರು: ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಅವರಿಗೆ ಬಿಜೆಪಿ ರಾಜ್ಯಸಭೆ ಟಿಕೆಟ್ ನೀಡದ ಹಿನ್ನೆಲೆಯಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿಯಲ್ಲಿ ಯಾವುದೇ ಭಿನ್ನಾಭಿಪ್ರಾಯ ಮೂಡಿಲ್ಲ ಎಂದು ಜೆಡಿಎಸ್ ಶಾಸಕಾಂಗ ನಾಯಕ ಸುರೇಶ್ ಬಾಬು ಸ್ಪಷ್ಟಪಡಿಸಿದ್ದಾರೆ.
ವಿಧಾನಸೌಧದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, “ದೇವೇಗೌಡರಿಗೆ ರಾಜ್ಯಸಭೆ ಟಿಕೆಟ್ ಕೊಡಿ ಎಂದು ನಾವು ಬಿಜೆಪಿ ನಾಯಕರಲ್ಲಿ ಕೇಳಿರಲಿಲ್ಲ. ಜನರಿಗಾಗಿ ಧ್ವನಿ ಎತ್ತಲು ದೇವೇಗೌಡರು ಮತ್ತೊಮ್ಮೆ ರಾಜ್ಯಸಭೆಗೆ ಹೋಗಬೇಕು ಎಂಬುದು ಕೇವಲ ಜನರ ಆಶಯವಾಗಿತ್ತು. ನಾವು ಅಧಿಕೃತವಾಗಿ ಸೀಟು ಕೇಳದೇ ಇರುವುದರಿಂದ ನಮಗೆ ಯಾವುದೇ ಅಸಮಾಧಾನವಿಲ್ಲ” ಎಂದಿದ್ದಾರೆ.
“ನಾವು ಸೀಟು ಕೇಳಿ, ಅವರು ಕೊಡದೇ ಇದ್ದಿದ್ದರೆ ಬೇಸರ ಮಾಡಿಕೊಳ್ಳಲು ಕಾರಣ ಇರುತ್ತಿತ್ತು. ಆದರೆ ಇಲ್ಲಿ ಆ ಪ್ರಶ್ನೆಯೇ ಬಾರದು. ಹೀಗಾಗಿ ಬಿಜೆಪಿ–ಜೆಡಿಎಸ್ ಮೈತ್ರಿಗೆ ಯಾವುದೇ ರೀತಿಯ ಸಮಸ್ಯೆಯಾಗುವುದಿಲ್ಲ” ಅಂತಾ ತಿಳಿಸಿದ್ದಾರೆ.
“ನಮ್ಮ ಮೈತ್ರಿ ಕೇವಲ ಇಂದಿಗೆ ಸೀಮಿತವಾಗಿಲ್ಲ. ಮುಂಬರುವ 2028ರ ವಿಧಾನಸಭಾ ಚುನಾವಣೆಯಲ್ಲೂ ಬಿಜೆಪಿ ಮತ್ತು ಜೆಡಿಎಸ್ ಎರಡೂ ಪಕ್ಷಗಳು ಒಟ್ಟಾಗಿಯೇ ಮುನ್ನಡೆಯಲಿವೆ” ಎಂದು ಸುರೇಶ್ ಬಾಬು ವಿಶ್ವಾಸ ವ್ಯಕ್ತಪಡಿಸಿದರು.
ರಾಜ್ಯಸಭೆ ಟಿಕೆಟ್ ಹಂಚಿಕೆ ಪ್ರಕ್ರಿಯೆಯ ನಂತರ ಮೈತ್ರಿಕೂಟದಲ್ಲಿ ಬಿರುಕು ಮೂಡಬಹುದು ಎಂಬ ಚರ್ಚೆಗಳಿಗೆ ಜೆಡಿಎಸ್ ಶಾಸಕಾಂಗ ನಾಯಕರ ಈ ಹೇಳಿಕೆ ಸಂಪೂರ್ಣ ಸ್ಪಷ್ಟನೆ ನೀಡಿದಂತಾಗಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


