ಬೆಂಗಳೂರು: ಬೆಂಗಳೂರಿನ ಕಸದ ಟೆಂಡರ್‌ನಲ್ಲಿ 10 ಸಾವಿರ ಕೋಟಿ ರೂಪಾಯಿ ಕಿಕ್ ಬ್ಯಾಕ್ ನಡೆದಿದೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ನಡುವಿನ ವಾಕ್ಸಮರ ತೀವ್ರಗೊಂಡಿದೆ.
ಇತ್ತೀಚೆಗೆ ಸಿಎಂ ಡಿ.ಕೆ. ಶಿವಕುಮಾರ್ ಅವರು, “ಆರ್. ಅಶೋಕ್ ಅವರು ಕಸದ ಮಾಫಿಯಾ ಗ್ಯಾಂಗ್‌ನ ವಕ್ತಾರರಂತೆ ಮಾತನಾಡುತ್ತಿದ್ದಾರೆ. ನಾನು ಸಿಎಂ ಆಗಿರುವುದನ್ನು ಸಹಿಸಲಾಗದೇ ಅಸೂಯೆ ರಾಜಕೀಯ ಮಾಡುತ್ತಿದ್ದಾರೆ” ಎಂದು ವಾಗ್ದಾಳಿ ನಡೆಸಿದ್ದರು. ಈ ಹೇಳಿಕೆಗೆ ಆರ್. ಅಶೋಕ್ ಅವರು ಸಾಮಾಜಿಕ ಜಾಲತಾಣ ‘ಎಕ್ಸ್’ (ಟ್ವಿಟರ್) ಮೂಲಕ ಕಡಕ್ ಆಗಿ ತಿರುಗೇಟು ನೀಡಿದ್ದಾರೆ.
ಡಿ.ಕೆ. ಶಿವಕುಮಾರ್ ಅವರಿಗೆ ನೇರ ಸವಾಲು ಹಾಕಿರುವ ಅಶೋಕ್, “ಸಿಎಂ ಡಿ.ಕೆ. ಶಿವಕುಮಾರ್ ಅವರೇ, ಹೌದು, ನಾನು ಏಜೆಂಟ್ ಆಗಿಯೇ ಮಾತನಾಡುತ್ತಿದ್ದೇನೆ! ಆದರೆ ನಿಮ್ಮ ತರಹ ಯಾವುದೋ ‘ಮಾಫಿಯಾ’ ಹಿತಾಸಕ್ತಿ ಕಾಯುವ ಕಮಿಷನ್ ಏಜೆಂಟ್ ಆಗಿ ಅಲ್ಲ. ಕರ್ನಾಟಕದ ಏಳೂವರೆ ಕೋಟಿ ಕನ್ನಡಿಗರ ಹಕ್ಕಿಗಾಗಿ, ಬೆಂಗಳೂರಿನ ಒಂದೂವರೆ ಕೋಟಿ ನಾಗರಿಕರ ಧ್ವನಿಯಾಗಿ ನಿಂತಿರುವ ಜನತಾ ಏಜೆಂಟ್ ನಾನು. ವಿಪಕ್ಷ ನಾಯಕನಾಗಿ ನಿಮ್ಮ ಲೂಟಿ-ದಂದೆಯನ್ನು ಪ್ರಶ್ನಿಸುವುದು ನನ್ನ ಸಂವಿಧಾನಬದ್ಧ ಕರ್ತವ್ಯ, ಅದಕ್ಕೆ ಯಾರ ಅಪ್ಪಣೆಯೂ ಬೇಕಿಲ್ಲ” ಎಂದು ಕಿಡಿಕಾರಿದ್ದಾರೆ.
“ಹೈಕಮಾಂಡ್ ಬಾಗಿಲಲ್ಲಿ ಕಾಡಿ-ಬೇಡಿ, ಅತ್ತು-ಕರೆದು, ಕೊನೆಗೂ ಸಿಎಂ ಸೀಟು ಗಿಟ್ಟಿಸಿಕೊಂಡಿರುವ ತಮಗೆ ವಿಪಕ್ಷಗಳು ಕನಿಷ್ಠ ‘ಹನಿಮೂನ್ ಪೀರಿಯಡ್’ ಕೂಡ ಕೊಡ್ತಿಲ್ಲವಲ್ಲ ಅನ್ನೋ ಹತಾಶೆ, ಭಯ, ಆತಂಕ ನನಗೆ ಅರ್ಥವಾಗುತ್ತದೆ. ಆದರೆ ನಿಮ್ಮ ಸ್ವಂತ ಪಕ್ಷದ ಶಾಸಕರೇ ದಿನಬೆಳಗಾದರೆ ಮಾಧ್ಯಮಗಳ ಮುಂದೆ ನಿಮ್ಮ ವಿರುದ್ಧ ಅಸಮಾಧಾನದ ಜಾಗಟೆ ಬಾರಿಸುತ್ತಾ, ದೆಹಲಿಗೆ ದಂಡೆತ್ತಿ ಹೋಗುತ್ತಿರುವಾಗ ನಿಮಗೆ ಹನಿಮೂನ್ ಪೀರಿಯಡ್ ಎಲ್ಲಿಂದ ಸಿಗಬೇಕು? ನಿಮ್ಮ ಮನೆಯಲ್ಲೇ ಬೆಂಕಿ ಉರಿಯುತ್ತಿರುವಾಗ ನನ್ನ ಮೇಲೆ ರಾಜಕೀಯ ಗೂಬೆ ಕೂರಿಸಬೇಡಿ” ಎಂದು ಲೇವಡಿ ಮಾಡಿದ್ದಾರೆ.
“ನಮ್ಮ ಪಾರದರ್ಶಕತೆ, ಕಾರ್ಯವೈಖರಿ ಸಹಿಸಲು ಅವರಿಂದ ಸಾಧ್ಯವಾಗುತ್ತಿಲ್ಲ ಎಂಬ ನಿಮ್ಮ ಹೇಳಿಕೆ ಶತಮಾನದ ಅತಿ ದೊಡ್ಡ ಹಾಸ್ಯ! ನಿಮ್ಮ ಹಿನ್ನೆಲೆ ಏನು, ನಿಮ್ಮ ಆಡಳಿತ ವೈಖರಿಯ ಅಸಲಿ ಚರಿತ್ರೆ ಏನು, ತಾವು ಕಟ್ಟಿಕೊಂಡಿರುವ ಪಾರದರ್ಶಕ ಸಾಮ್ರಾಜ್ಯ ಎಂಥದ್ದು ಎಂಬುದು ಇಡೀ ಕರ್ನಾಟಕಕ್ಕೆ ಗೊತ್ತಿದೆ. ನಿಮ್ಮಿಂದ ಪಾರದರ್ಶಕತೆಯ ಪಾಠ ಕಲಿಯುವ ದೌರ್ಭಾಗ್ಯ ಕನ್ನಡಿಗರಿಗಿಲ್ಲ” ಎಂದು ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಟೆಂಡರ್ ನಿಯಮಗಳ ಅಕ್ರಮವನ್ನು ಮುಚ್ಚಿಹಾಕಲು ನೀವೇ ಸ್ವತಃ ಉನ್ನತ ಮಟ್ಟದ ಸಮಿತಿ ರಚಿಸಿ, ವರದಿ ನೀಡಲು ಕೊಟ್ಟಿದ್ದ ಒಂದು ವಾರದ ಗಡುವು ಇಂದಿಗೆ ಮುಕ್ತಾಯವಾಗಿದೆ. “ತಾಕತ್ತಿದ್ದರೆ, ನಿಮ್ಮಲ್ಲಿ ಕಿಂಚಿತ್ತಾದರೂ ಪಾರದರ್ಶಕತೆ ಉಳಿದಿದ್ದರೆ, ಆ ವರದಿಯನ್ನು ಅಡಗಿಸಿಡದೆ ತಕ್ಷಣ ಬಹಿರಂಗಪಡಿಸಿ! ವರದಿಯನ್ನು ಇಡೀ ರಾಜ್ಯದ ಜನರ ಮುಂದಿಡಿ. ನಿಮ್ಮ ಅಸಲಿ ಮುಖವಾಡ ಕಳಚಿ ಬೀಳಲಿ, ಯಾರ ಕಾರ್ಯವೈಖರಿ ಎಂಥದ್ದು ಅಂತ ಜನರೇ ತೀರ್ಮಾನಿಸಲಿ” ಎಂದು ಆರ್. ಅಶೋಕ್ ಸಿಎಂ ಅವರಿಗೆ ಮುಖಾಮುಖಿ ಸವಾಲು ಹಾಕಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


