ಚಿಕ್ಕನಾಯಕನಹಳ್ಳಿ: “ನಮ್ಮ ಕ್ಷೇತ್ರದ ಪ್ರತಿ ಮನೆಯಲ್ಲೂ ಒಬ್ಬೊಬ್ಬರು ಉತ್ತಮ ಉನ್ನತ ಸ್ಥಾನಕ್ಕೇರಬೇಕು ಎಂಬ ಉದಾತ್ತ ಉದ್ದೇಶದಿಂದ, ಸಮಾಜದ ಸಮಾನ ಮನಸ್ಕರೆಲ್ಲರೂ ಒಂದಾಗಿ ಎಸ್.ಬಿ. ಚಾರಿಟಬಲ್ ಟ್ರಸ್ಟ್ ವತಿಯಿಂದ ಉಚಿತ ಸಿಇಟಿ, ನೀಟ್ ಹಾಗೂ ಜೆಇಇ ತರಬೇತಿಯನ್ನು ಆಯೋಜಿಸಲಾಗಿದೆ” ಎಂದು ಶಾಸಕ ಸಿ.ಬಿ. ಸುರೇಶ್ ಬಾಬು ತಿಳಿಸಿದರು.
ಪಟ್ಟಣದ ತಮ್ಮ ಗೃಹ ಕಚೇರಿಯಲ್ಲಿ ಸಿಇಟಿ ಫಲಿತಾಂಶದ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡಿ ಮಾತನಾಡಿದ ಅವರು, ಪಕ್ಷಾತೀತ ಹಾಗೂ ಜಾತ್ಯಾತೀತವಾಗಿ ಕ್ಷೇತ್ರದ ಗ್ರಾಮೀಣ ಮತ್ತು ನಗರ ಭಾಗದ ಮಕ್ಕಳ ಭವಿಷ್ಯಕ್ಕಾಗಿ ಈ ‘ಜ್ಞಾನಕಲ್ಪ’ ಉಚಿತ ತರಬೇತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ಟ್ರಸ್ಟ್‌ನ ಉಚಿತ ತರಬೇತಿಯ ಫಲವಾಗಿ ಈ ಬಾರಿ ಸರ್ಕಾರಿ ಕೋಟಾದಡಿ ಇನ್ನು ಹೆಚ್ಚಿನ ವಿದ್ಯಾರ್ಥಿಗಳು ಸೀಟು ಪಡೆಯಲಿದ್ದಾರೆ ಎಂದು ಶಾಸಕರು ವಿಶ್ವಾಸ ವ್ಯಕ್ತಪಡಿಸಿದರು. ಸಾಧನೆಯ ವಿವರಗಳು ಹೀಗಿವೆ:
ಒಟ್ಟು ತರಬೇತಿ ಪಡೆದ 313 ವಿದ್ಯಾರ್ಥಿಗಳಲ್ಲಿ ಎಂಜಿನಿಯರಿಂಗ್‌ಗೆ 49, ಬಿ.ಎಸ್ಸಿ ನರ್ಸಿಂಗ್‌ಗೆ 29, ಬಿ.ಎಸ್ಸಿ ಅಗ್ರಿಕಲ್ಚರ್‌ಗೆ 3, ಬಿ.ಫಾರ್ಮಸಿಗೆ 7, ಬಿ.ಎಸ್ಸಿ ಅನಸ್ತೇಷಿಯಾಗೆ 2 ಹಾಗೂ ಬಿ.ಎಸ್ಸಿ ಎಎಸ್‌ಎಸ್‌ಗೆ ಒಬ್ಬರು ವಿದ್ಯಾರ್ಥಿಗಳು ಆಯ್ಕೆಯಾಗಿದ್ದರು.
ಈ ಬಾರಿ ತರಬೇತಿ ಪಡೆದ ಒಟ್ಟು 421 ವಿದ್ಯಾರ್ಥಿಗಳಲ್ಲಿ 75 ಜನ ವಿದ್ಯಾರ್ಥಿಗಳು ಎಂಜಿನಿಯರಿಂಗ್ ವಿಭಾಗದಲ್ಲಿ ಅತ್ಯುತ್ತಮ ರ‍್ಯಾಂಕಿಂಗ್ ಪಡೆದಿದ್ದಾರೆ. ಇದರಲ್ಲಿ 21 ವಿದ್ಯಾರ್ಥಿಗಳು 50 ಸಾವಿರದೊಳಗಿನ ರ‍್ಯಾಂಕ್ ಗಳಿಸಿದ್ದಾರೆ. ಇನ್ನು ಕೃಷಿ ಪ್ರಾಯೋಗಿಕ ಪರೀಕ್ಷೆಯಲ್ಲಿ (Agriculture Practical) 15 ವಿದ್ಯಾರ್ಥಿಗಳು ಅತ್ಯುತ್ತಮ ರ‍್ಯಾಂಕ್ ಪಡೆದಿದ್ದಾರೆ.
ಅದೇ ರೀತಿ ಈ ಬಾರಿಯೂ ನರ್ಸಿಂಗ್, ಅನಸ್ತೇಷಿಯಾ ಸೇರಿದಂತೆ ಇತರೆ ವೃತ್ತಿಪರ ಕೋರ್ಸ್‌ಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಆಯ್ಕೆಯಾಗುವ ನಿರೀಕ್ಷೆ ಇದೆ ಎಂದು ಅವರು ತಿಳಿಸಿದರು.
“ನಮ್ಮ ತಂಡವು ಯಾವುದೇ ಸ್ವಾರ್ಥವಿಲ್ಲದೆ ಈ ಉಚಿತ ತರಬೇತಿಯನ್ನು ನೀಡುತ್ತಿದೆ. ಕಳೆದ ವರ್ಷದಿಂದ ಪ್ರಥಮ ಪಿಯುಸಿಯಿಂದಲೇ ತರಬೇತಿ ನೀಡುತ್ತಿರುವುದರಿಂದ, ಈ ಬಾರಿ ದ್ವಿತೀಯ ಪಿಯುಸಿ ಮುಗಿಸಿದ ವಿದ್ಯಾರ್ಥಿಗಳಿಗೆ ಬಹಳ ಅನುಕೂಲವಾಗಿದೆ. ಮುಂದಿನ ದಿನಗಳಲ್ಲಿ ಗ್ರಾಮೀಣ ಭಾಗದ ಮತ್ತಷ್ಟು ವಿದ್ಯಾರ್ಥಿಗಳು ತಾಂತ್ರಿಕ ಹಾಗೂ ವೃತ್ತಿಪರ ಕೋರ್ಸ್‌ಗಳಿಗೆ ಪ್ರವೇಶ ಪಡೆಯಲಿದ್ದಾರೆ.”
— ಸಿ.ಬಿ. ಸುರೇಶ್ ಬಾಬು, ಶಾಸಕರು
ಇತರ ಸ್ಪರ್ಧಾತ್ಮಕ ಪರೀಕ್ಷೆಗಳಿಗೂ ಉಚಿತ ತರಬೇತಿ:
ಕೇವಲ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಿಗೆ ಮಾತ್ರವಲ್ಲದೆ, ಬಿ.ಕಾಂ ಮತ್ತು ಬಿ.ಎ ಪದವಿ ವಿದ್ಯಾರ್ಥಿಗಳಿಗೂ ಟ್ರಸ್ಟ್ ವತಿಯಿಂದ ನೆರವು ನೀಡಲಾಗುವುದು. ಮುಂದಿನ ದಿನಗಳಲ್ಲಿ ಎಸ್‌ಡಿಎ (SDA), ಎಫ್‌ಡಿಎ (FDA), ಕೆಎಎಸ್ (KAS) ಸೇರಿದಂತೆ ಇತರೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೂ ನಮ್ಮ ಟ್ರಸ್ಟ್‌ನಿಂದ ಉಚಿತವಾಗಿ ತರಬೇತಿ ನೀಡಲಾಗುವುದು ಎಂದು ಶಾಸಕರು ಇದೇ ವೇಳೆ ಪ್ರಕಟಿಸಿದರು.
ಈ ಪತ್ರಿಕಾಗೋಷ್ಠಿಯಲ್ಲಿ ಉಚಿತ ಸಿಇಟಿ ನೀಟ್ ತರಬೇತಿ ಸಮಿತಿಯ ಅಧ್ಯಕ್ಷ ನಾಗರಾಜು, ಸದಸ್ಯರುಗಳಾದ ಸೋಮಶೇಖರ್, ಜಾಕೀರ್, ಎಂ.ಎಸ್. ರವಿಕುಮಾರ್, ಕುಮಾರ್ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.
ವರದಿ: ಮಂಜುಸ್ವಾಮಿ ಎಂ.ಎನ್.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


