ಬಳ್ಳಾರಿ: ಜಿಲ್ಲಾಧಿಕಾರಿಯವರ ನಿರ್ದೇಶನದ ಮೇರೆಗೆ ಕುರುಗೋಡು ತಾಲೂಕು ಮಟ್ಟದಲ್ಲಿ ವಿಶ್ವ ಬಾಲಕಾರ್ಮಿಕ ಪದ್ಧತಿ ವಿರೋಧಿ ದಿನಾಚರಣೆ ಅಂಗವಾಗಿ ಶಾಲಾ ಮಕ್ಕಳಿಂದ ಬೃಹತ್ ಜಾಗೃತಿ ಜಾಥಾ ಮತ್ತು ವೇದಿಕೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಕುರುಗೋಡು ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಹಮ್ಮಿಕೊಳ್ಳಲಾಗಿದ್ದ ಶಾಲಾ ಮಕ್ಕಳ ಜಾಗೃತಿ ಜಾಥಾ ಕಾರ್ಯಕ್ರಮಕ್ಕೆ ಗ್ರೇಡ್-2 ತಹಶೀಲ್ದಾರ ಮಲ್ಲೇಶಪ್ಪ ಅವರು ಹಸಿರು ನಿಶಾನೆ ತೋರುವುದರ ಮೂಲಕ ಚಾಲನೆ ನೀಡಿದರು.
ಜಾಥಾದ ನಂತರ ಹಮ್ಮಿಕೊಳ್ಳಲಾಗಿದ್ದ ವೇದಿಕೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ತಾಪಂ ಸಹಾಯಕ ನಿರ್ದೇಶಕ ಶಿವರಾಮ ರೆಡ್ಡಿ ಅವರು, ಮಕ್ಕಳು ಸಮಾಜಮುಖಿ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದರ ಜೊತೆಗೆ ತಮ್ಮಲ್ಲಿರುವ ಸುಪ್ತ ಪ್ರತಿಭೆಗಳನ್ನು ಪ್ರದರ್ಶಿಸಬೇಕು. ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಂಡು ತಮ್ಮ ಜೀವನವನ್ನು ಉತ್ತಮಪಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಕಾರ್ಮಿಕ ನಿರೀಕ್ಷಕ ಪರಶುರಾಮ್ ಅವರು ಮಾತನಾಡಿ, ಕುರುಗೋಡು ತಾಲೂಕಿನಲ್ಲಿ ಎಲ್ಲಾದರೂ ಶಾಲೆ ಬಿಟ್ಟ ಮಕ್ಕಳು ಅಥವಾ ಬಾಲಕಾರ್ಮಿಕರಾಗಿ ದುಡಿಯುತ್ತಿರುವ ಮಕ್ಕಳು ಕಂಡುಬಂದಲ್ಲಿ ತಕ್ಷಣವೇ 1098 ಉಚಿತ ಸಹಾಯವಾಣಿಗೆ ಮಾಹಿತಿ ನೀಡಬೇಕು. ಇದರಿಂದ ಅಂತಹ ಮಕ್ಕಳನ್ನು ರಕ್ಷಿಸಿ, ಅವರಿಗೆ ಮರುಶಿಕ್ಷಣ ನೀಡಿ ಮುಖ್ಯವಾಹಿನಿಗೆ ತರಲು ಅನುಕೂಲವಾಗುತ್ತದೆ ಎಂದು ತಿಳಿಸಿದರು.
ಇದೇ ವೇಳೆ ಜಿಲ್ಲಾ ಬಾಲ ಕಾರ್ಮಿಕ ಯೋಜನೆಯ ಯೋಜನಾ ನಿರ್ದೇಶಕ ಎ.ಮೌನೇಶ್ ಅವರು ವಿಶ್ವ ಬಾಲಕಾರ್ಮಿಕ ಪದ್ಧತಿ ಆಚರಣೆಯ ಮಹತ್ವದ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು.
ಉದ್ದಿಮೆಗಳ ಮೇಲೆ ಆಕಸ್ಮಿಕ ದಾಳಿ: ಬಾಲಕನ ರಕ್ಷಣೆ
ದಿನಾಚರಣೆಯ ಅಂಗವಾಗಿ ಪಟ್ಟಣದ ಪ್ರಮುಖ ಬೀದಿಗಳಲ್ಲಿದ್ದ ಉದ್ದಿಮೆಗಳ ಮೇಲೆ ಅಧಿಕಾರಿಗಳ ತಂಡ ಆಕಸ್ಮಿಕ ದಾಳಿ ನಡೆಸಿತು. ಈ ವೇಳೆ ಸ್ಥಳೀಯ ‘ದಾದಾ ವರ್ಕ್ಶಾಪ್’ನಲ್ಲಿ ಬಾಲಕನೊಬ್ಬ ಕೆಲಸ ಮಾಡುತ್ತಿರುವುದು ಪತ್ತೆಯಾಗಿದ್ದು, ಅಧಿಕಾರಿಗಳು ತಕ್ಷಣವೇ ಮಗುವನ್ನು ರಕ್ಷಿಸಿದ್ದಾರೆ. ರಕ್ಷಿಸಲ್ಪಟ್ಟ ಬಾಲಕನನ್ನು ಮುಷ್ಟಗಟ್ಟೆ ಗ್ರಾಮದಲ್ಲಿರುವ ಮೊರಾರ್ಜಿ ವಸತಿ ಶಾಲೆಗೆ ದಾಖಲಿಸಿ, ಶಿಕ್ಷಣ ಮುಂದುವರಿಸಲು ಕ್ರಮ ಕೈಗೊಳ್ಳಲಾಗಿದೆ.
ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿ ಜಡೇಶ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಮೇಲ್ವಿಚಾರಕರಾದ ಮಂಜುಳಾ, ಮಕ್ಕಳ ರಕ್ಷಣಾ ಘಟಕದ ಸಿಬ್ಬಂದಿ ವೀರೇಶ್, ಮಕ್ಕಳ ಸಹಾಯವಾಣಿಯ ಕಾರ್ತಿಕ್, ರೀಡ್ಸ್ ಸಂಸ್ಥೆಯ ಸಿಬ್ಬಂದಿ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಮತ್ತು ಸಾರ್ವಜನಿಕರು ಉಪಸ್ಥಿತರಿದ್ದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


