ಕೂಡ್ಲಿಗಿ (ವಿಜಯನಗರ): “ದೇಶ ಸೇವೆಯೇ ಈಶ ಸೇವೆ ಎಂಬ ನಾಣ್ಣುಡಿಯನ್ನು ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಮನಗಾಣಬೇಕಾಗಿದೆ” ಎಂದು ಮಾಜಿ ಸೈನಿಕ ಕಾಟೇರ ರಮೇಶ್ ಕರೆ ನೀಡಿದರು.
ಜುಲೈ 26ರಂದು ಪಟ್ಟಣದ ಬಿಸಿಎಂ ಬಾಲಕಿಯರ ಹಾಸ್ಟೆಲ್‌ನಲ್ಲಿ ಹಮ್ಮಿಕೊಳ್ಳಲಾಗಿದ್ದ ‘ಕಾರ್ಗಿಲ್ ವಿಜಯ ದಿವಸ’ ಕಾರ್ಯಕ್ರಮದಲ್ಲಿ ಅವರು ಮುಖ್ಯ ವಕ್ತಾರರಾಗಿ ಭಾಗವಹಿಸಿ ಮಾತನಾಡಿದರು.
“ನಮ್ಮೆಲ್ಲರಿಗೂ ಒಂದೇ ದೇವರು, ಅದುವೇ ನಮ್ಮ ದೇಶ. ದೇಶ ಸೇವೆಯಲ್ಲಿಯೇ ನಿಜವಾದ ದೇವರ ಸೇವೆಯಿದೆ. ಸೈನಿಕನಾಗುವುದು ಒಂದೇ ದೇಶಸೇವೆಯಲ್ಲ; ಸಾಮಾಜಿಕ ಸೇವೆ, ಜನಪರ ಕಾರ್ಯಗಳು ಹಾಗೂ ಸರ್ಕಾರಿ ಹುದ್ದೆಯಲ್ಲಿದ್ದು ನಿಷ್ಠೆ-ಪ್ರಾಮಾಣಿಕತೆಯಿಂದ ಕರ್ತವ್ಯ ನಿರ್ವಹಿಸುವುದೂ ಕೂಡ ದೇಶಸೇವೆಯೇ ಆಗಿದೆ. ದೇಶ ನಮಗೆ ಏನು ಕೊಟ್ಟಿದೆ ಎನ್ನುವುದಕ್ಕಿಂತ, ದೇಶಕ್ಕಾಗಿ ನಾವೇನು ಕೊಡುಗೆ ನೀಡಿದ್ದೇವೆ ಎಂಬುದು ಮುಖ್ಯ” ಎಂದು ಅವರು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ಹಾಸ್ಟೆಲ್ ವಿದ್ಯಾರ್ಥಿನಿಯರು ಹಾಗೂ ಗಣ್ಯರು ಸೇರಿ ಭಾರತಮಾತೆಯ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಪುಷ್ಪನಮನ ಗೈದರು. ನಂತರ ಉರಿಯುವ ಮೇಣದಬತ್ತಿಗಳನ್ನು ಹಿಡಿದು ಕೆಲಕಾಲ ಮೌನಾಚರಣೆ ಮಾಡುವ ಮೂಲಕ, ಯುದ್ಧದಲ್ಲಿ ವೀರಮರಣವನ್ನಪ್ಪಿದ ವೀರ ಯೋಧರ ತ್ಯಾಗ ಮತ್ತು ಬಲಿದಾನಗಳನ್ನು ಸ್ಮರಿಸಿ ಗೌರವ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಮತ್ತೋರ್ವ ಮಾಜಿ ಸೈನಿಕ ಮಂಜುನಾಥ್, ಹಾಸ್ಟೆಲ್ ವಾರ್ಡನ್ ಕೊಟ್ರಮ್ಮ, ಕರವೇ ಅಧ್ಯಕ್ಷ ಕಾಟೇರ ಹಾಲೇಶ್, ಹಾಗೂ ಉಪನ್ಯಾಸಕ ವಿಕಾಸ್ (ವಿವೇಕಾನಂದ) ಮಾತನಾಡಿದರು.
ಕಾರ್ಯಕ್ರಮದಲ್ಲಿ ಶಿಕ್ಷಕರಾದ ಜಯಣ್ಣ, ಶಿಕ್ಷಕಿಯರಾದ ಮಂಜುಳಾ ಹಾಗೂ ಸರಸ್ವತಿ, ಮಹಿಳಾ ವಕೀಲೆ ಇಂದ್ರಮ್ಮ, ಪತ್ರಕರ್ತ ಗುನ್ನಳ್ಳಿ ಶ್ರೀಧರ, ಸಾಮಾಜಿಕ ಹೋರಾಟಗಾರ ಎನ್. ಅರ್ಜುನ್ ಸೇರಿದಂತೆ ಹಾಸ್ಟೆಲ್ ಸಿಬ್ಬಂದಿ ಹಾಗೂ ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.
ವರದಿ: ವಿ.ಜಿ. ವೃಷಭೇಂದ್ರ, ಕೂಡ್ಲಿಗಿ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC
