ಕೊರಟಗೆರೆ: ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಪೂಜ್ಯ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ನೇತೃತ್ವದಲ್ಲಿ ಹಳ್ಳಿಗಳ ಸರ್ವಾಂಗೀಣ ಪ್ರಗತಿಗೆ ಮಹತ್ವದ ಕೊಡುಗೆ ನೀಡುತ್ತಿದೆ. ಬಡವರಿಗೆ ಆಸರೆಯಾಗಿ, ದೇವಾಲಯಗಳ ಜೀರ್ಣೋದ್ದಾರ ಮಾಡುವ ಮೂಲಕ ಸಮಾಜಕ್ಕೆ ಮಾದರಿಯಾಗಿದೆ ಎಂದು ಸಿದ್ಧರಬೆಟ್ಟದ ಶ್ರೀ ವೀರಭದ್ರ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು.
ತಾಲೂಕಿನ ಹೊಳವನಹಳ್ಳಿ ಹೋಬಳಿಯ ಅಕ್ಕಿರಾಂಪುರ ಗ್ರಾಮದ ಶ್ರೀ ಲಕ್ಷ್ಮೀ ವೆಂಕಟರಮಣ ಸ್ವಾಮಿ (ಕರಿ ತಿಮ್ಮಪ್ಪ) ದೇವಸ್ಥಾನದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸಂಸ್ಥೆಯಿಂದ ಶುಕ್ರವಾರ ಆಯೋಜಿಸಿದ್ದ ಸಾಮೂಹಿಕ ಶ್ರೀ ಲಕ್ಷ್ಮೀ ಪೂಜೆ ಹಾಗೂ ಧಾರ್ಮಿಕ ಸಭಾ ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
ಸ್ವಾಮೀಜಿ ಅವರು ಮಾತನಾಡಿ, “ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸಂಸ್ಥೆಯು ಸಮಾಜದ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸುತ್ತಿದೆ. ಗ್ರಾಮೀಣ ಭಾಗದ ಜನರಿಗೆ ಆರ್ಥಿಕ, ಶೈತ್ರಿಕ ಹಾಗೂ ಸಾಮಾಜಿಕವಾಗಿ ಆಸರೆಯಾಗಿರುವ ಈ ಸಂಸ್ಥೆಯ ಸೇವೆ ನಿಜಕ್ಕೂ ಅನುಕರಣೀಯ. ಇಂತಹ ಸಂಸ್ಥೆಗಳ ಪ್ರೋತ್ಸಾಹದಿಂದಲೇ ನಮ್ಮ ಹಳ್ಳಿಗಳು ಮತ್ತು ಪುರಾತನ ದೇವಾಲಯಗಳು ಉಳಿದು ಬೆಳೆಯುತ್ತಿವೆ” ಎಂದು ಹರ್ಷ ವ್ಯಕ್ತಪಡಿಸಿದರು.
ಮನೆ ಬಾಗಿಲಿಗೆ ಬ್ಯಾಂಕಿಂಗ್ ಸೇವೆ:
ಸಂಸ್ಥೆಯ ಜಿಲ್ಲಾ ನಿರ್ದೇಶಕ ಪ್ರವೀಣ್ ಕುಮಾರ್ ಮಾತನಾಡಿ, “ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಯೋಜನೆ ತಲುಪಿದೆ. ರಾಷ್ಟ್ರ ಮಟ್ಟದ 6 ಪ್ರಮುಖ ಬ್ಯಾಂಕ್ಗಳಲ್ಲಿ ಸೇವಾ ಪ್ರತಿನಿಧಿಯಾಗಿ ಕಾರ್ಯನಿರ್ವಹಿಸುತ್ತಿದ್ದು, ಬ್ಯಾಂಕಿಂಗ್ ಸೌಲಭ್ಯಗಳನ್ನು ನೇರವಾಗಿ ಜನರ ಮನೆ ಬಾಗಿಲಿಗೆ ತಲುಪಿಸುವ ಕೆಲಸ ಮಾಡಲಾಗುತ್ತಿದೆ” ಎಂದರು.
ಮುಂದುವರಿದು, ಪೂಜ್ಯ ಹೆಗ್ಗಡೆಯವರ ಆಶೀರ್ವಾದದಿಂದ ಇತಿಹಾಸ ಪ್ರಸಿದ್ಧ ದೇವಾಲಯಗಳ ಜೀರ್ಣೋದ್ದಾರ, ಶಾಲಾ ಹಾಗೂ ಶೈಕ್ಷಣಿಕ ಅಭಿವೃದ್ಧಿ, ವಿದ್ಯಾರ್ಥಿ ನಿಧಿ, ಕೆರೆ-ಕಟ್ಟೆಗಳ ಪುನರುಜ್ಜೀವನ, ನಿರ್ಗತಕರಿಗೆ ಮನೆ ನಿರ್ಮಾಣ, ಬೋರ್ವೆಲ್ ರಿಚಾರ್ಜ್, ಶುದ್ಧ ಕುಡಿಯುವ ನೀರಿನ ಘಟಕಗಳು ಹಾಗೂ ಪಿಂಚಣಿ ಯೋಜನೆ ಸೇರಿದಂತೆ ನೂರಾರು ಕಾರ್ಯಕ್ರಮಗಳು ನಡೆಯುತ್ತಿವೆ. ಜಿಲ್ಲೆಯ 650 ನಿರ್ಗತಕರಿಗೆ ಸಂಸ್ಥೆಯಿಂದ ಪಿಂಚಣಿ ನೀಡಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ಸ್ವಾವಲಂಬನೆಗೆ ನಾಂದಿ
ತುಮುಲ್ ನಿರ್ದೇಶಕ ಸಿದ್ದಗಂಗಯ್ಯ ವಿ. ಮಾತನಾಡಿ, “ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ರೈತರಿಗೆ ಮತ್ತು ಹಾಲು ಉತ್ಪಾದಕರಿಗೆ ಬಹುದೊಡ್ಡ ಆರ್ಥಿಕ ಬೆಂಬಲವಾಗಿದೆ. ಸ್ವಸಹಾಯ ಸಂಘಗಳ ಮೂಲಕ ಮಹಿಳೆಯರು ಆರ್ಥಿಕವಾಗಿ ಸ್ವಾವಲಂಬಿಗಳಾಗುತ್ತಿದ್ದು, ಹಳ್ಳಿಗಳ ವಿಕಾಸಕ್ಕೆ ಸಂಸ್ಥೆಯ ಕೊಡುಗೆ ಶ್ಲಾಘನೀಯ. ಪ್ರತಿಯೊಬ್ಬರೂ ಈ ಯೋಜನೆಯ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಳ್ಳಬೇಕು” ಎಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಸಂಸ್ಥೆಯ ತಾಲೂಕು ಯೋಜನಾಧಿಕಾರಿ ಅನಿತಾ, ವಲಯ ಅಧಿಕಾರಿ ಶ್ರೀನಿವಾಸ್, ಗ್ರಾ.ಪಂ. ಮಾಜಿ ಅಧ್ಯಕ್ಷೆ ಅಂಜನಮ್ಮ ನಾಗರಾಜು, ಟಿಎಪಿಸಿಎಂಎಸ್ ಮಾಜಿ ಅಧ್ಯಕ್ಷ ಈಶಪ್ರಸಾದ್, ಎಂಪಿಸಿಎಸ್ ಮಾಜಿ ಅಧ್ಯಕ್ಷ ರಮೇಶ್, ಒಕ್ಕೂಟದ ಅಧ್ಯಕ್ಷ ಪಾಂಡಣ್ಣ, ಪ್ರಮುಖರಾದ ನಯಾಜ್, ರಂಜಿತ್, ಕೃಷಿ ಮೇಲ್ವಿಚಾರಕ ಮಹೇಂದ್ರ ಹಾಗೂ ಸಂಸ್ಥೆಯ ನೂರಾರು ಅಜೀವ ಸದಸ್ಯರು ಮತ್ತು ಮಹಿಳೆಯರು ಉಪಸ್ಥಿತರಿದ್ದರು.
ವರದಿ: ಮಂಜುಸ್ವಾಮಿ ಎಂ.ಎನ್.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


