ಬೆಂಗಳೂರು: ಪಶ್ಚಿಮ ಘಟ್ಟಗಳ ಸಂರಕ್ಷಣೆಗೆ ಸಂಬಂಧಿಸಿದ ಡಾ.ಕೆ.ಕಸ್ತೂರಿರಂಗನ್ ವರದಿಯನ್ನು ಜಾರಿಗೊಳಿಸುವ ಕೇಂದ್ರ ಸರ್ಕಾರದ ಕ್ರಮದಿಂದ ಕರ್ನಾಟಕದ 10 ಜಿಲ್ಲೆಗಳ ಜನರ ಜೀವನೋಪಾಯದ ಮೇಲೆ ತೀವ್ರ ಪ್ರತಿಕೂಲ ಪರಿಣಾಮ ಬೀರಲಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ವಿಧಾನಸಭೆಯಲ್ಲಿ ಕಳವಳ ವ್ಯಕ್ತಪಡಿಸಿದ್ದಾರೆ.
ಕಸ್ತೂರಿರಂಗನ್ ವರದಿ ಜಾರಿಯಾದರೆ ಪಶ್ಚಿಮ ಘಟ್ಟ ವ್ಯಾಪ್ತಿಯ 10 ಜಿಲ್ಲೆಗಳ ಕೃಷಿ ಹಾಗೂ ಸ್ಥಳೀಯ ಜನರ ದಿನನಿತ್ಯದ ಜೀವನೋಪಾಯಕ್ಕೆ ತೊಂದರೆಯಾಗಲಿದೆ. ಸ್ಥಳೀಯ ಜನರನ್ನು ಅಥವಾ ರೈತರನ್ನು ಯಾವುದೇ ಕಾರಣಕ್ಕೂ ಜಾಗದಿಂದ ಉಚ್ಛಾಟಿಸುವ ಅಥವಾ ಸ್ಥಳಾಂತರಿಸುವ ಪ್ರಶ್ನೆಯೇ ಇಲ್ಲ ಎಂದಿದ್ದಾರೆ.
ರೈತರ ಹಿತಾಸಕ್ತಿ, ಜೀವನೋಪಾಯದ ಹಕ್ಕು ಹಾಗೂ ಸ್ಥಳೀಯ ಜನರ ಸ್ವಾಭಿಮಾನವನ್ನು ರಕ್ಷಿಸಲು ರಾಜ್ಯ ಸರ್ಕಾರ ಸಂಪೂರ್ಣ ಬದ್ಧವಾಗಿದೆ. ಶಾಸಕರು, ಸಂಸದರು ಹಾಗೂ ಸಾವಿರಾರು ಸಾರ್ವಜನಿಕರಿಂದ ಬಂದಿರುವ ಆಕ್ಷೇಪಣೆ ಮತ್ತು ಮನವಿಗಳನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ ಎಂದರು.
ಕಸ್ತೂರಿರಂಗನ್ ವರದಿ ಹಾಗೂ ರಾಜ್ಯದ ಬರ ಪರಿಸ್ಥಿತಿಯ ಕುರಿತು ಚರ್ಚಿಸಲು ಆರಂಭವಾದ ಮೂರು ದಿನಗಳ ವಿಶೇಷ ಅಧಿವೇಶನದ ಮೊದಲ ದಿನ ವಿಧಾನಸಭೆಯಲ್ಲಿ ಈ ವಿಷಯ ಪ್ರಸ್ತಾಪವಾಯಿತು.
ಸಭೆಯಲ್ಲಿ ವಿಷಯ ಮಂಡಿಸಿದ ಡಿ.ಕೆ. ಶಿವಕುಮಾರ್ ಅವರು, “ವೈಜ್ಞಾನಿಕ ಆಧಾರವಿಲ್ಲದೆ ಪಶ್ಚಿಮ ಘಟ್ಟ ಪ್ರದೇಶಗಳಲ್ಲಿ ಕಠಿಣ ನಿರ್ಬಂಧಗಳನ್ನು ಹೇರಿದರೆ, ಕೃಷಿ ಮತ್ತು ಇತರ ಜೀವನೋಪಾಯ ಚಟುವಟಿಕೆಗಳನ್ನು ನೆಚ್ಚಿಕೊಂಡಿರುವ ಜನರಲ್ಲಿ ಗಂಭೀರ ಆತಂಕ ಮೂಡುತ್ತದೆ. ರೈತರ ಆಕ್ರೋಶ ಮತ್ತು ಅವರ ಹಕ್ಕುಗಳನ್ನು ನಾವು ಸಂಪೂರ್ಣವಾಗಿ ಅರ್ಥೈಸಿಕೊಂಡಿದ್ದೇವೆ,” ಎಂದರು.
ಇದೇ ವೇಳೆ ಸಚಿವ ರಾಮಲಿಂಗಾ ರೆಡ್ಡಿ ಅವರು ಮಾತನಾಡಿ, “ಪರಿಸರವನ್ನು ಉಳಿಸುವುದರ ಜೊತೆಗೆ ಜನರ ಕಲ್ಯಾಣವನ್ನು ಕಾಯ್ದುಕೊಳ್ಳುವುದು ಸರ್ಕಾರದ ಜವಾಬ್ದಾರಿಯಾಗಿದೆ. ಎರಡರ ನಡುವೆ ಸಮತೋಲನ ಕಾಯ್ದುಕೊಳ್ಳಬೇಕಿದೆ. ಕೇಂದ್ರ ನೀಡಿರುವ ಕರಡು ಅಧಿಸೂಚನೆ ಇನ್ನೂ ಅಂತಿಮವಾಗಿಲ್ಲ; ರಾಜ್ಯ ಸರ್ಕಾರಕ್ಕೆ ತನ್ನ ಆಕ್ಷೇಪಣೆ ಹಾಗೂ ಸೂಕ್ತ ಸಲಹೆಗಳನ್ನು ಸಲ್ಲಿಸಲು ಇನ್ನು ಅವಕಾಶವಿದೆ,” ಎಂದು ತಿಳಿಸಿದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/CtZPUt7bwkaJkX2T6hAwZI
