ಮಂಡ್ಯ: ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಉಕ್ಕಡಮ್ಮ ದೇವಸ್ಥಾನದಲ್ಲಿ ಕರ್ತವ್ಯನಿರತ ಮಹಿಳಾ ಪೊಲೀಸ್ ಸಬ್ ಇನ್ ಸ್ಪೆಕ್ಟರ್ (PSI) ಸವಿತಾ ಪಾಟೀಲ್ ಅವರೊಂದಿಗೆ ವಾಗ್ವಾದ ನಡೆಸಿ ಕಪಾಳಮೋಕ್ಷ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ, ತುಮಕೂರು ಗ್ರಾಮಾಂತರ ಕ್ಷೇತ್ರದ ಬಿಜೆಪಿ ಶಾಸಕ ಬಿ. ಸುರೇಶ್ ಗೌಡ ಅವರ ಪುತ್ರಿ ಐಶ್ವರ್ಯಾ ಅವರು ವೀಡಿಯೋ ಮೂಲಕ ಬೇಷರತ್ ಕ್ಷಮೆಯಾಚಿಸಿದ್ದಾರೆ.
ಆಗಸ್ಟ್ 12ರಂದು ಭೀಮನ ಅಮಾವಾಸ್ಯೆಯ ಸಂದರ್ಭದಲ್ಲಿ ಐಶ್ವರ್ಯಾ ತಮ್ಮ ಮಕ್ಕಳೊಂದಿಗೆ ಪಾಂಡವಪುರ/ಶ್ರೀರಂಗಪಟ್ಟಣ ವ್ಯಾಪ್ತಿಯ ಆರತಿ ಉಕ್ಕಡ ದೇವಸ್ಥಾನಕ್ಕೆ ದೇವರ ದರ್ಶನಕ್ಕಾಗಿ ತೆರಳಿದ್ದರು. ಈ ವೇಳೆ ದೇವಸ್ಥಾನದಲ್ಲಿ ತೀವ್ರ ಜನಸಂದಣಿ ಇದ್ದಿದ್ದರಿಂದ ಗರ್ಭಗುಡಿಗೆ ಪ್ರವೇಶಿಸುವ ವಿಚಾರದಲ್ಲಿ ಭದ್ರತಾ ಕರ್ತವ್ಯದಲ್ಲಿದ್ದ ಲೇಡಿ ಪಿಎಸ್ಐ ಸವಿತಾ ಪಾಟೀಲ್ ಮತ್ತು ಐಶ್ವರ್ಯಾ ನಡುವೆ ಮಾತಿನ ಚಕಮಕಿ ನಡೆದಿತ್ತು. ಈ ವೇಳೆ ಉದ್ವೇಗಕ್ಕೊಳಗಾದ ಐಶ್ವರ್ಯಾ ಪಿಎಸ್ಐ ಮೇಲೆ ಹಲ್ಲೆ ನಡೆಸಿದ್ದರೆನ್ನಲಾದ ವೀಡಿಯೋ ವೈರಲ್ ಆಗಿತ್ತು. ಈ ಸಂಬಂಧ ಕ್ಯಾತನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಪ್ರಕರಣದಲ್ಲಿ ನಿರೀಕ್ಷಣಾ ಜಾಮೀನು ಕೋರಿ ಐಶ್ವರ್ಯಾ ಹೈಕೋರ್ಟ್ ಮೆಟ್ಟಿಲೇರಿದ್ದರು. ವಿಚಾರಣೆ ನಡೆಸಿದ ಹೈಕೋರ್ಟ್, ಕರ್ತವ್ಯನಿರತ ಮಹಿಳಾ ಅಧಿಕಾರಿಯ ಬಳಿ ಬಹಿರಂಗವಾಗಿ ಕ್ಷಮೆ ಯಾಚಿಸಿದರೆ ಮಾತ್ರ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಪರಿಗಣಿಸುವುದಾಗಿ ಸ್ಪಷ್ಟಪಡಿಸಿ ತರಾಟೆಗೆ ತೆಗೆದುಕೊಂಡಿತ್ತು.
ಹೈಕೋರ್ಟ್ ಸೂಚನೆ ಬೆನ್ನಲ್ಲೇ ವೀಡಿಯೋ ಬಿಡುಗಡೆ ಮಾಡಿರುವ ಐಶ್ವರ್ಯಾ, “ಅಂದು ದೇವಸ್ಥಾನದಲ್ಲಿ ಹೆಚ್ಚು ಜನಸಂದಣಿ ಇದ್ದಿದ್ದರಿಂದ ಹಾಗೂ ನನ್ನ ಮಕ್ಕಳಿದ್ದ ಕಾರಣ ದೇವರ ದರ್ಶನ ಪಡೆಯುವ ಸಂದರ್ಭದಲ್ಲಿ ನನ್ನ ಮತ್ತು ಮಹಿಳಾ ಪಿಎಸ್ ಐ ನಡುವೆ ಸಣ್ಣ ಮಾತಿನ ಚಕಮಕಿ ನಡೆಯಿತು. ಉದ್ವೇಗದಿಂದ ಅಹಿತಕರ ಘಟನೆ ಸಂಭವಿಸಿದೆ. ಈ ಘಟನೆ ನಡೆಯಬಾರದಿತ್ತು. ಇದಕ್ಕಾಗಿ ನಾನು ತೀವ್ರ ವಿಷಾದ ವ್ಯಕ್ತಪಡಿಸುತ್ತೇನೆ. ಕರ್ತವ್ಯದಲ್ಲಿದ್ದ ಪಿಎಸ್ ಐ ಸವಿತಾ ಪಾಟೀಲ್ ಅವರಿಗೆ ನೋವಾಗಿದ್ದರೆ, ನಾನು ಬೇಷರತ್ತಾಗಿ ಕ್ಷಮೆಯಾಚಿಸುತ್ತೇನೆ” ಎಂದಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/CtZPUt7bwkaJkX2T6hAwZI
