ತುಮಕೂರು : ನೋಂದಣಿ ಮತ್ತು ಮುದ್ರಾಂಕ ಇಲಾಖೆಯಲ್ಲಿ ರಾಜ್ಯ ಸರ್ಕಾರ ಮಹತ್ವದ ಆಡಳಿತಾತ್ಮಕ ಬದಲಾವಣೆ ಕೈಗೊಂಡಿದ್ದು, ರಾಜ್ಯದ ವಿವಿಧ ಜಿಲ್ಲೆಗಳು ಹಾಗೂ ಉಪ ನೋಂದಣಾಧಿಕಾರಿ ಕಚೇರಿಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಒಟ್ಟು 33 ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ವರ್ಗಾವಣೆ ಮಾಡಲಾಗಿದೆ.
ತಕ್ಷಣದಿಂದಲೇ ಜಾರಿಗೆ ಬರುವಂತೆ ಹೊರಡಿಸಿರುವ ವರ್ಗಾವಣೆ ಆದೇಶದಲ್ಲಿ ಜಿಲ್ಲಾ ನೋಂದಣಾಧಿಕಾರಿಗಳು, ಹಿರಿಯ ಉಪ ನೋಂದಣಾಧಿಕಾರಿಗಳು, ಉಪ ನೋಂದಣಾಧಿಕಾರಿಗಳು, ಪ್ರಥಮ ದರ್ಜೆ ಸಹಾಯಕರು ಹಾಗೂ ದ್ವಿತೀಯ ದರ್ಜೆ ಸಹಾಯಕರು ಸೇರಿದ್ದಾರೆ.
ಕೊಪ್ಪಳ, ರಾಯಚೂರು, ಯಾದಗಿರಿ, ಬೆಂಗಳೂರು, ತುಮಕೂರು, ಹಾಸನ, ಶಿವಮೊಗ್ಗ, ಧಾರವಾಡ, ಮಂಡ್ಯ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದ ಅಧಿಕಾರಿಗಳಿಗೆ ಹೊಸ ಸ್ಥಳಗಳಿಗೆ ನಿಯೋಜನೆ ಮಾಡಲಾಗಿದೆ.
ಪ್ರಮುಖ ವರ್ಗಾವಣೆಗಳಲ್ಲಿ ಕೊಪ್ಪಳದ ಜಿಲ್ಲಾ ನೋಂದಣಾಧಿಕಾರಿಯಾಗಿದ್ದ ಅನುರಾಧ ಎಂ. ಕಿನ್ನಾಳ್ ಅವರನ್ನು ಯಾದಗಿರಿಗೆ ಹಾಗೂ ರಾಯಚೂರಿನ ಜಿಲ್ಲಾ ನೋಂದಣಾಧಿಕಾರಿ ಪ್ರತಿಭಾ ಬಿಡಿಕರ್ ಅವರನ್ನು ಕೊಪ್ಪಳಕ್ಕೆ ವರ್ಗಾಯಿಸಲಾಗಿದೆ.
ಕುಣಿಗಲ್ ನಲ್ಲಿ ಹಿರಿಯ ಉಪ ನೋಂದಣಾಧಿಕಾರಿಯಾಗಿದ್ದ ಮಂಜುನಾಥ್ ಅವರನ್ನು ಬೆಂಗಳೂರಿನ ಬಸವನಗುಡಿಗೆ, ಬೇಗೂರಿನಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಸಂತೋಷ್ ಕುಮಾರ್ ಕಟ್ಟಿಮನಿ ಅವರನ್ನು ದೊಡ್ಡಬಳ್ಳಾಪುರಕ್ಕೆ ವರ್ಗಾಯಿಸಲಾಗಿದೆ.
ಬೆಂಗಳೂರಿನ ಪ್ರಧಾನ ಕಚೇರಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಸ್ವರ್ಣಲತಾ ಎಸ್.ಎಸ್. ಅವರನ್ನು ಕೆಂಗೇರಿಯ ಉಪ ನೋಂದಣಾಧಿಕಾರಿಯಾಗಿ ನೇಮಿಸಲಾಗಿದ್ದು, ಕೆಂಗೇರಿಯ ರಾಮದಾಸ ಗೌಡ ಅವರನ್ನು ನೆಲಮಂಗಲಕ್ಕೆ ವರ್ಗಾಯಿಸಲಾಗಿದೆ. ಗುಡಿಬಂಡೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಶಂಕರಮೂರ್ತಿ ಅವರನ್ನು ಗೌರಿಬಿದನೂರಿಗೆ ನಿಯೋಜಿಸಲಾಗಿದೆ.
ಇನ್ನು ಬಸವನಗುಡಿ ಜಿಲ್ಲಾ ನೋಂದಣಾಧಿಕಾರಿ ಕಚೇರಿಯ ರವಿಕುಮಾರ್ ಕೆ.ವಿ. ಅವರನ್ನು ಮಲ್ಲೇಶ್ವರಕ್ಕೆ, ಆಲೂರಿನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಚಂದ್ರಕಾಂತಿ ಅವರನ್ನು ತುಮಕೂರಿಗೆ ಹಾಗೂ ಮಧುಗಿರಿಯ ಸತೀಶ್ ಎಸ್. ಅವರನ್ನು ಪೀಣ್ಯಕ್ಕೆ ವರ್ಗಾಯಿಸಲಾಗಿದೆ.
ಅದೇ ರೀತಿ ಅನಿಲ್ ಜಮಖಂಡಿ ಅವರನ್ನು ಬಾಗಲಕೋಟೆಯಿಂದ ಧಾರವಾಡಕ್ಕೆ, ಧನಲಕ್ಷ್ಮಿ ಅವರನ್ನು ಮಂಡ್ಯದಿಂದ ಕೊರಟಗೆರೆಗೆ ಹಾಗೂ ಚೇತನ್ ಗುಟಾಲ್ ಅವರನ್ನು ಸಾಗರದಿಂದ ಶಿವಮೊಗ್ಗಕ್ಕೆ ವರ್ಗಾವಣೆ ಮಾಡಲಾಗಿದೆ.
ಈ ವರ್ಗಾವಣೆ ಪ್ರಕ್ರಿಯೆಯಲ್ಲಿ ಏಳು ಮಂದಿ ಪ್ರಥಮ ದರ್ಜೆ ಸಹಾಯಕರು ಹಾಗೂ ಇಬ್ಬರು ದ್ವಿತೀಯ ದರ್ಜೆ ಸಹಾಯಕರು ಕೂಡ ಸೇರಿದ್ದಾರೆ.
ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ಆಡಳಿತಾತ್ಮಕ ಕಾರ್ಯವೈಖರಿಯನ್ನು ಸುಗಮಗೊಳಿಸುವ ನಿಟ್ಟಿನಲ್ಲಿ ಈ ಬದಲಾವಣೆಗಳನ್ನು ಕೈಗೊಳ್ಳಲಾಗಿದ್ದು, ವಿವಿಧ ಕಚೇರಿಗಳಲ್ಲಿ ಹೊಸದಾಗಿ ನಿಯೋಜನೆಗೊಂಡ ಅಧಿಕಾರಿಗಳು ಹಾಗೂ ಸಿಬ್ಬಂದಿ ಶೀಘ್ರದಲ್ಲೇ ಕರ್ತವ್ಯಕ್ಕೆ ಹಾಜರಾಗಲಿದ್ದಾರೆ.
ವರದಿ: ಮಂಜುಸ್ವಾಮಿ ಎಂ.ಎನ್.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/CtZPUt7bwkaJkX2T6hAwZI
