ನಮ್ಮತುಮಕೂರು: ಮನೆ ಕೆಲಸಕ್ಕೆಂದು ಬಂದು ವೈದ್ಯ ಕುಟುಂಬದ ನಂಬಿಕೆ ಗಳಿಸಿದ್ದ ಮಹಿಳೆಯೊಬ್ಬಳು, ಬರೋಬ್ಬರಿ 800 ಗ್ರಾಂಗೂ ಅಧಿಕ ಚಿನ್ನ ಮತ್ತು ವಜ್ರದ ಆಭರಣಗಳನ್ನು ಕಳವು ಮಾಡಿದ ಘಟನೆ ತುಮಕೂರು ನಗರದ ಜಯನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬೆಳಕಿಗೆ ಬಂದಿದೆ. ಕಳ್ಳತನದ ವಿಚಾರ ಬಯಲಾಗುವ ಭೀತಿಯಲ್ಲಿ ಕುಟುಂಬದ ಇಬ್ಬರನ್ನು ಕೊಲೆ ಮಾಡಲು ಆರೋಪಿತೆ ಸಂಚು ರೂಪಿಸಿದ್ದ ಆಘಾತಕಾರಿ ಅಂಶವೂ ತನಿಖೆಯಲ್ಲಿ ಹೊರಬಿದ್ದಿದೆ. ಪ್ರಕರಣ ಸಂಬಂಧ ಸ್ನೇಹಾ (24) ಮತ್ತು ಸೌಮ್ಯ ಎಂಬ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.
ಜಯನಗರ ನಿವಾಸಿಗಳಾದ ವೈದ್ಯ ದಂಪತಿ ಯಶವಂತ್ ಮತ್ತು ನಳಿನಿ ಅವರ ಮನೆಯಲ್ಲಿ ಈ ಕೃತ್ಯ ನಡೆದಿದೆ. ಸುಮಾರು ಎರಡು ವರ್ಷಗಳ ಹಿಂದೆ ವೈಯಕ್ತಿಕ ಸಮಸ್ಯೆಯಿದೆ ಎಂದು ಬಂದಿದ್ದ ಸ್ನೇಹಾಗೆ ವೈದ್ಯ ದಂಪತಿ ಮಾನವೀಯತೆಯಿಂದ ಆಶ್ರಯ ನೀಡಿದ್ದರು. ಗರ್ಭಿಣಿಯಾಗಿದ್ದ ಆಕೆಗೆ ಹೆರಿಗೆ ಮಾಡಿಸಿ, ಮಗುವಿನೊಂದಿಗೆ ಮನೆಯಲ್ಲಿರಲು ಅವಕಾಶ ಕಲ್ಪಿಸಿದ್ದರು. ಅಲ್ಲದೆ, ಆಕೆಯೊಂದಿಗೆ ಬಂದಿದ್ದ ಅತ್ತೆ, ದೊಡ್ಡಮ್ಮ ಹಾಗೂ ಪತಿ ರಾಕೇಶ್ಗೂ ಆಶ್ರಯ ನೀಡಿ, ಸ್ನೇಹಾಳಿಗೆ ಮನೆ ಕೆಲಸ ಹಾಗೂ ದೊಡ್ಡಮ್ಮನಿಗೆ ಆಸ್ಪತ್ರೆಯಲ್ಲಿ ಸಂಬಳ ಸಹಿತ ಕೆಲಸ ನೀಡಿದ್ದರು. ಊಟ, ವಸತಿ ಸೇರಿದಂತೆ ಎಲ್ಲ ಸೌಲಭ್ಯಗಳನ್ನು ನೀಡಿದ್ದರೂ, ಸ್ನೇಹಾ ಮನೆಯಲ್ಲಿದ್ದ ಚಿನ್ನಾಭರಣಗಳ ಮೇಲೆ ಕಣ್ಣಿಟ್ಟಿದ್ದಳು.
ಕಳೆದ ಆರೇಳು ತಿಂಗಳಲ್ಲಿ ಮನೆಯ ವಿವಿಧ ಕೊಠಡಿಗಳಲ್ಲಿದ್ದ ಲಾಕರ್ಗಳ ಕೀಗಳನ್ನು ಕದ್ದು, ಪೂರ್ವಜರ ಆಭರಣಗಳು, ಮದುವೆ ಚಿನ್ನ, ಪತಿ ನೀಡಿದ್ದ ಉಡುಗೊರೆ ಆಭರಣಗಳು, ವಜ್ರ ಹಾಗೂ ಬೆಳ್ಳಿ ಆಭರಣ ಸೇರಿದಂತೆ 800 ಗ್ರಾಂಗೂ ಅಧಿಕ ಆಭರಣಗಳನ್ನು ಕಳವು ಮಾಡಿದ್ದಾಳೆ ಎಂದು ಆರೋಪಿಸಲಾಗಿದೆ. ಸುಮಾರು ಎರಡು ತಿಂಗಳ ಹಿಂದೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸಿದ್ದ ಸ್ವಂತ ಆಸ್ಪತ್ರೆಯ ಕಾರ್ಯಕ್ರಮಕ್ಕೂ ಮುನ್ನ, ವರಮಹಾಲಕ್ಷ್ಮಿ ಹಬ್ಬದ ವೇಳೆ ಲಾಕರ್ ತೆರೆಯಲು ಹೋದಾಗ ಕೀ ಸಿಗದೆ ಬೇರೊಬ್ಬರಿಂದ ಲಾಕರ್ ತೆರೆಸಿದಾಗ ಆಭರಣಗಳು ನಾಪತ್ತೆಯಾಗಿರುವುದು ಗೊತ್ತಾಗಿದೆ.
ವೈದ್ಯ ದಂಪತಿ ನೀಡಿದ ದೂರಿನ ಮೇರೆಗೆ ಜಯನಗರ ಪೊಲೀಸರು ತನಿಖೆ ಕೈಗೊಂಡಾಗ ಸ್ನೇಹಾಳ ಕೃತ್ಯ ಬಯಲಾಗಿದೆ. ಕದ್ದ ಆಭರಣಗಳನ್ನು ಸೌಮ್ಯ ಮೂಲಕ ಮಾರಾಟ ಮಾಡಿ, ಆ ಹಣದಲ್ಲಿ ಕಾರು, ಬೈಕ್, ಆಟೋ, ಫ್ರಿಡ್ಜ್, ವಾಷಿಂಗ್ ಮಷಿನ್ ಹಾಗೂ ಟಿವಿ ಖರೀದಿಸಿದ್ದಳು ಎನ್ನಲಾಗಿದೆ. ಕಳ್ಳತನ ಬಯಲಾಗುವ ಆತಂಕದಲ್ಲಿ ವೈದ್ಯರ ತಾಯಿ ಮತ್ತು ಮಗುವಿಗೆ ವಿಷವಿಟ್ಟು ಕೊಲೆ ಮಾಡಿ, ಅದನ್ನು ಅಪರಿಚಿತ ಕಳ್ಳರ ಕೃತ್ಯ ಎಂದು ಬಿಂಬಿಸಲು ಸ್ನೇಹಾ ಸಂಚು ರೂಪಿಸಿದ್ದಳು ಎಂಬ ಮಾಹಿತಿಯನ್ನೂ ವೈದ್ಯ ದಂಪತಿ ತಿಳಿಸಿದ್ದಾರೆ.
ಸದ್ಯ ಆರೋಪಿಗಳಿಂದ ಒಂದು ಕಾರು, ಎರಡು ಬೈಕ್ ಗಳು, ಒಂದು ಆಟೋ, ಗೃಹೋಪಯೋಗಿ ವಸ್ತುಗಳು ಹಾಗೂ 220 ಗ್ರಾಂ ಚಿನ್ನಾಭರಣಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದು, ಮುಂದಿನ ತನಿಖೆ ನಡೆಸುತ್ತಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/CtZPUt7bwkaJkX2T6hAwZI
