ತುಮಕೂರು: ಅಹಿಂದ ವರ್ಗದ ಪ್ರತಿಯೊಂದು ಸಮುದಾಯವೂ ತನ್ನ ಆಂತರಿಕ ಭಿನ್ನಾಭಿಪ್ರಾಯಗಳನ್ನು ಬದಿಗೊತ್ತಿ ಒಂದಾಗದಿದ್ದರೆ, ಭವಿಷ್ಯದಲ್ಲಿ ನಾವೆಲ್ಲರೂ ಸಂಕಷ್ಟ ಎದುರಿಸಬೇಕಾಗುತ್ತದೆ. ಎಡ–ಬಲ ಎಂಬ ವಿಂಗಡಣೆಗೆ ಬಲಿಯಾದರೆ ಆಯುಧ ಪೂಜೆಯಲ್ಲಿ ವಾಹನದ ಚಕ್ರಕ್ಕೆ ಸಿಲುಕುವ ನಿಂಬೆ ಹಣ್ಣಿನಂತಹ ಸ್ಥಿತಿ ನಮಗಾಗಲಿದೆ ಎಂದು ಕಾಂಗ್ರೆಸ್ ಮುಖಂಡ ಎಸ್.ಟಿ ಶ್ರೀನಿವಾಸ್ ಕಳವಳ ವ್ಯಕ್ತಪಡಿಸಿದ್ದಾರೆ.
ನಗರದ ಕನ್ನಡ ಭವನದಲ್ಲಿ ಇತ್ತೀಚೆಗೆ ಅರುಣೋದಯ ಸಹಕಾರ ಸಂಘ ಆಯೋಜಿಸಿದ್ದ ಸರ್ವ ಸದಸ್ಯರ ಮಹಾಸಭೆಯಲ್ಲಿ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ಇತ್ತೀಚಿನ ದಿನಗಳಲ್ಲಿ ದಲಿತ ಸಮುದಾಯದಲ್ಲಿ ಎಡ ಮತ್ತು ಬಲ ಸಮುದಾಯಗಳ ನಡುವೆ ತಿಕ್ಕಾಟ ತೀವ್ರಗೊಳ್ಳುತ್ತಿರುವುದು ಅತ್ಯಂತ ಶೋಚನೀಯ. ಇದರ ಜೊತೆಗೆ ಹಿಂದುಳಿದ ವರ್ಗಗಳಲ್ಲೂ ಸಹ ಒಗ್ಗಟ್ಟಿನ ಕೊರತೆ ಎದ್ದು ಕಾಣುತ್ತಿದೆ. ನಮ್ಮಲ್ಲೇ ನಾವು ಸಣ್ಣಪುಟ್ಟ ವಿಚಾರಗಳಿಗೆ ಕಿತ್ತಾಡುತ್ತಾ ಹೋದರೆ, ಸಾಮಾಜಿಕ ಮತ್ತು ರಾಜಕೀಯವಾಗಿ ನಮ್ಮ ಹಕ್ಕುಗಳನ್ನು ಕಳೆದುಕೊಳ್ಳಬೇಕಾಗುತ್ತದೆ. ಆಂತರಿಕ ಭಿನ್ನಾಭಿಪ್ರಾಯಗಳನ್ನು ಮರೆತು ಶೋಷಿತ ವರ್ಗಗಳೆಲ್ಲವೂ ಒಂದಾಗಬೇಕು ಎಂದು ಮನವಿ ಮಾಡಿದರು.
ಅಹಿಂದ (ಅಲ್ಪಸಂಖ್ಯಾತ, ಹಿಂದುಳಿದ ಹಾಗೂ ದಲಿತ) ಸಮುದಾಯಗಳು ಶೈಕ್ಷಣಿಕ, ಆರ್ಥಿಕ ಹಾಗೂ ರಾಜಕೀಯ ರಂಗದಲ್ಲಿ ಸ್ವಾವಲಂಬನೆ ಸಾಧಿಸಬೇಕಾದರೆ ಕೇವಲ ಸಂಘಟನೆಗಳಿಂದ ಸಾಲದು, ಪರಸ್ಪರ ನಂಬಿಕೆ ಮತ್ತು ಸೌಹಾರ್ದತೆ ಬೆಳೆಯಬೇಕು ಎಂದರು. ಪ್ರಸ್ತುತ ಸನ್ನಿವೇಶದಲ್ಲಿ ನಮ್ಮ ಒಗ್ಗಟ್ಟೇ ನಮಗೆ ಶ್ರೀರಕ್ಷೆ. ಇಲ್ಲದಿದ್ದರೆ ಮುಂಬರುವ ದಿನಗಳಲ್ಲಿ ಅಸ್ತಿತ್ವದ ಭೀತಿ ಎದುರಾಗಲಿದೆ ಎಂದು ಸೂಕ್ಷ್ಮವಾಗಿ ಕಿವಿಮಾತು ಹೇಳಿದರು. ಇನ್ನು, ಲೀಡರ್ನ ವ್ಯವಸ್ಥಾಪಕ ನಿರ್ದೇಶಕ ಡಾ. ಹೆಚ್. ನಟರಾಜ್ ಮಾತನಾಡಿ, ಸಮುದಾಯಗಳು ಹೆಚ್ಚು ಬಲಗೊಳ್ಳಬೇಕಾದರೆ ಸಹಕಾರ ಸಂಘಗಳು ಹೆಚ್ಚು ಹೆಚ್ಚು ಬೆಳೆಯಬೇಕು. ಅದಕ್ಕೆ ಸಹಕಾರ ಸಂಘದ ಸರ್ವ ಸದಸ್ಯರ ಸಹಕಾರ ಅಗತ್ಯ ಎಂದರು.
ಮೈಸೂರಿನ ಕಾಂಗ್ರೆಸ್ ಮುಖಂಡ ಹಾಗೂ ದೇವರತ್ನ ಫೌಂಡೇಷನ್ನ ಪ್ರಧಾನ ಕಾರ್ಯದರ್ಶಿ ಶಿವಪ್ರಸಾದ್, ನಿವೃತ್ತ ಕುಲಸಚಿವ ನರಸಿಂಹಮೂರ್ತಿ, ಪಿಡಬ್ಲ್ಯೂಡಿಯ ನಿವೃತ್ತ ಮುಖ್ಯ ಇಂಜಿನಿಯರ್ ಶಿವಕುಮಾರ್, ಸಹಕಾರ ಸಂಘದ ಅಧ್ಯಕ್ಷ ಡಾ. ಎಲ್. ಮುಕುಂದ, ಉಪಾಧ್ಯಕ್ಷ ಡಾ. ಹನುಮಂತರಾಯಪ್ಪ, ಗೂಳೂರಿವೆ ನಾಗರಾಜು ಸೇರಿದಂತೆ ಸಹಕಾರ ಸಂಘದ ನಿರ್ದೇಶಕರು ಕಾರ್ಯಕ್ರಮದಲ್ಲಿ ಹಾಜರಿದ್ದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/CtZPUt7bwkaJkX2T6hAwZI
