ಹಾವೇರಿ: ಖಾಸಗಿ ಫೋಟೋ ಮತ್ತು ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುವುದಾಗಿ ಬೆದರಿಸಿ ಮಹಿಳೆಯೊಬ್ಬರಿಗೆ ಲೈಂಗಿಕ ಕಿರುಕುಳ ನೀಡಿದ ಹಾಗೂ ಕೊಲೆ ಬೆದರಿಕೆಯೊಡ್ಡಿದ ಗಂಭೀರ ಆರೋಪದಡಿ ದಂಪತಿ ವಿರುದ್ಧ ಹಾವೇರಿ ಸಿಇಎನ್ (CEN) ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮುಖ್ಯ ಆರೋಪಿಯನ್ನು ಬಂಧಿಸಲಾಗಿದೆ.
ಬಂಧಿತ ಆರೋಪಿಯನ್ನು ಹಾವೇರಿಯ ಬಸವೇಶ್ವರ ನಗರದ ನಿವಾಸಿ ಸಚಿನ್ ದಾನಪ್ಪನವರ್ ಎಂದು ಗುರುತಿಸಲಾಗಿದ್ದು, ಆತನ ಪತ್ನಿ ಸುಪ್ರಿಯಾ ಸಚಿನ್ ದಾನಪ್ಪನವರ್ ವಿರುದ್ಧವೂ ಪ್ರಕರಣ ದಾಖಲಾಗಿದೆ.
ದೂರಿನ ಪ್ರಕಾರ, ಜುಲೈ 12ರ ರಾತ್ರಿ ಸಚಿನ್ ಸಂತ್ರಸ್ತೆ ಮಹಿಳೆಗೆ ಕರೆ ಮಾಡಿ, ತನ್ನ ಲೈಂಗಿಕ ಬೇಡಿಕೆಯನ್ನು ಪೂರೈಸದಿದ್ದರೆ ಆಕೆಯ ಖಾಸಗಿ ಫೋಟೋ ಹಾಗೂ ವಿಡಿಯೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಮಾಡುವುದಾಗಿ ಬೆದರಿಕೆ ಹಾಕಿದ್ದ.
ಅಶ್ಲೀಲ ಫೋಟೋ ರವಾನೆ: ದೂರುದಾರಳ ಪತಿಗೆ ಫೋನ್ ಪೇ (PhonePe) ಮೂಲಕ ಅಶ್ಲೀಲ ಫೋಟೋ ಕಳುಹಿಸಿ ವಿಕೃತಿ ಮೆರೆದಿದ್ದ ಎಂಬ ಆರೋಪವೂ ಕೇಳಿಬಂದಿದೆ.
ಮಹಿಳೆಯನ್ನು ಹಿಂಬಾಲಿಸಿ ಕಿರುಕುಳ ನೀಡಿದ್ದಲ್ಲದೆ, ಆಕೆಯ ಕುಟುಂಬದ ಮೇಲೆ ಕೊಲೆ ಬೆದರಿಕೆ ಹಾಕಲಾಗಿತ್ತು. ಅಷ್ಟೇ ಅಲ್ಲದೆ, ಹುಬ್ಬಳ್ಳಿಯಲ್ಲಿ ವ್ಯಾಸಂಗ ಮಾಡುತ್ತಿರುವ ಸಂತ್ರಸ್ತೆಯ ಮಗಳಿಗೂ ಅವಮಾನ ಮಾಡುವುದಾಗಿ ಬೆದರಿಕೆ ಒಡ್ಡಲಾಗಿತ್ತು.
ಸಂತ್ರಸ್ತೆಯು ನೀಡಿದ ದೂರಿನ ಆಧಾರದ ಮೇಲೆ ಜುಲೈ 22ರಂದು ಹಾವೇರಿ ಸಿಇಎನ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಆರೋಪಿ ಸಚಿನ್ ನನ್ನು ವಶಕ್ಕೆ ಪಡೆದಿದ್ದಾರೆ. ಮಾಹಿತಿ ತಂತ್ರಜ್ಞಾನ (IT) ಕಾಯ್ದೆ ಹಾಗೂ ಭಾರತೀಯ ನ್ಯಾಯ ಸಂಹಿತೆಯ (BNS) ಸೂಕ್ತ ವಿಭಾಗಗಳಡಿ ಪ್ರಕರಣ ದಾಖಲಿಸಲಾಗಿದ್ದು, ಹೆಚ್ಚಿನ ತನಿಖೆ ಮುಂದುವರಿದಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC
