ಸರಗೂರು: “ಮಾನವ ಹಕ್ಕುಗಳ ರಕ್ಷಣೆ ಪ್ರತಿಯೊಬ್ಬ ನಾಗರಿಕನ ಜವಾಬ್ದಾರಿಯಾಗಿದೆ. ಸಮಾಜದ ಎಲ್ಲ ವರ್ಗದ ಜನರಿಗೆ ನ್ಯಾಯ, ಸಮಾನತೆ ಹಾಗೂ ಗೌರವಯುತ ಜೀವನ ದೊರಕುವಂತೆ ಮಾನವ ಹಕ್ಕುಗಳ ಮೌಲ್ಯಗಳನ್ನು ಎಲ್ಲರೂ ಪಾಲಿಸಬೇಕು” ಎಂದು ಮಾನವ ಹಕ್ಕುಗಳ ಮಿಷನ್ ಸಂಸ್ಥಾಪಕ ರಾಷ್ಟ್ರೀಯ ಅಧ್ಯಕ್ಷ ಅಹಮದ್ ಖಾನ್ ಸೆರ್ ಕರೆ ನೀಡಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಗುರುವಾರ ಮಾನವ ಹಕ್ಕುಗಳ ಮಿಷನ್ ವತಿಯಿಂದ ಆಯೋಜಿಸಿದ್ದ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭವನ್ನು ಮಹಾತ್ಮ ಬುದ್ಧ, ಬಸವಣ್ಣ ಹಾಗೂ ಡಾ. ಬಿ.ಆರ್. ಅಂಬೇಡ್ಕರ್ ಅವರ ಭಾವಚಿತ್ರಗಳಿಗೆ ಪುಷ್ಪಾರ್ಚನೆ ಮಾಡುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.
ಮಾನವ ಹಕ್ಕುಗಳು ಪ್ರತಿಯೊಬ್ಬ ವ್ಯಕ್ತಿಯ ಮೂಲಭೂತ ಹಕ್ಕುಗಳಾಗಿದ್ದು, ಜಾತಿ, ಧರ್ಮ, ಲಿಂಗ ಅಥವಾ ಆರ್ಥಿಕ ಸ್ಥಿತಿಯ ಆಧಾರದ ಮೇಲೆ ಯಾರ ಮೇಲೆಯೂ ಅನ್ಯಾಯ ಅಥವಾ ಶೋಷಣೆ ನಡೆಯಬಾರದು ಎಂದು ಮುಖಂಡರು ಅಭಿಪ್ರಾಯಪಟ್ಟರು.
ಆದಿ ಕರ್ನಾಟಕ ಮಹಾಸಭಾ ಅಧ್ಯಕ್ಷ ಇಟ್ನ ರಾಜಣ್ಣ ಮಾತನಾಡಿ, “ಸಮಾಜದಲ್ಲಿ ನಡೆಯುವ ಅನ್ಯಾಯ, ದೌರ್ಜನ್ಯ, ಮಹಿಳೆಯರು ಮತ್ತು ಮಕ್ಕಳ ಮೇಲಿನ ದಬ್ಬಾಳಿಕೆ ಹಾಗೂ ಕಾರ್ಮಿಕರ ಶೋಷಣೆ ಸೇರಿದಂತೆ ಮಾನವ ಹಕ್ಕುಗಳ ಉಲ್ಲಂಘನೆಗಳ ವಿರುದ್ಧ ಸಂಘಟನೆ ಸದಾ ಧ್ವನಿಯಾಗಲಿದೆ” ಎಂದರು.
ಮಾನವ ಹಕ್ಕುಗಳ ಮಿಷನ್ ಮಾಜಿ ಅಧ್ಯಕ್ಷ ಯಶವಂತಪುರ ಶ್ರೀನಿವಾಸ ಮಾತನಾಡಿ, “ಜನರಲ್ಲಿ ಕಾನೂನು ಅರಿವು ಮೂಡಿಸುವುದು ಮತ್ತು ಬಡವರು, ದೀನದಲಿತರು ಹಾಗೂ ಶೋಷಿತರಿಗೆ ನ್ಯಾಯ ದೊರಕಿಸುವ ನಿಟ್ಟಿನಲ್ಲಿ ಉಚಿತ ಮಾರ್ಗದರ್ಶನ ನೀಡುವುದು ಸಂಘಟನೆಯ ಪ್ರಮುಖ ಉದ್ದೇಶ” ಎಂದು ತಿಳಿಸಿದರು.
ಪದಗ್ರಹಣ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ನೂತನ ಅಧ್ಯಕ್ಷ ಪಿ. ಚಿನ್ನಣ್ಣ ಹಳಿಯೂರು ಮಾತನಾಡಿ, ಪ್ರಾಮಾಣಿಕತೆ, ಪಾರದರ್ಶಕತೆ ಮತ್ತು ಸೇವಾ ಮನೋಭಾವದಿಂದ ಕಾರ್ಯನಿರ್ವಹಿಸಿ ಸಂಘಟನೆಯನ್ನು ಗ್ರಾಮ ಮಟ್ಟದಿಂದ ಜಿಲ್ಲಾ ಮಟ್ಟದವರೆಗೆ ಬಲಪಡಿಸುವುದಾಗಿ ತಿಳಿಸಿದರು.
ಕಾರ್ಯಕ್ರಮದಲ್ಲಿ ಮಾನವ ಹಕ್ಕುಗಳ ಮಿಷನ್ ರಾಜ್ಯಾಧ್ಯಕ್ಷ ಶಿವು ಜನ್ಯ (ಎಚ್.ಡಿ.ಕೋಟೆ), ಅಧಿ ಕರ್ನಾಟಕ ಮಹಾಸಭಾ ಪ್ರಧಾನ ಕಾರ್ಯದರ್ಶಿ ಭೀಮನಹಳ್ಳಿ ಸೋಮೇಶ್, ಗ್ರಾಮೀಣ ಮಹೇಶ್, ತುಂಬಸೋಗೆ ನಾಗಣ್ಣ ಮುಂತಾದವರು ಮಾತನಾಡಿದರು.
ಈ ಸಂದರ್ಭದಲ್ಲಿ ರಾಜ್ಯ ಪ್ರಧಾನ ಕಾರ್ಯದರ್ಶಿ ರೋಷನ್, ಎಚ್.ಡಿ.ಕೋಟೆ ತಾಲೂಕು ಅಧ್ಯಕ್ಷ ಜಯರಾಮ್, ಮಾಜಿ ಅಧ್ಯಕ್ಷ ರವೀಂದ್ರ ಮಾಲಾರ, ಪ್ರಧಾನ ಕಾರ್ಯದರ್ಶಿ ಪ್ರಭಾಕರ್, ಸಹ ಕಾರ್ಯದರ್ಶಿ ಸೂರ್ಯ ಕುಮಾರ್, ಉಪಾಧ್ಯಕ್ಷರಾದ ಗಣೇಶ್, ಶಿವಣ್ಣ, ಸೋಮಣ್ಣ, ವಿಷಕಂಠ, ಶ್ರೀನಿವಾಸ್, ಸಂಚಾಲಕ ಶಿವರಾಜು, ಉಸ್ತುವಾರಿ ಮರೀಲಿಂಗಯ್ಯ ಸೇರಿದಂತೆ ವಿವಿಧ ಪದಾಧಿಕಾರಿಗಳನ್ನು ಸನ್ಮಾನಿಸಲಾಯಿತು. ಸಮಾರಂಭದಲ್ಲಿ ಸಂಘಟನೆಯ ಮುಖಂಡರು, ಸದಸ್ಯರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.
ವರದಿ: ಹಾದನೂರು ಚಂದ್ರ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC
