ಸರಗೂರು: ತಾಲೂಕಿನ ಸಾಗರೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವಿಶ್ವ ಸ್ತನ್ಯಪಾನ ಸಪ್ತಾಹವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ವೈದ್ಯಾಧಿಕಾರಿ ಡಾ. ಶರತ್ ಅವರು, ಎದೆಹಾಲು ಮಗುವಿನ ಮೊದಲ ಸಂಪೂರ್ಣ ಆಹಾರ ಎಂದು ತಿಳಿಸುತ್ತಾ, ತಾಯಂದಿರು ಹಾಗೂ ಗರ್ಭಿಣಿಯರಿಗೆ ಸ್ತನ್ಯಪಾನದ ಮಹತ್ವದ ಕುರಿತು ಸಮಗ್ರ ಮಾಹಿತಿ ನೀಡಿದರು.
ನವಜಾತ ಶಿಶುವಿಗೆ ಜನಿಸಿದ ಮೊದಲ ಒಂದು ಗಂಟೆಯೊಳಗೆ ತಾಯಿಯ ಎದೆಹಾಲುಣಿಸುವುದು ಅತ್ಯಂತ ಅಗತ್ಯವಾಗಿದ್ದು, ಆರಂಭದಲ್ಲಿ ಬರುವ ಹಳದಿ ಬಣ್ಣದ ಹಾಲು (ಕೊಲೊಸ್ಟ್ರಮ್) ಮಗುವಿನ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಅಮೂಲ್ಯ ಆಹಾರವಾಗಿದೆ. ಇದನ್ನು ಯಾವುದೇ ಕಾರಣಕ್ಕೂ ವ್ಯರ್ಥ ಮಾಡಬಾರದು ಎಂದು ಅವರು ಕಿವಿಮಾತು ಹೇಳಿದರು.
ಹುಟ್ಟಿದ ಮೊದಲ ಆರು ತಿಂಗಳವರೆಗೆ ಮಗುವಿಗೆ ಕೇವಲ ತಾಯಿಯ ಎದೆಹಾಲನ್ನೇ ನೀಡಬೇಕು ಹಾಗೂ ಈ ಸಮಯದಲ್ಲಿ ನೀರು, ಜೇನುತುಪ್ಪ ಅಥವಾ ಇತರೆ ಯಾವುದೇ ಆಹಾರಗಳನ್ನು ನೀಡಬಾರದು ಎಂದು ಡಾ. ಶರತ್ ಸ್ಪಷ್ಟಪಡಿಸಿದರು. ಆರು ತಿಂಗಳ ನಂತರ ಪೂರಕ ಆಹಾರ ಆರಂಭಿಸಿದರೂ, ಮಗುವಿಗೆ ಎರಡು ವರ್ಷ ಅಥವಾ ಅದಕ್ಕಿಂತ ಹೆಚ್ಚು ಕಾಲ ಎದೆಹಾಲುಣಿಸುವುದು ಅದರ ದೈಹಿಕ ಹಾಗೂ ಮಾನಸಿಕ ಬೆಳವಣಿಗೆಗೆ ಅತ್ಯಂತ ಸಹಕಾರಿಯಾಗುತ್ತದೆ ಎಂದರು.
ಇದೇ ವೇಳೆ, ಗರ್ಭಿಣಿಯರು ಆರೋಗ್ಯ ಇಲಾಖೆಯು ನೀಡುವ ಉಚಿತ ಆರೋಗ್ಯ ತಪಾಸಣೆ, ಕಬ್ಬಿಣ ಮತ್ತು ಫೋಲಿಕ್ ಆಮ್ಲ ಮಾತ್ರೆಗಳು, ಲಸಿಕೆ, ಪೌಷ್ಟಿಕಾಂಶದ ಕುರಿತು ಸಲಹೆ, ಸುರಕ್ಷಿತ ಹೆರಿಗೆ ಸೇವೆ ಹಾಗೂ ಜನನಿ-ಶಿಶು ಆರೈಕೆ ಸೇರಿದಂತೆ ವಿವಿಧ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಳ್ಳುವಂತೆ ಕರೆ ನೀಡಿದರು.
ಈ ಕಾರ್ಯಕ್ರಮದಲ್ಲಿ ವಿಶ್ವ ಸ್ತನ್ಯಪಾನ ಸಪ್ತಾಹದ ಮಹತ್ವವನ್ನು ತಿಳಿಸುವ ಮೂಲಕ ತಾಯಿ ಮತ್ತು ಮಗುವಿನ ಆರೋಗ್ಯ ಕಾಪಾಡುವಲ್ಲಿ ಎದೆಹಾಲಿನ ಪಾತ್ರ ಪ್ರಮುಖವಾಗಿದೆ ಎಂಬ ಸಂದೇಶ ಸಾರಲಾಯಿತು. ಕಾರ್ಯಕ್ರಮದಲ್ಲಿ ಆಸ್ಪತ್ರೆಯ ಪ್ರಥಮ ದರ್ಜೆ ಸಹಾಯಕ ಸೋಮಶೇಖರ್ ಎಂ., ಪ್ರಯೋಗಶಾಲಾ ತಂತ್ರಜ್ಞ ಕೃಷ್ಣ ಎಸ್.ಆರ್., ನರ್ಸಿಂಗ್ ಅಧಿಕಾರಿ ರತ್ನ ಜಿ., ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿಗಳಾದ ಪುಷ್ಪಲತಾ ಹೆಚ್.ಜೆ. ಮತ್ತು ಮಾಚಿ ಬಿ., ಸಮುದಾಯ ಆರೋಗ್ಯ ಅಧಿಕಾರಿಗಳಾದ ಆಶಾ ಕೆ., ಮನು ಎಂ., ಬಿಂದು ಎಚ್.ಪಿ., ಪೃಥ್ವಿನ್, ನೇತ್ರಾವತಿ, ಆಂಬುಲೆನ್ಸ್ ಚಾಲಕ ವೆಂಕಟೇಶ್, ಗ್ರೂಪ್-ಡಿ ಸಿಬ್ಬಂದಿ ಶೃತಿ ಸೇರಿದಂತೆ ಆಶಾ ಕಾರ್ಯಕರ್ತೆಯರು, ಆಸ್ಪತ್ರೆಯ ಸಿಬ್ಬಂದಿ ಹಾಗೂ ಸ್ಥಳೀಯ ಗರ್ಭಿಣಿಯರು ಮತ್ತು ಬಾಣಂತಿಯರು ಉಪಸ್ಥಿತರಿದ್ದರು.
ವರದಿ: ಹಾದನೂರು ಚಂದ್ರ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC
