ಬೀದರ್: ಜಿಲ್ಲೆಯ ನೂತನ ಅಪರ ಜಿಲ್ಲಾಧಿಕಾರಿ ಹಾಗೂ ಅಪರ ಜಿಲ್ಲಾ ದಂಡಾಧಿಕಾರಿಯಾಗಿ ಕೆಎಎಸ್ (ಹಿರಿಯ ಶ್ರೇಣಿ) ಅಧಿಕಾರಿ ಸುರೇಖಾ ಅವರನ್ನು ರಾಜ್ಯ ಸರ್ಕಾರ ನೇಮಕ ಮಾಡಿ ಆದೇಶ ಹೊರಡಿಸಿದೆ.
ಕಲಬುರಗಿಯ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ (KKRDB) ಉಪ ಕಾರ್ಯದರ್ಶಿಯಾಗಿದ್ದ ಸುರೇಖಾ ಅವರನ್ನು ಆಡಳಿತಾತ್ಮಕ ಹಿತದೃಷ್ಟಿಯಿಂದ ತಕ್ಷಣವೇ ಜಾರಿಗೆ ಬರುವಂತೆ ಬೀದರ್ ಗೆ ವರ್ಗಾಯಿಸಲಾಗಿದೆ. ಸರ್ಕಾರದ ಅಧೀನ ಕಾರ್ಯದರ್ಶಿ ಕೇಶವಪ್ರಸಾದ್ ಕೆ.ಎಚ್. ಅವರು ಆಗಸ್ಟ್ 5ರಂದು ಈ ವರ್ಗಾವಣೆ ಆದೇಶವನ್ನು ಹೊರಡಿಸಿದ್ದಾರೆ.
ಈ ಹಿಂದೆ ಬೀದರ್ ವಿಶ್ವವಿದ್ಯಾಲಯ ಕುಲಸಚಿವರಾಗಿದ್ದ ಸುರೇಖಾ ಅವರು ಅದೇ ಸಂದರ್ಭದಲ್ಲಿ ಕೆಲ ದಿನಗಳ ಕಾಲ ಬೀದರ್ನ ಪ್ರಭಾರ ಅಪರ ಜಿಲ್ಲಾಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದರು. ಇದೀಗ ಅವರು ಪೂರ್ಣ ಪ್ರಮಾಣದಲ್ಲಿ ನೂತನ ಅಪರ ಜಿಲ್ಲಾಧಿಕಾರಿಯಾಗಿ ಮರುನೇಮಕಗೊಂಡಿದ್ದಾರೆ.
ಇನ್ನು ಬೀದರ್ ಅಪರ ಜಿಲ್ಲಾಧಿಕಾರಿಯಾಗಿದ್ದ ಕೆಎಎಸ್ (ಸೂಪರ್ ಟೈಂ ಸ್ಕೇಲ್) ಅಧಿಕಾರಿ ಶಿವಾನಂದ ಬಿ.ಕರಾಳೆ ಅವರನ್ನು ಸಾರ್ವಜನಿಕ ಹಾಗೂ ಆಡಳಿತಾತ್ಮಕ ಹಿತದೃಷ್ಟಿಯಿಂದ ತಕ್ಷಣ ಜಾರಿಗೆ ಬರುವಂತೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರ ಆಪ್ತ ಕಾರ್ಯದರ್ಶಿ ಹುದ್ದೆಗೆ ನೇಮಕ ಮಾಡಲಾಗಿದೆ. 2010ನೇ ಸಾಲಿನ ಕೆಎಎಸ್ ಅಧಿಕಾರಿಯಾಗಿರುವ ಶಿವಾನಂದ ಬಿ.ಕರಾಳೆ ಅವರು ಈ ಹಿಂದೆ ಕಾರವಾರದ ಸಹಾಯಕ ಆಯುಕ್ತರಾಗಿ ಹಾಗೂ ಗದಗ, ಧಾರವಾಡ ಮತ್ತು ತುಮಕೂರು ಜಿಲ್ಲೆಗಳಲ್ಲಿ ಅಪರ ಜಿಲ್ಲಾಧಿಕಾರಿಯಾಗಿ ಸೇವೆ ಸಲ್ಲಿಸಿದ ಅನುಭವ ಹೊಂದಿದ್ದಾರೆ.
ವರದಿ: ಅರವಿಂದ ಮಲ್ಲೀಗೆ, ಬೀದರ್
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC
