ಸರಗೂರು: ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ವಿಶ್ವ ಸ್ತನ್ಯಪಾನ ಸಪ್ತಾಹದ ಅಂಗವಾಗಿ ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ವೈದ್ಯಾಧಿಕಾರಿ ಡಾ. ರವಿಕುಮಾರ್, “ಪ್ರತಿವರ್ಷ ಆಗಸ್ಟ್ 1ರಿಂದ 7ರವರೆಗೆ ವಿಶ್ವ ಸ್ತನ್ಯಪಾನ ಸಪ್ತಾಹವನ್ನು ಆಚರಿಸಲಾಗುತ್ತದೆ. 2026ರ ವಿಶ್ವ ಸ್ತನ್ಯಪಾನ ಸಪ್ತಾಹದ ಧ್ಯೇಯವಾಕ್ಯ ‘ಸುಸ್ಥಿರ ಜೀವನದ ಭದ್ರ ಅಡಿಪಾಯಕ್ಕಾಗಿ ಸ್ತನ್ಯಪಾನ: ಪರಿಣಾಮಕಾರಿ ವಿಧಾನಗಳನ್ನು ಸದೃಢಗೊಳಿಸೋಣ’ ಎಂಬುದಾಗಿದೆ. ಈ ಸಪ್ತಾಹವು ಶಿಶುಗಳ ಪೋಷಣೆ, ರೋಗನಿರೋಧಕ ಶಕ್ತಿ ಹಾಗೂ ಆರೋಗ್ಯಕರ ಬೆಳವಣಿಗೆಯಲ್ಲಿ ತಾಯಿಯ ಎದೆಹಾಲಿನ ಪ್ರಾಮುಖ್ಯತೆಯನ್ನು ಸಾರುತ್ತದೆ” ಎಂದು ತಿಳಿಸಿದರು.
ಮಗು ಜನಿಸಿದ ಮೊದಲ ಒಂದು ಗಂಟೆಯೊಳಗೆ ಕಡ್ಡಾಯವಾಗಿ ಎದೆಹಾಲುಣಿಸಬೇಕು. ಮೊದಲ ಆರು ತಿಂಗಳವರೆಗೆ ನೀರು ಸೇರಿದಂತೆ ಯಾವುದೇ ಬಾಹ್ಯ ಆಹಾರ ನೀಡದೆ ಕೇವಲ ತಾಯಿಯ ಎದೆಹಾಲನ್ನೇ ನೀಡಬೇಕು. ಆರು ತಿಂಗಳ ನಂತರ ಪೂರಕ ಆಹಾರದೊಂದಿಗೆ ಕನಿಷ್ಠ ಎರಡು ವರ್ಷ ಅಥವಾ ಅದಕ್ಕೂ ಹೆಚ್ಚು ಕಾಲ ಎದೆಹಾಲುಣಿಸುವುದು ಮಗುವಿನ ಅತ್ಯುತ್ತಮ ಬೆಳವಣಿಗೆಗೆ ಸಹಕಾರಿ ಎಂದು ಅವರು ವಿವರಿಸಿದರು.
ಮಕ್ಕಳ ತಜ್ಞೆ ಡಾ. ಜಯಮಾಲಾ ಮಾತನಾಡಿ, “ತಾಯಿಯ ಎದೆಹಾಲು ಮಗುವಿನ ಮೊದಲ ಆಹಾರ ಮಾತ್ರವಲ್ಲದೆ, ಮೊದಲ ರೋಗನಿರೋಧಕ ಕವಚವೂ ಆಗಿದೆ. ಮಗು ಜನಿಸಿದ ತಕ್ಷಣ ಬರುವ ಹಳದಿ ಬಣ್ಣದ ದಪ್ಪ ಹಾಲು (ಕೊಲೊಸ್ಟ್ರಮ್) ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಪ್ರಮುಖ ಪ್ರತಿಕಾಯಗಳು ಹಾಗೂ ಅತ್ಯಗತ್ಯ ಪೋಷಕಾಂಶಗಳಿಂದ ಸಮೃದ್ಧವಾಗಿದೆ. ಇದು ಅತಿಸಾರ, ನ್ಯುಮೋನಿಯಾ, ಕಿವಿ ಸೋಂಕುಗಳಂತಹ ಕಾಯಿಲೆಗಳಿಂದ ಮಗುವನ್ನು ರಕ್ಷಿಸುತ್ತದೆ. ಅಲ್ಲದೆ, ಅಲರ್ಜಿ, ಸ್ಥೂಲಕಾಯ, ಮಧುಮೇಹದಂತಹ ದೀರ್ಘಕಾಲದ ಸಮಸ್ಯೆಗಳನ್ನು ತಡೆಗಟ್ಟಿ, ಮೆದುಳಿನ ಶ್ರೇಷ್ಠ ಬೆಳವಣಿಗೆಗೆ ನೆರವಾಗುತ್ತದೆ” ಎಂದರು.
ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞೆ ಡಾ. ಭಾಗ್ಯಲಕ್ಷ್ಮಿ ಮಾತನಾಡಿ, “ಜನನದ ತಕ್ಷಣವೇ ತಾಯಿಯ ಎದೆಹಾಲು ನೀಡಬೇಕು ಹಾಗೂ ಬೇರೆ ಯಾವುದೇ ಆಹಾರ-ಪಾನೀಯ ನೀಡಬಾರದು. ತಾಯಿ ಕುಳಿತುಕೊಂಡು ಮಗುವಿಗೆ ಹಾಲುಣಿಸುವುದು ಸೂಕ್ತ ವಿಧಾನ. ಇದರಿಂದ ತಾಯಿ ಮತ್ತು ಮಗುವಿನ ನಡುವೆ ಮಾನಸಿಕ ಬಾಂಧವ್ಯ ಮತ್ತಷ್ಟು ಗಟ್ಟಿಯಾಗುತ್ತದೆ” ಎಂದು ಹೇಳಿದರು.
ಈ ಸಂದರ್ಭದಲ್ಲಿ ಆಡಳಿತ ವೈದ್ಯಾಧಿಕಾರಿ ಡಾ. ಪಾರ್ಥಸಾರಥಿ, ಮಕ್ಕಳ ತಜ್ಞ ಡಾ. ಮಹದೇವಸ್ವಾಮಿ, ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞೆ ಡಾ. ಭಾಗ್ಯಲಕ್ಷ್ಮಿ, ಮುಖಂಡ ಸ್ವಾಮಿ, ತಾಲ್ಲೂಕು ಆರೋಗ್ಯಾಧಿಕಾರಿ ಕಚೇರಿಯ ಸಿಬ್ಬಂದಿ, ಸಮುದಾಯ ಆರೋಗ್ಯ ಕೇಂದ್ರದ ಸಿಬ್ಬಂದಿ, ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರು, ಗರ್ಭಿಣಿಯರು, ಬಾಣಂತಿಯರು ಮತ್ತು ಸಾರ್ವಜನಿಕರು ಉಪಸ್ಥಿತರಿದ್ದರು.
ವರದಿ: ಹಾದನೂರು ಚಂದ್ರ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/CtZPUt7bwkaJkX2T6hAwZI
