ಸರಗೂರು: ಮಾಜಿ ಸಚಿವ ಡಾ. ಎಚ್.ಸಿ. ಮಹದೇವಪ್ಪ ಅವರನ್ನು ರಾಜ್ಯ ಸಚಿವ ಸಂಪುಟದಿಂದ ಕೈಬಿಟ್ಟಿರುವುದನ್ನು ಖಂಡಿಸಿ ಸರಗೂರು ಪಟ್ಟಣದ ಪ್ರವಾಸಿ ಮಂದಿರದಲ್ಲಿ ಶುಕ್ರವಾರ ಅಧಿಕರ್ನಾಟಕ ಮಹಾಸಭಾ ವತಿಯಿಂದ ಸಭೆ ನಡೆಸಿ ವಿವಿಧ ಸಂಘಟನೆಗಳ ಮುಖಂಡರು ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಸಭೆಯಲ್ಲಿ ಮಾತನಾಡಿದ ಅಧಿಕರ್ನಾಟಕ ಮಹಾಸಭಾ ಅಧ್ಯಕ್ಷ ಇಟ್ನ ರಾಜಣ್ಣ, ರಾಜ್ಯದ ಹಿಂದುಳಿದ ಹಾಗೂ ದಲಿತ ಸಮುದಾಯದ ಪ್ರಬಲ ನಾಯಕರಾದ ಡಾ. ಎಚ್.ಸಿ. ಮಹದೇವಪ್ಪ ಅವರನ್ನು ಸಚಿವ ಸಂಪುಟದಿಂದ ಕೈಬಿಟ್ಟಿರುವುದು ಸಮುದಾಯಕ್ಕೆ ಮಾಡಿದ ಅನ್ಯಾಯವಾಗಿದೆ. ಸರ್ಕಾರ ಕೂಡಲೇ ಈ ನಿರ್ಧಾರವನ್ನು ಮರುಪರಿಶೀಲಿಸಿ ಅವರಿಗೆ ಸಚಿವ ಸಂಪುಟದಲ್ಲಿ ಸ್ಥಾನ ಕಲ್ಪಿಸಬೇಕು ಎಂದು ಒತ್ತಾಯಿಸಿದರು.
ದಸಂಸ ಜಿಲ್ಲಾ ಸಂಚಾಲಕ ಎಸ್.ಡಿ. ಸಣ್ಣಸ್ವಾಮಿ ಮಾತನಾಡಿ, ಮಹದೇವಪ್ಪ ಅವರು ಸಮಾಜದ ಅಭಿವೃದ್ಧಿಗಾಗಿ ನಿರಂತರವಾಗಿ ಶ್ರಮಿಸಿದ ಹಿರಿಯ ನಾಯಕರಾಗಿದ್ದು, ಅವರನ್ನು ಕಡೆಗಣಿಸಿರುವುದು ಬೇಸರದ ಸಂಗತಿ. ಈ ನಿರ್ಧಾರದಿಂದ ಸಮುದಾಯದ ಜನರಲ್ಲಿ ತೀವ್ರ ಅಸಮಾಧಾನ ಉಂಟಾಗಿದೆ ಎಂದರು. ಮುಖಂಡ ಮುಳ್ಳೂರು ಪುಟ್ಟಸ್ವಾಮಿ ಮಾತನಾಡಿ, ಸಚಿವ ಸಂಪುಟದಲ್ಲಿ ಇನ್ನೂ ಒಂದು ಸ್ಥಾನ ಖಾಲಿ ಇರುವುದರಿಂದ ಡಾ. ಮಹದೇವಪ್ಪ ಅವರಿಗೆ ಅವಕಾಶ ನೀಡಬೇಕು, ಇಲ್ಲವಾದರೆ ಮುಂಬರುವ ಗ್ರಾಮ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಹಾಗೂ ಜಿಲ್ಲಾ ಪಂಚಾಯಿತಿ ಚುನಾವಣೆಗಳಲ್ಲಿ ಕಾಂಗ್ರೆಸ್ ಪಕ್ಷ ಇದಕ್ಕೆ ತಕ್ಕ ಉತ್ತರವನ್ನು ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ತುಂಬಸೋಗೆ ನಾಗಣ್ಣ ಮಾತನಾಡಿ, ಸಮುದಾಯದ ಭಾವನೆಗಳಿಗೆ ಸರ್ಕಾರ ಗೌರವ ನೀಡಿ, ಡಾ. ಮಹದೇವಪ್ಪ ಅವರಿಗೆ ಸಚಿವ ಸ್ಥಾನ ನೀಡುವ ಮೂಲಕ ಸಮುದಾಯದ ವಿಶ್ವಾಸವನ್ನು ಉಳಿಸಿಕೊಳ್ಳಬೇಕು ಎಂದು ಆಗ್ರಹಿಸಿದರು. ಈ ಸಂದರ್ಭದಲ್ಲಿ ಸುನೀಲ್ ಬೋಸ್ ಅಭಿಮಾನಿಗಳ ಬಳಗದ ಅಧ್ಯಕ್ಷ ದೇವಲಾಪುರ ಸಿದ್ದರಾಜು, ಮಾನವ ಹಕ್ಕುಗಳ ಮಿಷನ್ ಅಧ್ಯಕ್ಷ ಪಿ. ಚಿನ್ನಣ್ಣ, ಮುಖಂಡರಾದ ಮುಳ್ಳೂರು ಮಂಜುನಾಥ, ಕುಂದೂರು ಮೂರ್ತಿ, ಉಯ್ಯಂಬಳ್ಳಿ ನಾಗರಾಜು, ಬಿಲ್ಲಯ್ಯ ಸೇರಿದಂತೆ ಅಧಿಕರ್ನಾಟಕ ಮಹಾಸಭೆಯ ಪದಾಧಿಕಾರಿಗಳು ಹಾಗೂ ವಿವಿಧ ಸಂಘಟನೆಗಳ ನಾಯಕರು ಉಪಸ್ಥಿತರಿದ್ದರು.
ವರದಿ: ಹಾದನೂರು ಚಂದ್ರ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/CtZPUt7bwkaJkX2T6hAwZI
