ಬೆಂಗಳೂರು: ಕನ್ನಡ ಚಿತ್ರರಂಗದ ಖ್ಯಾತ ನಿರ್ದೇಶಕ ಹಾಗೂ ನಟ ಓಂಪ್ರಕಾಶ್ ರಾವ್ ವಿರುದ್ಧ ಬರೋಬ್ಬರಿ 3.85 ಕೋಟಿ ರೂ. ವಂಚನೆ ಮಾಡಿರುವ ಗಂಭೀರ ಆರೋಪ ಕೇಳಿಬಂದಿದೆ. ಈ ಸಂಬಂಧ ನಟ ಭಾಸ್ಕರ್ ಶೆಟ್ಟಿ ಅವರು ಬೆಂಗಳೂರು ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಅವರಿಗೆ ದೂರು ಸಲ್ಲಿಸಿದ್ದಾರೆ. ಅಲ್ಲದೆ ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾಸ್ಕರ್ ಶೆಟ್ಟಿ, ವಾಸುದೇವರೆಡ್ಡಿ, ವಸಂತಮ್ಮ ಹಾಗೂ ಜಯಲಕ್ಷ್ಮಿ ಎಂಬುವರು ಬ್ಯಾಡರಹಳ್ಳಿ ಪೊಲೀಸ್ ಠಾಣೆಯಲ್ಲೂ ದೂರು ದಾಖಲಿಸಿದ್ದಾರೆ.
ಓಂಪ್ರಕಾಶ್ ರಾವ್ ಅವರು ‘ಫೀನಿಕ್ಸ್’ (Phoenix) ಎಂಬ ಸಿನಿಮಾ ನಿರ್ಮಾಣಕ್ಕಾಗಿ ಹಂತ ಹಂತವಾಗಿ ಒಟ್ಟು 3 ಕೋಟಿ 85 ಲಕ್ಷ ರೂ.ಗಳನ್ನು ಪಡೆದು, ಅದನ್ನು ಮರುಪಾವತಿಸದೆ ವಂಚಿಸಿದ್ದಾರೆ ಎಂದು ದೂರುದಾರರು ಆರೋಪಿಸಿದ್ದಾರೆ.
ಮಾಹಿತಿಯ ಪ್ರಕಾರ, ಭಾಸ್ಕರ್ ಶೆಟ್ಟಿ ಅವರಿಂದ 40 ಲಕ್ಷ ರೂ. ಹಾಗೂ ವಾಸುದೇವ ಎಂಬುವವರಿಂದ 3 ಕೋಟಿ ರೂ.ಗೂ ಅಧಿಕ ಮೊತ್ತವನ್ನು ಆರ್ಥಿಕ ನೆರವಿನ ರೂಪದಲ್ಲಿ ಪಡೆಯಲಾಗಿತ್ತು. ವೈಯಕ್ತಿಕ ಸಾಲವಾಗಿ ಅಲ್ಲದೆ, ಸಿನಿಮಾ ನಿರ್ಮಾಣದ ಕಾರಣ ನೀಡಿ ಈ ಹಣವನ್ನು ಪಡೆದುಕೊಳ್ಳಲಾಗಿತ್ತು.
ದೂರುದಾರರಾದ ನಟ ಭಾಸ್ಕರ್ ಅವರು ಈ ಹಿಂದೆ ದರ್ಶನ್ ಅಭಿನಯದ ‘ಯೋಧ’ ಚಿತ್ರದಲ್ಲಿ ಓಂಪ್ರಕಾಶ್ ರಾವ್ ಅವರೊಂದಿಗೆ ಕೆಲಸ ಮಾಡಿದ್ದರು. ಆ ವೃತ್ತಿಪರ ಪರಿಚಯ ಹಾಗೂ ನಂಬಿಕೆಯ ಆಧಾರದ ಮೇಲೆ ನಿರ್ದೇಶಕರು ಆರ್ಥಿಕ ನೆರವು ಕೇಳಿದಾಗ ಹಣ ನೀಡಿದ್ದರು ಎನ್ನಲಾಗಿದೆ.
ನೀಡಿದ ಹಣವನ್ನು ವಾಪಸ್ ಕೇಳಲು ದೂರುದಾರರು ನಿರ್ದೇಶಕರ ಮನೆಗೆ ತೆರಳಿದಾಗ, ಹಣ ಹಿಂತಿರುಗಿಸುವ ಬದಲು ಅವರನ್ನು ನಿಂದಿಸಿ, ಅವಮಾನಿಸಿ ಬೆದರಿಕೆ ಹಾಕಲಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಸದ್ಯ ಈ ಪ್ರಕರಣವು ಪೊಲೀಸ್ ಮೆಟ್ಟಿಲೇರಿದ್ದು, ಸಿನಿಮಾಗಾಗಿ ಪಡೆದ ಹಣ ಹಾಗೂ ವಂಚನೆಗೆ ಸಂಬಂಧಿಸಿದ ಈ ವಿವಾದದ ಸಂಪೂರ್ಣ ಸತ್ಯಾಸತ್ಯತೆ ಪೊಲೀಸ್ ತನಿಖೆಯಿಂದಷ್ಟೇ ಹೊರಬರಬೇಕಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/CtZPUt7bwkaJkX2T6hAwZI
