ತುಮಕೂರು: ಸುಪ್ರೀಂ ಕೋರ್ಟ್ ಆದೇಶಂತೆ ನಗರಪಾಲಿಕೆ ಅಧಿಕಾರಿಗಳು ನಗರದಲ್ಲೇ ಫುಟ್ ಪಾತ್ ಅಂಗಡಿಗಳನ್ನು ತೆರವು ಮಾಡಿಸಿದ್ದಾರೆ. ಈ ಕ್ರಮದಿಂದ ನಗರದ ಎರಡೂವರೆ ಸಾವಿರಕ್ಕೂ ಹೆಚ್ಚು ಬೀದಿ ಬದಿ ವ್ಯಾಪಾರ ಮಾಡುತ್ತಿದ್ದ ಕುಟುಂಬಗಳು ಬದುಕು ಕಳೆದುಕೊಂಡು ಬೀದಿಪಾಲಾಗಿದ್ದಾರೆ. ಬೀದಿಬದಿ ವ್ಯಾಪಾರಿಗಳಿಗೆ ಪರ್ಯಾಯ ವ್ಯವಸ್ಥೆ ಮಾಡದೆ ತೆರವು ಮಾಡಿರುವುದು ಅಮಾನವೀಯ ಎಂದು ಕನ್ನಡ ಸೇನೆ ಜಿಲ್ಲಾಧ್ಯಕ್ಷ ಧನಿಯಾಕುಮಾರ್ ಹೇಳಿದರು.
ನಗರದಲ್ಲಿ ಸಮೃದ್ಧಿ ಬೀದಿಬದಿ ವ್ಯಾಪಾರಿಗಳ ಸಂಘದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂಕಷ್ಟದಲ್ಲಿರುವ ಬೀದಿಬದಿ ವ್ಯಾಪಾರಿಗಳ ಹೋರಾಟಕ್ಕೆ ಕನ್ನಡ ಸೇನೆ ಹಾಗೂ ವಿವಿಧ ಸಂಘಟನೆಗಳು ಬೆಂಬಲ ನೀಡಿವೆ. ತಮ್ಮ ವ್ಯಾಪಾರ ಕಳೆದುಕೊಂಡಿರುವ ಬೀದಿಬದಿ ವ್ಯಾಪಾರಿಗಳಿಗೆ ಪರ್ಯಾಯ ಜಾಗದ ವ್ಯವಸ್ಥೆ ಮಾಡದಿದ್ದರೆ ಬರುವ ಸೋಮವಾರ ನಗರಾಪಾಲಿಕೆ ಕಚೇರಿ ಎದುರು ತಮಟೆ ಚಳವಳಿ ನಡೆಸಲಾಗುವುದು. ನಂತರ ಜಿಲ್ಲಾಧಿಕಾರಿಗಳ ಕಚೇರಿಗೆ ಪಾದಯಾತ್ರೆ ತೆರಳಿ ಜಿಲ್ಲಾಧಿಕಾರಿಗಳಿಗೆ ಮನವಿಪತ್ರ ನೀಡಲಾಗುವುದು ಎಂದರು.
ನಗರದ ವಿವಿಧ ರಸ್ತೆಗಳ ಫುಟ್ ಪಾತ್ ಗಳಲ್ಲಿ ಪಾದಚಾರಿಗಳ ಓಡಾಟಕ್ಕೆ ತೊಂದರೆ ಆಗದಂತೆ ಹಲಾವರು ವರ್ಷಗಳಿಂದ ಸಣ್ಣ ಪ್ರಮಾಣದ ವ್ಯಾಪಾರ ಮಾಡಿಕೊಂಡು ಬದುಕು ಕಟ್ಟಿಕೊಂಡಿದ್ದರು. ನಗರಾಪಾಲಿಕೆಯಿಂದ ಪರವಾನಗಿ, ಗುರುತಿನ ಚೀಟಿ ಪಡೆದಿದ್ದರು. ಬ್ಯಾಂಕ್ ಹಾಗೂ ಖಾಸಗಿಯವರಲ್ಲಿ ಸಾಲ ಪಡೆದು ವ್ಯವಹಾರ ಮಾಡಿಕೊಂಡಿದ್ದರು. ಇದರಲ್ಲಿ ತಮ್ಮ ಮಕ್ಕಳ ವಿದ್ಯಾಭ್ಯಾಸ, ಕುಟುಂಬ ನಿರ್ವಹಣೆ ಮಾಡುತ್ತಿದ್ದರು. ಈಗ ಏಕಾಏಕಿ ಫುಟ್‌ಪಾತ್ ವ್ಯಾಪಾರಿಗಳ ಅಂಗಡಿಗಳನ್ನು ಜೆಸಿಬಿ ಮೂಲಕ ತೆರವು ಮಾಡಿರುವುದು ಅಕ್ಷಮ್ಯ ಅಪರಾಧವಾಗಿದೆ.
ಕಾನೂನು ಪಾಲನೆ ಜೊತೆಗೆ ಮಾನವೀಯತೆಯನ್ನು ಅಧಿಕಾರಿಗಳು ಮರೆಯಬೀಕು. ಇವರ ವ್ಯಾಪಾರಕ್ಕೆ ಪ್ರತ್ಯೇಕ ಜಾಗದ ವ್ಯವಸ್ಥೆ ಮಾಡಿ ಬದುಕಿಗೆ ಪುನರ್ ವ್ಯವಸ್ಥೆ ಕಲ್ಪಿಸಬೇಕು ಎಂದು ಹೇಳಿದರು. ಸಾಮಾನ್ಯವಾಗಿ ಅಧಿಕಾರಿಗಳು ಬಡವರ ಮೇಲೆ ಕಾನೂನಿನ ಅಧಿಕಾರ ಚಲಾಯಿಸುತ್ತಾರೆ. ಅನೇಕ ಶ್ರೀಮಂತರು ರಾಯಗಳುವೆ, ಫುಟ್‌ಪಾತ್ ಒತ್ತುವರಿ ಮಾಡಿ ಕಟ್ಟಡ ಕಟ್ಟಿದ್ದಾರೆ. ಪ್ರಮುಖ ರಸ್ತೆಗಳಲ್ಲಿ ವಾಣಿಜ್ಯ ಮಳಿಗೆಗಳಲ್ಲಿ ಪಾರ್ಕಿಂಗ್ ಜಾಗ ಬಿಡದೆ ನಿಯಮ ಉಲ್ಲಂಘಿಸಿದ್ದಾರೆ. ಅಂತಹವರ ವಿರುದ್ಧ ಅಧಿಕಾರಿಗಳು ಯಾವುದೇ ಕ್ರಮ ತೆಗೆದುಕೊಳ್ಳದೆ ಬೀದಿಬದಿ ವ್ಯಾಪಾರಿಗಳ ವಿರುದ್ಧ ಗುಬ್ಬಿ ಮೇಲೆ ಬ್ರಹ್ಮಾಸ್ತ್ರ ಪ್ರಯೋಗಿಸಿದ್ದಾರೆ ಎಂದರು.
ಕನ್ನಡ ಸೇನೆ ರಾಜ್ಯ ಕಾರ್ಯದರ್ಶಿ ಮೀಸೆ ಸತೀಶ್, ಸಮೃದ್ಧಿ ಬೀದಿಬದಿ ವ್ಯಾಪಾರಿಗಳ ಸಂಘದ ಅಧ್ಯಕ್ಷ ಟಿ.ಕೆ. ಮಂಜುನಾಥ್, ಉಪಾಧ್ಯಕ್ಷ ಗಂಗಸಂದ್ರ ರಾಜು, ಮುಖಂಡರಾದ ಪ್ರಭಾಕರ್, ಸಿ. ಲೋಕೇಶ್, ಸೈಯದ್, ಮಂಜುಳಾ, ಪಾರ್ವತಮ್ಮ ಮತ್ತಿತರ ವ್ಯಾಪಾರಿಗಳು ಹಾಜರಿದ್ದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/CtZPUt7bwkaJkX2T6hAwZI
