ಬೆಂಗಳೂರು: ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ’80ರ ದಶಕದ ಟ್ರೆಂಡ್’ (1980s AI Photo Trend) ಜೋರಾಗಿಯೇ ಸದ್ದು ಮಾಡುತ್ತಿದೆ. ರಾಜಕಾರಣಿಗಳು, ಸಿನಿಮಾ ತಾರೆಯರು, ಕ್ರೀಡಾಪಟುಗಳು ಸೇರಿದಂತೆ ಸಾಮಾನ್ಯ ಜನರೂ ಸಹ ತಮ್ಮ ಹಳೆಯ ಅಥವಾ ಈಗಿನ ಫೋಟೋಗಳನ್ನು 80ರ ದಶಕದ ರೆಟ್ರೋ ಲುಕ್ಗೆ (Retro Look) ಅಂದರೆ ಕರ್ಲಿ ಹೇರ್ ಸ್ಟೈಲ್, ಡೆನಿಮ್ ಜೀನ್ಸ್ ಹಾಗೂ ಹಳೆಯ ಕಾಲದ ಶೈಲಿಗೆ ಬದಲಾಯಿಸಿಕೊಂಡು ವಾಟ್ಸ್ಆ್ಯಪ್ ಸ್ಟೇಟಸ್, ಫೇಸ್ಬುಕ್ ಹಾಗೂ ಇನ್ಸ್ಟಾಗ್ರಾಮ್ ನಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಆದರೆ, ಈ ಹುಚ್ಚಾಟಕ್ಕೆ ಬಲಿಯಾಗುವ ಮುನ್ನ ಎಚ್ಚೆತ್ತುಕೊಳ್ಳುವಂತೆ ಸೈಬರ್ ತಜ್ಞರು ಮತ್ತು ಪೊಲೀಸರು ಗಂಭೀರ ಎಚ್ಚರಿಕೆ ನೀಡಿದ್ದಾರೆ.
ಫೋಟೋ ಎಡಿಟಿಂಗ್ ಹೆಸರಿನಲ್ಲಿ ಸಾರ್ವಜನಿಕರನ್ನು ವಂಚಿಸುವ ಜಾಲ ಸಕ್ರಿಯವಾಗಿದೆ. 80ರ ದಶಕದ ಫೋಟೋಗಳನ್ನು ಸೃಷ್ಟಿಸಲು ಜನರು ವಿವಿಧ ಮೊಬೈಲ್ ಆ್ಯಪ್ ಗಳು ಹಾಗೂ ಆನ್ ಲೈನ್ ಲಿಂಕ್ಗಳನ್ನು ಅತಿ ಉತ್ಸಾಹದಿಂದ ಬಳಸುತ್ತಿದ್ದಾರೆ. ಯಾವುದೇ ಪರಿಶೀಲನೆ ಇಲ್ಲದೆ ಅಪರಿಚಿತ ಆ್ಯಪ್ ಗಳನ್ನು ಡೌನ್ ಲೋಡ್ ಮಾಡಿಕೊಳ್ಳುವುದು ಮತ್ತು ಆ್ಯಪ್ ಗಳು ಕೇಳುವ ಎಲ್ಲಾ ಪರ್ಮಿಷನ್ಗಳಿಗೆ (Permissions) ಕಣ್ಮುಚ್ಚಿ ಒಪ್ಪಿಗೆ ನೀಡುವುದರಿಂದ ದೊಡ್ಡ ಆಪತ್ತು ಕಾದಿದೆ.
ಆ್ಯಪ್ ಗಳಿಗೆ ಪ್ರವೇಶ ನೀಡುವಾಗ ಮೊಬೈಲ್ ನಲ್ಲಿರುವ ವೈಯಕ್ತಿಕ ಫೋಟೋಗಳು, ವೀಡಿಯೊಗಳು ಹಾಗೂ ರಹಸ್ಯ ಮಾಹಿತಿಗಳು ಹ್ಯಾಕರ್ ಗಳ ಪಾಲಾಗುವ ಸಾಧ್ಯತೆ ಹೆಚ್ಚಿದೆ. ಎಐ (AI) ಫೋಟೋಗಳನ್ನು ಸೃಷ್ಟಿಸಲು ಮುಖದ ಗುರುತನ್ನು (Face Recognition) ನೀಡುವುದರಿಂದ ಸೈಬರ್ ವಂಚಕರು ನಿಮ್ಮ ಗುರುತನ್ನು (Identity Theft) ಕಳ್ಳತನ ಮಾಡುವ ಸಂಭವವಿದೆ.
ಇಂತಹ ರೆಟ್ರೋ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಪದೇ ಪದೇ ಶೇರ್ ಮಾಡುವುದರಿಂದ ಸೈಬರ್ ಕಳ್ಳರಿಗೆ ಇನ್ನಷ್ಟು ಅನುಕೂಲವಾಗುತ್ತದೆ.
ಯಾವುದೇ ಟ್ರೆಂಡಿಂಗ್ ವಿಷಯಗಳನ್ನು ದುರುಪಯೋಗಪಡಿಸಿಕೊಳ್ಳುವ ಸೈಬರ್ ವಂಚಕರಿಂದ ಎಚ್ಚರದಿಂದಿರಬೇಕು. ವೈಯಕ್ತಿಕ ಮಾಹಿತಿ ಸೋರಿಕೆಯಾಗದಂತೆ ಮುನ್ನೆಚ್ಚರಿಕೆ ವಹಿಸುವುದು ಅತ್ಯಗತ್ಯವಾಗಿದ್ದು, ಕೇವಲ ಲೈಕ್ಸ್ ಮತ್ತು ಕಾಮೆಂಟ್ ಗಳ ಆಸೆಗೆ ಬಿದ್ದು ಇಂತಹ ಅಪರಿಚಿತ ಆ್ಯಪ್ಗಳನ್ನು ಡೌನ್ಲೋಡ್ ಮಾಡಿಕೊಳ್ಳಬೇಡಿ ಎಂದು ತಜ್ಞರು ಮತ್ತು ಪೊಲೀಸರು ಸಾರ್ವಜನಿಕರಿಗೆ ಮನವಿ ಮಾಡಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/CtZPUt7bwkaJkX2T6hAwZI
