ಬಳ್ಳಾರಿ: ಕೌಟುಂಬಿಕ ಕಲಹ ಹಾಗೂ ಪತ್ನಿಯ ಜತೆಗಿನ ವಿವಾದದಿಂದ ನೊಂದ ವ್ಯಕ್ತಿಯೊಬ್ಬ ವಿದ್ಯುತ್ ಟ್ರಾನ್ಸ್ಫಾರ್ಮರ್ ಏರಿ ಆತಂಕ ಸೃಷ್ಟಿಸಿದ ರೋಚಕ ಘಟನೆ ಬಳ್ಳಾರಿಯಲ್ಲಿ ನಡೆದಿದೆ. ಬ್ರೂಸ್ಪೇಟೆ ಪೊಲೀಸ್ ಠಾಣೆಯ ಮುಂಭಾಗವೇ ಈ ಹೈಡ್ರಾಮಾ ನಡೆದಿದ್ದು, ಸ್ಥಳದಲ್ಲಿದ್ದ ಪೊಲೀಸರು ಹಾಗೂ ಸಾರ್ವಜನಿಕರನ್ನು ಬೆಚ್ಚಿಬೀಳುವಂತೆ ಮಾಡಿದೆ.
ಬಳ್ಳಾರಿಯ ಮುರಾರ್ಜಿ (ಮುಂದರಗಿ) ಪ್ರದೇಶದ ನಿವಾಸಿ ಇಸ್ಮಾಯಿಲ್ ಟ್ರಾನ್ಸ್ಫಾರ್ಮರ್ ಏರಿದ ವ್ಯಕ್ತಿ ಎಂದು ಗುರುತಿಸಲಾಗಿದೆ.
ಇಸ್ಮಾಯಿಲ್ ಹಾಗೂ ಅವರ ಪತ್ನಿ ಕೌಟುಂಬಿಕ ಸಮಸ್ಯೆಗೆ ಸಂಬಂಧಿಸಿದಂತೆ ಬ್ರೂಸ್ಪೇಟೆ ಪೊಲೀಸ್ ಠಾಣೆಗೆ ಬಂದಿದ್ದರು. ಠಾಣೆಯಲ್ಲಿ ಪೊಲೀಸರು ಇವರ ವಿಚಾರಣೆ ನಡೆಸುತ್ತಿದ್ದ ವೇಳೆ, ಇಸ್ಮಾಯಿಲ್ ಹಠಾತ್ತನೆ ಠಾಣೆಯಿಂದ ಹೊರಗೋಡಿ ಬಂದಿದ್ದಾರೆ. ಬಳಿಕ ಠಾಣೆಯ ಎದುರು ಇದ್ದ ವಿದ್ಯುತ್ ಟ್ರಾನ್ಸ್ಫಾರ್ಮರ್ ಅನ್ನು ಹತ್ತಿ ಕುಳಿತಿದ್ದಾರೆ.
ಪತ್ನಿಯ ಕಾಟ ಹಾಗೂ ಕೌಟುಂಬಿಕ ಕಲಹಕ್ಕೆ ಬೇಸತ್ತು ಅವರು ಈ ರೀತಿ ಮಾಡಿರುವುದಾಗಿ ಪ್ರಾಥಮಿಕ ಮಾಹಿತಿಯಿಂದ ತಿಳಿದುಬಂದಿದೆ. ಜೀವಂತ ವಿದ್ಯುತ್ ಟ್ರಾನ್ಸ್ಫಾರ್ಮರ್ ಮೇಲೆ ವ್ಯಕ್ತಿ ಕುಳಿತಿರುವುದನ್ನು ಕಂಡು ಪೊಲೀಸರು ಮತ್ತು ಸ್ಥಳೀಯರು ತೀವ್ರ ಆತಂಕಕ್ಕೊಳಗಾದರು.
ತಕ್ಷಣವೇ ಎಚ್ಚೆತ್ತ ಪೊಲೀಸರು, ವ್ಯಕ್ತಿಯನ್ನು ಸುರಕ್ಷಿತವಾಗಿ ಕೆಳಗಿಳಿಸಲು ಹರಸಾಹಸ ಪಟ್ಟರು. ಬಹಳ ಸಮಯದವರೆಗೆ ಮನವರಿಕೆ ಮಾಡಲು ಯತ್ನಿಸಿದ ಬಳಿಕ, ಕೊನೆಗೂ ಪೊಲೀಸರು ಇಸ್ಮಾಯಿಲ್ ಅವರನ್ನು ಯಾವುದೇ ಅಪಾಯವಿಲ್ಲದೆ ಕೆಳಗಿಳಿಸುವಲ್ಲಿ ಯಶಸ್ವಿಯಾದರು. ಈ ವಿಚಿತ್ರ ಹಾಗೂ ಆಘಾತಕಾರಿ ಘಟನೆಯ ದೃಶ್ಯವನ್ನು ಸ್ಥಳದಲ್ಲಿದ್ದ ಕೆಲವರು ಮೊಬೈಲ್ನಲ್ಲಿ ಸೆರೆಹಿಡಿದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋ ವೈರಲ್ ಆಗಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/CtZPUt7bwkaJkX2T6hAwZI
