ಬೆಂಗಳೂರು: ರಾಜ್ಯದ ಪೆಟ್ರೋಲ್ ಬಂಕ್‌ಗಳಲ್ಲಿ ಗ್ರಾಹಕರಿಗೆ ತೂಕ ಮತ್ತು ಅಳತೆಯಲ್ಲಿ ಮೋಸ ಮಾಡುತ್ತಿರುವ ಪ್ರಕರಣಗಳು ದೊಡ್ಡ ಮಟ್ಟದಲ್ಲಿ ಬೆಳಕಿಗೆ ಬಂದಿವೆ. ರಾಜ್ಯ ಸರ್ಕಾರದ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ನಡೆಸಿದ ತಪಾಸಣೆಯ ವೇಳೆ ಬರೋಬ್ಬರಿ ಶೇ. 85ಕ್ಕೂ ಅಧಿಕ ಪೆಟ್ರೋಲ್ ನೊಝಲ್ ಗಳಲ್ಲಿ (ಗನ್ ಗಳಲ್ಲಿ) ಅಳತೆ ವ್ಯತ್ಯಯ ಇರುವುದು ಪತ್ತೆಯಾಗಿದ್ದು, ಸರ್ಕಾರವು ಇದರ ವಿರುದ್ಧ ಕಠಿಣ ಕ್ರಮಕ್ಕೆ ಮುಂದಾಗಿದೆ.
ವಿಕಾಸಸೌಧದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಸಚಿವ ರಿಜ್ವಾನ್ ಅರ್ಷದ್, ರಾಜ್ಯಾದ್ಯಂತ ಪೆಟ್ರೋಲ್ ಬಂಕ್ ಗಳ ಮೇಲೆ ಹಠಾತ್ ದಾಳಿ ನಡೆಸಿ ತಪಾಸಣೆ ತೀವ್ರಗೊಳಿಸುವಂತೆ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದ್ದಾರೆ.
ರಾಜ್ಯಾದ್ಯಂತ ಒಟ್ಟು 5,946 ಪೆಟ್ರೋಲ್ ಬಂಕ್ ಗಳಿದ್ದು, ಕಳೆದ ಒಂದು ವಾರದಲ್ಲಿ ಅಧಿಕಾರಿಗಳು 805 ಬಂಕ್‌ಗಳಲ್ಲಿ ದಿಢೀರ್ ಪರಿಶೀಲನೆ ನಡೆಸಿದ್ದಾರೆ. ಈ ಪೈಕಿ ಬರೋಬ್ಬರಿ 768 ಬಂಕ್ ಗಳಲ್ಲಿ ಅಳತೆಯಲ್ಲಿ ವ್ಯತ್ಯಯ ಕಂಡುಬಂದಿರುವುದು ಆತಂಕಕಾರಿ ವಿಷಯವಾಗಿದೆ.
ಪರಿಶೀಲನೆ ನಡೆಸಲಾದ 805 ಬಂಕ್‌ಗಳ ಒಟ್ಟು 3,071 ಪೆಟ್ರೋಲ್ ಗನ್‌ಗಳಲ್ಲಿ, ಬರೋಬ್ಬರಿ 2,618 ಗನ್ ಗಳಲ್ಲಿ (ಅಂದರೆ ಶೇ. 85ಕ್ಕೂ ಹೆಚ್ಚು) ನಿಗದಿತ ಅಳತೆಗಿಂತ ಕಡಿಮೆ ಇಂಧನ ನೀಡುತ್ತಿರುವುದು (Short delivery) ದೃಢಪಟ್ಟಿದೆ. ಅಳತೆಯಲ್ಲಿ ಮೋಸ ಮಾಡುತ್ತಿರುವ 101 ಪೆಟ್ರೋಲ್ ಬಂಕ್ ಗಳ ವಿರುದ್ಧ ಈಗಾಗಲೇ ಕಾನೂನುರೀತ್ಯ ಪ್ರಕರಣಗಳನ್ನು ದಾಖಲಿಸಲಾಗಿದ್ದು, ಒಟ್ಟು 6.66 ಲಕ್ಷ ರೂಪಾಯಿಗಳಿಗೂ ಅಧಿಕ ದಂಡ ವಸೂಲಿ ಮಾಡಲಾಗಿದೆ.
ಕೇಂದ್ರ ಸರ್ಕಾರವು ಪೆಟ್ರೋಲ್ ಬಂಕ್ ಗಳ ಕ್ಯಾಲಿಬರೇಷನ್ (ಪರಿಶೀಲನೆ) ಅವಧಿಯನ್ನು ಹಿಂದೆ ಇದ್ದ 1 ವರ್ಷದಿಂದ 2 ವರ್ಷಕ್ಕೇರಿಸಿರುವುದನ್ನು ಮತ್ತು ಖಾಸಗಿಯವರಿಂದ ಕ್ಯಾಲಿಬರೇಷನ್‌ಗೆ ಅವಕಾಶ ನೀಡಿರುವುದನ್ನು ರಾಜ್ಯ ಸರ್ಕಾರ ತೀವ್ರವಾಗಿ ವಿರೋಧಿಸಿದೆ. ಇದರಿಂದ ಗ್ರಾಹಕರಿಗೆ ಮೋಸವಾಗುವ ಸಾಧ್ಯತೆಯಿದ್ದು, ಈ ಬಗ್ಗೆ ಕೇಂದ್ರಕ್ಕೆ ಪತ್ರ ಬರೆಯಲಾಗುವುದು ಎಂದು ತಿಳಿಸಲಾಗಿದೆ.
ಪೆಟ್ರೋಲ್ ಬಂಕ್ ಗಳಲ್ಲಿ ಇಂಧನ ತುಂಬಿಸುವಾಗ ಮೋಸವಾಗುತ್ತಿದೆ ಅಥವಾ ಅಳತೆಯ ಬಗ್ಗೆಯೂ ಅನುಮಾನವಿದ್ದರೆ ಗ್ರಾಹಕರು ನೇರವಾಗಿ ದೂರು ನೀಡಲು ಸರ್ಕಾರ ಟೋಲ್–ಫ್ರೀ ಸಂಖ್ಯೆಯನ್ನು ಬಿಡುಗಡೆ ಮಾಡಿದೆ. ಸಾರ್ವಜನಿಕರು ಯಾವುದೇ ಅಕ್ರಮ ಅಥವಾ ತೂಕದ ವ್ಯತ್ಯಯ ಕಂಡುಬಂದಲ್ಲಿ 1800-599-1100 ಸಹಾಯವಾಣಿಗೆ ಕರೆ ಮಾಡಿ ದೂರು ದಾಖಲಿಸಬಹುದಾಗಿದೆ.
ಮುಂದಿನ ದಿನಗಳಲ್ಲಿ ರಾಜ್ಯದ ಉಳಿದ ಎಲ್ಲಾ ಬಂಕ್‌ಗಳಲ್ಲೂ ತಪಾಸಣೆ ಮುಂದುವರಿಯಲಿದ್ದು, ನಿಯಮ ಮೀರುವ ಬಂಕ್‌ಗಳ ಲೈಸೆನ್ಸ್ ರದ್ದುಗೊಳಿಸುವ ಎಚ್ಚರಿಕೆಯನ್ನು ಸರ್ಕಾರ ನೀಡಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/CtZPUt7bwkaJkX2T6hAwZI
