ಬೀದರ್: ಜಿಲ್ಲೆಯ ಔರಾದ್ ತಾಲೂಕಿನ ಸುಂಧಾಳ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಖಾಸೆಂಪೂರ ಗ್ರಾಮದಲ್ಲಿ ಶುಕ್ರವಾರ ವಿಬಿ–ಜಿ ರಾಮ್ ಜಿ ಯೋಜನೆಯಡಿ ನಡೆಯುತ್ತಿರುವ ರಸ್ತೆ ನಿರ್ಮಾಣ ಹಾಗೂ ಸಸಿ ನೆಡುವಿಕೆ ಕಾಮಗಾರಿ ಸ್ಥಳದಲ್ಲಿಯೇ ಕೂಲಿಕಾರ್ಮಿಕರೊಂದಿಗೆ ‘ರೋಜ್ಗಾರ್ ದಿನಾಚರಣೆ’ಯನ್ನು ಆಚರಿಸಲಾಯಿತು.
ಕಾಮಗಾರಿ ಸ್ಥಳದಲ್ಲಿ ತಾಲೂಕು ಪಂಚಾಯತ್ ಸಹಾಯಕ ನಿರ್ದೇಶಕ (ಗ್ರಾ.ಉ) ಶಿವಕುಮಾರ ಘಾಟೆ ಅವರು ಕೂಲಿಕಾರ್ಮಿಕರೊಂದಿಗೆ ಸಂವಾದ ನಡೆಸಿ, ವಿಬಿ–ಜಿ ರಾಮ್ ಜಿ ಯೋಜನೆಯ ಉದ್ದೇಶ, ಅನುಷ್ಠಾನ ಹಾಗೂ ಗ್ರಾಮೀಣ ಕುಟುಂಬಗಳಿಗೆ ಯೋಜನೆಯಡಿ ದೊರೆಯುವ ಉದ್ಯೋಗಾವಕಾಶಗಳ ಕುರಿತು ಮಾಹಿತಿ ನೀಡಿದರು. ಗ್ರಾಮೀಣ ಪ್ರದೇಶದ ಅರ್ಹ ಕುಟುಂಬಗಳಿಗೆ ಸ್ಥಳೀಯವಾಗಿಯೇ ಉದ್ಯೋಗಾವಕಾಶ ಕಲ್ಪಿಸುವುದು ಯೋಜನೆಯ ಪ್ರಮುಖ ಉದ್ದೇಶವಾಗಿದ್ದು, ಕೂಲಿಕಾರ್ಮಿಕರು ತಮ್ಮ ಜಾಬ್ ಕಾರ್ಡ್‌ಗಳನ್ನು ಸಕ್ರಿಯವಾಗಿ ಬಳಸಿಕೊಂಡು ಗ್ರಾಮ ಪಂಚಾಯಿತಿಗೆ ಕೆಲಸಕ್ಕಾಗಿ ಬೇಡಿಕೆ ಸಲ್ಲಿಸಬೇಕು ಎಂದು ತಿಳಿಸಿದರು. ಅಲ್ಲದೆ, ಯೋಜನೆಯಡಿ ಲಭ್ಯವಿರುವ ವಿವಿಧ ವೈಯಕ್ತಿಕ ಹಾಗೂ ಸಮುದಾಯ ಆಧಾರಿತ ಕಾಮಗಾರಿಗಳ ಸದುಪಯೋಗ ಪಡೆದುಕೊಳ್ಳುವಂತೆ ಮಾಹಿತಿ ನೀಡಿದರು.
ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಶ್ರೀಪತರಾವ ಚಿಟಗೀರೆ ಮಾತನಾಡಿ, ವೈಯಕ್ತಿಕ ಹಾಗೂ ಸಮುದಾಯ ಆಧಾರಿತ ಕಾಮಗಾರಿಗಳ ಮೂಲಕ ಗ್ರಾಮಗಳ ಅಭಿವೃದ್ಧಿಗೆ ಉತ್ತೇಜನ ನೀಡುವುದರ ಜೊತೆಗೆ, ಗ್ರಾಮೀಣ ಕುಟುಂಬಗಳಿಗೆ ಸ್ಥಳೀಯವಾಗಿಯೇ ಉದ್ಯೋಗ ಒದಗಿಸಲಾಗುತ್ತಿದೆ ಎಂದರು.
ಇದೇ ವೇಳೆ ತಾಲೂಕು ಪಂಚಾಯತ್ ತಾಂತ್ರಿಕ ಸಂಯೋಜಕ ಆನಂದ ಕಾಳಗಾಪೂರೆ, ತಾಂತ್ರಿಕ ಸಹಾಯಕ ಸಂದೀಪ, ಐಇಸಿ ಸಂಯೋಜಕ ಅಂಬಾದಾಸ ಪಾಟೀಲ್, ಕಲಾವತಿ, ರುಕ್ಮಿಣಿ, ಜಗದೀಶ್ ಪಾಟೀಲ್, ವೆಂಕಟ್ ಪಾಟೀಲ್ ಖಾಸೆಂಪೂರ್, ಬಂಡೆಪ್ಪ, ಸಂಜು ರೊಂಡೆ, ವಿಜಯಕುಮಾರ ಮೇತ್ರೆ, ಪ್ರಭು ಪಾಟೀಲ್, ಮಹೇಶ್, ಇರ್ಷದ್ ಸೇರಿದಂತೆ ಕೂಲಿಕಾರ್ಮಿಕರು ಉಪಸ್ಥಿತರಿದ್ದರು.
ವರದಿ: ಅರವಿಂದ ಮಲ್ಲೀಗೆ, ಬೀದರ್
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/CtZPUt7bwkaJkX2T6hAwZI
