ಔರಾದ್/ಬೀದರ್ : ಗ್ರಾಮೀಣ ಪ್ರದೇಶಗಳಲ್ಲಿ ವಿಬಿ–ಜಿ ರಾಮ್ ಜಿ ಯೋಜನೆಯಡಿ ಕೂಲಿ ಕೆಲಸ ಮಾಡುತ್ತಿರುವ ಕಾರ್ಮಿಕರಿಗೆ ಎನ್ ಎಂಎಂಎಸ್ (NMMS) ಆ್ಯಪ್ ಅಪ್ ಡೇಟ್ ನ ತಾಂತ್ರಿಕ ದೋಷದಿಂದಾಗಿ ತೀವ್ರ ಸಂಕಷ್ಟ ಎದುರಾಗಿದೆ. ಕಳೆದ ಎರಡು ದಿನಗಳಿಂದ ಸರ್ವರ್ ಕೈಕೊಟ್ಟಿರುವ ಹಿನ್ನೆಲೆಯಲ್ಲಿ ಹಾಜರಿ ದಾಖಲಿಸಲು ಕಾರ್ಮಿಕರು ಪರದಾಡುವಂತಾಗಿದೆ.
ತಾಲೂಕಿನ ಹಲವು ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯ ಕಾಮಗಾರಿಗಳಿಗೆ ಕಾರ್ಮಿಕರು ಪ್ರತಿದಿನ ಬೆಳಗ್ಗೆಯೇ ತಮ್ಮ ಗ್ರಾಮಗಳಿಂದ ಕಿಲೋಮೀಟರ್ ಗಟ್ಟಲೆ ನಡೆದುಕೊಂಡು ಕೆಲಸದ ಸ್ಥಳಕ್ಕೆ ಆಗಮಿಸುತ್ತಿದ್ದಾರೆ. ಆದರೆ ಎನ್ ಎಂಎಂಎಸ್ ಆ್ಯಪ್ ನಲ್ಲಿ ಸರ್ವರ್ ಸಮಸ್ಯೆ ನಿರಂತರವಾಗಿ ಕಾಣಿಸಿಕೊಳ್ಳುತ್ತಿರುವುದರಿಂದ, ಸಮಯಕ್ಕೆ ಸರಿಯಾಗಿ ಹಾಜರಿ ದಾಖಲಿಸಲು ಸಾಧ್ಯವಾಗದೆ ಗಂಟೆಗಟ್ಟಲೆ ಕಾಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಕಷ್ಟಪಟ್ಟು ಕೆಲಸ ಮಾಡಲು ಬಂದರೂ ಆಪ್ ನಲ್ಲಿ ಹಾಜರಿ ದಾಖಲಾಗದಿದ್ದರೆ, ದಿನಗೂಲಿ ಸಿಗುವುದಿಲ್ಲವೇ ಎಂಬ ಆತಂಕ ಬಡ ಕಾರ್ಮಿಕರಲ್ಲಿ ಮನೆ ಮಾಡಿದೆ.
ಬಡ ಕುಟುಂಬಗಳ ಜೀವನಾಧಾರವಾಗಿರುವ ಈ ಕೂಲಿ ಕೆಲಸಕ್ಕೆ ದೂರದ ಊರುಗಳಿಂದ ಬರುವ ಕಾರ್ಮಿಕರು, ತಾಂತ್ರಿಕ ಸಮಸ್ಯೆಯಿಂದಾಗಿ ಅನಗತ್ಯವಾಗಿ ಸಮಯ ಕಳೆಯುವಂತಾಗಿದೆ. ಪ್ರತಿದಿನದ ಹಾಜರಿ ದಾಖಲಾತಿ ಮತ್ತು ಕೂಲಿ ಪಾವತಿಗೆ ತಾಂತ್ರಿಕ ವ್ಯವಸ್ಥೆ ಸುಸೂತ್ರವಾಗಿರಬೇಕು. ಹೀಗಾಗಿ, ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಎಚ್ಚೆತ್ತುಕೊಂಡು ಸರ್ವರ್ ಸಮಸ್ಯೆಯನ್ನು ತಕ್ಷಣ ಪರಿಹರಿಸಬೇಕು ಹಾಗೂ ಕಾರ್ಮಿಕರ ಹಾಜರಿ ತಪ್ಪದೇ ದಾಖಲಾಗುವಂತೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಕಾರ್ಮಿಕರು ಒತ್ತಾಯಿಸಿದ್ದಾರೆ.
ವರದಿ: ಅರವಿಂದ ಮಲ್ಲೀಗೆ, ಬೀದರ್
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/CtZPUt7bwkaJkX2T6hAwZI
