ಬೆಂಗಳೂರು: ಅನುಕಂಪದ ಆಧಾರದ ಮೇಲೆ ಸರ್ಕಾರಿ ನೌಕರಿ ಪಡೆದ ವ್ಯಕ್ತಿಯು, ತಾನು ಅಗತ್ಯ ಶೈಕ್ಷಣಿಕ ಅರ್ಹತೆ ಹೊಂದಿದ್ದೇನೆ ಎಂಬ ಕಾರಣಕ್ಕಾಗಿ ಉನ್ನತ ಹುದ್ದೆಗಳು, ಉತ್ತಮ ಶ್ರೇಣಿಗಳು ಅಥವಾ ಹೆಚ್ಚಿನ ಸೇವಾ ಸೌಲಭ್ಯಗಳನ್ನು ಕೋರುವ ಹಕ್ಕಿಲ್ಲ ಎಂದು ಕರ್ನಾಟಕ ಹೈಕೋರ್ಟ್ ಸ್ಪಷ್ಟಪಡಿಸಿದೆ.
ಅನುಕಂಪದ ಮೇಲಿನ ನೇಮಕಾತಿ ಯೋಜನೆಯ ಉದ್ದೇಶವು ಅದರಲ್ಲಿ ನಿರ್ದಿಷ್ಟಪಡಿಸಿದ ಹುದ್ದೆಗೆ ನೇಮಕಗೊಳ್ಳುವ ಮೂಲಕ ಈಡೇರುತ್ತದೆ. ಆ ಬಳಿಕ ಮತ್ತೊಂದು ಅಥವಾ ಉನ್ನತ ಹುದ್ದೆಯನ್ನು ಪಡೆಯಲು ಮತ್ತೆ ಅನುಕಂಪದ ಅಂಶವನ್ನು ಬಳಸಿಕೊಳ್ಳಲು ಅವಕಾಶವಿಲ್ಲ ಎಂದು ನ್ಯಾಯಾಲಯ ತಿಳಿಸಿದೆ.
ಬೆಳಗಾವಿ ಜಿಲ್ಲೆಯ ಭೂ ದಾಖಲೆಗಳ ಸಹಾಯಕ ನಿರ್ದೇಶಕರ ಕಚೇರಿಯಲ್ಲಿ ‘ಬಂದ್ ಪಿಯೋನ್’ ಆಗಿ ಕೆಲಸ ಮಾಡುತ್ತಿದ್ದ ಸತೀಶ್ ವಿ. ಗುಲ್ಲಾ ಅವರ ತಂದೆ 2017ರಲ್ಲಿ ಸೇವೆಯಲ್ಲಿದ್ದಾಗಲೇ ನಿಧನರಾಗಿದ್ದರು. ಇದರಿಂದಾಗಿ ಅನುಕಂಪದ ಆಧಾರದ ಮೇಲೆ ಸತೀಶ್ ವಿ. ಗುಲ್ಲಾ ಅವರಿಗೆ ಅದೇ ಕಚೇರಿಯಲ್ಲಿ ಸೆಕೆಂಡ್ ಡಿವಿಷನ್ ಅಸಿಸ್ಟೆಂಟ್ (SDA) ಹುದ್ದೆಯನ್ನು ನೀಡಲಾಗಿತ್ತು.
ಆದರೆ, ಕರ್ತವ್ಯಕ್ಕೆ ಹಾಜರಾದ ಕೇವಲ ಏಳು ತಿಂಗಳ ನಂತರ, ತಮ್ಮ ಶೈಕ್ಷಣಿಕ ಅರ್ಹತೆಯ ಆಧಾರದ ಮೇಲೆ ‘ಫಸ್ಟ್ ಡಿವಿಷನ್ ಅಸಿಸ್ಟೆಂಟ್’ (FDA) ಹುದ್ದೆಗೆ ನೇಮಕಾತಿಗಾಗಿ ತಮ್ಮ ಪ್ರಕರಣವನ್ನು ಪರಿಗಣಿಸುವಂತೆ ಅವರು ಮನವಿ ಮಾಡಿದ್ದರು. ಕಂದಾಯ ಇಲಾಖೆಯು 2019ರಲ್ಲಿ ಈ ಮನವಿಯನ್ನು ತಿರಸ್ಕರಿಸಿತ್ತು. ಇದನ್ನು ಪ್ರಶ್ನಿಸಿ ಸತೀಶ್ ಅವರು ಕರ್ನಾಟಕ ರಾಜ್ಯ ಆಡಳಿತಾತ್ಮಕ ನ್ಯಾಯಮಂಡಳಿಯ (KSAT) ಮೊರೆ ಹೋಗಿದ್ದರು.
ನ್ಯಾಯಮಂಡಳಿಯು ಅರ್ಜಿಯನ್ನು ಪುರಸ್ಕರಿಸಿ, ಇಲಾಖೆಯ ತಿರಸ್ಕಾರದ ಆದೇಶವನ್ನು ರದ್ದುಗೊಳಿಸಿತ್ತು ಹಾಗೂ ಗುಲ್ಲಾ ಅವರ ಪ್ರಕರಣವನ್ನು ಎಫ್ ಡಿಎ ಹುದ್ದೆಗೆ ಪರಿಗಣಿಸುವಂತೆ ಇಲಾಖೆಗೆ ನಿರ್ದೇಶನ ನೀಡಿತ್ತು. ಬಾಗಲಕೋಟೆಯ ಸಂದೀಪ್ ಕುಮಾರ್ ವಿನಾಯಕ ರಾವ್ ಕುಲಕರ್ಣಿ ಅವರ ವಿಚಾರದಲ್ಲೂ ನ್ಯಾಯಮಂಡಳಿ ಇಂತಹದೇ ಆದೇಶ ಹೊರಡಿಸಿತ್ತು.
ನ್ಯಾಯಮಂಡಳಿಯ ಈ ಆದೇಶವನ್ನು ಪ್ರಶ್ನಿಸಿ ಕಂದಾಯ ಇಲಾಖೆಯು ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿತ್ತು. ಈ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸಣ್ಣ ಮತ್ತು ನ್ಯಾಯಮೂರ್ತಿ ಹೇಮಾ ಕುಲಕರ್ಣಿ ಅವರಿದ್ದ ವಿಭಾಗೀಯ ಪೀಠವು, ನ್ಯಾಯಮಂಡಳಿಯ ಆದೇಶವನ್ನು ರದ್ದುಗೊಳಿಸಿ ಮಹತ್ವದ ತೀರ್ಪು ನೀಡಿದೆ.
ಅನುಕಂಪದ ಆಧಾರದ ಮೇಲೆ ನೇಮಕಗೊಂಡವರು ಹೊಂದಿರುವ ಉನ್ನತ ಶೈಕ್ಷಣಿಕ ಅರ್ಹತೆಯ ಆಧಾರದ ಮೇಲೆ ಮಾತ್ರ ‘ಗ್ರೂಪ್-ಸಿ’ (Group–C) ವ್ಯಾಪ್ತಿಯಲ್ಲಿ ಹುದ್ದೆ ಬದಲಾವಣೆ ಕೋರಿಕೆಗಳನ್ನು ಪುರಸ್ಕರಿಸುವಾಗ ರಾಜ್ಯ ಸರ್ಕಾರವು ಅತ್ಯಂತ ಎಚ್ಚರಿಕೆಯಿಂದ ವರ್ತಿಸಬೇಕು ಎಂದು ನ್ಯಾಯಾಲಯ ಎಚ್ಚರಿಕೆ ನೀಡಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/CtZPUt7bwkaJkX2T6hAwZI
