ಬೆಂಗಳೂರು: ವಿಧಾನಸಭೆಯ ವಿಶೇಷ ಅಧಿವೇಶನದಲ್ಲಿ ಬರದ ಪರಿಸ್ಥಿತಿ ಕುರಿತು ನಡೆದ ಚರ್ಚೆಯ ವೇಳೆ ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ಶಾಸಕ ಸುನೀಲ್ ಕುಮಾರ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಇದು ರೈತ ಪರ ಸರ್ಕಾರವಲ್ಲ, ‘ರಿಯಲ್ ಎಸ್ಟೇಟ್ ಸರ್ಕಾರ’ ಎಂದು ಟೀಕಿಸಿದ್ದಾರೆ.
“ದೊಡ್ಡ ಕನ್ನಡಿಯಲ್ಲಿ ಮೂವತ್ತು ಸಚಿವರು ಮುಖ ನೋಡಿಕೊಳ್ಳಲಿ, ಆಗ ನಿಮ್ಮ ನೂರು ದಿನಗಳ ಸಾಧನೆ ಗೊತ್ತಾಗುತ್ತದೆ” ಎಂದು ಸುನೀಲ್ ಕುಮಾರ್ ವ್ಯಂಗ್ಯವಾಡಿದ್ದಾರೆ. ನೂರು ದಿನಗಳ ಸಂಭ್ರಮ ಆಚರಿಸಿಕೊಳ್ಳಲು ನಾಚಿಕೆಯಾಗಬೇಕು ಎಂದು ಕಿಡಿಕಾರಿದ್ದಾರೆ.
“ಬೈ ಬರ್ತ್ (ಹುಟ್ಟಿನಿಂದ) ರೈತ ಎಂದು ಹೇಳಿಕೊಳ್ಳುವ ಮುಖ್ಯಮಂತ್ರಿಗೆ ಇನ್ನು ರೈತರ ಸಂಕಷ್ಟ ಅರ್ಥವಾಗಿಲ್ಲ. ಇದು ರೈತ ಪರ ಸರ್ಕಾರವಲ್ಲ, ಬದಲಿಗೆ ರಿಯಲ್ ಎಸ್ಟೇಟ್ ಸರ್ಕಾರವಾಗಿದೆ” ಎಂದು ಅವರು ಆರೋಪಿಸಿದ್ದಾರೆ.
ಸರ್ಕಾರದ ಖಾತೆಯಲ್ಲಿ ಹಣವಿಲ್ಲ, ಇದು ಜೀರೋ ಬ್ಯಾಲೆನ್ಸ್ ಸರ್ಕಾರ. ಈ ಸರ್ಕಾರದಿಂದ ಜನರಿಗೆ ಏನನ್ನೂ ನಿರೀಕ್ಷಿಸಲು ಸಾಧ್ಯವಿಲ್ಲ. ಜನರಿಗೆ ಖಾಲಿ ಚೆಕ್ ಕೊಟ್ಟು ಸರ್ಕಾರ ಮಂಗ ಮಾಡುತ್ತಿದೆ ಎಂದು ವಾಗ್ದಾಳಿ ನಡೆಸಿದರು.
ಬರಗಾಲ ಎದುರಿಸಲು ಯಾವುದೇ ಮುಂಜಾಗ್ರತಾ ಕ್ರಮ ಕೈಗೊಳ್ಳದ ಸರ್ಕಾರ, ಕೇವಲ ಜಾಹೀರಾತುಗಳಿಗೆ ಹಣ ಖರ್ಚು ಮಾಡುತ್ತಿದೆ. ಆ ಜಾಹೀರಾತುಗಳ ಹಣವನ್ನು ಸಂಕಷ್ಟದಲ್ಲಿರುವ ರೈತರಿಗೆ ನೀಡಬಹುದಿತ್ತು ಎಂದು ಅಭಿಪ್ರಾಯಪಟ್ಟರು.
ತಮಿಳುನಾಡಿನಲ್ಲಿ ಬರ ನಿರ್ವಹಣೆಗಾಗಿ ಸಮಿತಿ ರಚಿಸಿ, 12 ಜಿಲ್ಲೆಗಳಲ್ಲಿ ಬರ ಗುರುತಿಸಿ ಹಲವು ಕಾನೂನು ಕ್ರಮಗಳನ್ನು ಕೈಗೊಳ್ಳಲಾಗಿದೆ. ಆದರೆ ನಮ್ಮ ರಾಜ್ಯದ ಸರ್ಕಾರದ ಆದ್ಯತೆ ರೈತರಲ್ಲ, ರಿಯಲ್ ಎಸ್ಟೇಟ್ ಆಗಿದೆ ಎಂದು ಟೀಕಿಸಿದರು.
ಕೋಟ್ಯಂತರ ರೂ. ಅನುದಾನ ನೀಡಿ ಕೃಷಿ ಸಂಶೋಧನಾ ಕೇಂದ್ರಗಳನ್ನು ಬಿಳಿ ಆನೆಯಂತೆ ಸಾಕಲಾಗುತ್ತಿದೆ. ಬರಗಾಲದ ಸಂದರ್ಭದಲ್ಲೂ ರೈತರಿಗೆ ಸರಿಯಾದ ಸಲಹೆ ನೀಡದಿದ್ದರೆ, ಕೆಪಿಎಸ್‌ಸಿ (KPSC) ಮುಚ್ಚಲು ಹೊರಟಿರುವಂತೆ ಕೃಷಿ ಸಂಶೋಧನಾ ಕೇಂದ್ರಗಳನ್ನೂ ಮುಚ್ಚಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಹೆಲಿಕಾಪ್ಟರ್ ನಲ್ಲಿ ಓಡಾಡಿದರೆ ಅಥವಾ ಬರೀ ಭಾವನಾತ್ಮಕ ಮಾತುಗಳನ್ನಾಡಿದರೆ ಬರ ಹೋಗುವುದಿಲ್ಲ. ವ್ಯಾಪಾರ ಮಾಡುತ್ತಿರುವ ಈ ಸರ್ಕಾರದ ವೈಫಲ್ಯದಿಂದ ರೈತರು ಗುಳೆ ಹೋಗುತ್ತಿದ್ದಾರೆ ಮತ್ತು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ ಎಂದು ಸುನೀಲ್ ಕುಮಾರ್ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/CtZPUt7bwkaJkX2T6hAwZI
