ಹಾವೇರಿ: ಹಾವೇರಿ ತಾಲೂಕಿನ ಹಳೇರಿತ್ತಿ ಬಳಿ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ (NWKRTC) ಬಸ್ ಮತ್ತು ಲಾರಿ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಓರ್ವ ಪ್ರಯಾಣಿಕ ಸ್ಥಳದಲ್ಲೇ ಸಾವನ್ನಪ್ಪಿದ್ದು, ಆರು ಜನರು ಗಾಯಗೊಂಡಿರುವ ದಾರುಣ ಘಟನೆ ಬುಧವಾರ ಜರುಗಿದೆ.
ಅಪಘಾತದಲ್ಲಿ ಹಾವೇರಿ ತಾಲೂಕಿನ ಚೆನ್ನಾಪುರ ಗ್ರಾಮದ ನಿವಾಸಿ ಎಸ್.ಎಸ್. ಮಠದ (40) ಮೃತ ದುರ್ದೈವಿ ಎಂದು ಗುರುತಿಸಲಾಗಿದೆ.
ವಾಯವ್ಯ ಸಾರಿಗೆ ಬಸ್ ಹಾವೇರಿಯಿಂದ ನೆಗಳೂರು ಗ್ರಾಮಕ್ಕೆ ತೆರಳುತ್ತಿತ್ತು. ಇತ್ತ ಹೊಸರಿತ್ತಿಯಿಂದ ಕ್ಯಾಬೇಜ್ (ಕೋಸು) ತುಂಬಿಕೊಂಡು ಹಾವೇರಿ ಕಡೆಗೆ ಬರುತ್ತಿದ್ದ ಲಾರಿ, ಹಳೇರಿತ್ತಿ ಬಳಿ ಬಸ್ಗೆ ಡಿಕ್ಕಿ ಹೊಡೆದಿದೆ. ಲಾರಿ ಪಕ್ಕದಿಂದ ಬಸ್ಗೆ ಡಿಕ್ಕಿ ಹೊಡೆದ ಪರಿಣಾಮ ಬಸ್ ಸಂಪೂರ್ಣ ನಜ್ಜುಗುಜ್ಜಾಗಿದೆ. ಅಪಘಾತ ಸಂಭವಿಸಿದ ಸಮಯದಲ್ಲಿ ಬಸ್ನಲ್ಲಿ 30ಕ್ಕೂ ಅಧಿಕ ಪ್ರಯಾಣಿಕರಿದ್ದರು.
ಅಪಘಾತದಲ್ಲಿ ಒಟ್ಟು ಆರು ಜನರು ಗಾಯಗೊಂಡಿದ್ದು, ಇವರಲ್ಲಿ ಇಬ್ಬರ ಸ್ಥಿತಿ ಚಿಂತಾಜನಕವಾಗಿದೆ. ಗಾಯಾಳುಗಳನ್ನು ತಕ್ಷಣವೇ ಹಾವೇರಿ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಚಿಂತಾಜನಕ ಸ್ಥಿತಿಯಲ್ಲಿರುವ ಇಬ್ಬರನ್ನು ಹುಬ್ಬಳ್ಳಿಯ ಕಿಮ್ಸ್ (KIMS) ಆಸ್ಪತ್ರೆಗೆ ರವಾನಿಸಲಾಗಿದೆ. ಸಣ್ಣಪುಟ್ಟ ಗಾಯಗಳಾದ ಇತರರಿಗೆ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ ಮನೆಗೆ ಕಳುಹಿಸಲಾಗಿದೆ.
ಅಪಘಾತದ ಭೀಕರ ಶಬ್ದ ಕೇಳಿ ಹಳೇರಿತ್ತಿ ಗ್ರಾಮದ ಜಮೀನುಗಳಲ್ಲಿ ಕೆಲಸ ಮಾಡುತ್ತಿದ್ದ ರೈತರು ಹಾಗೂ ಸ್ಥಳೀಯರು ಕೂಡಲೇ ಸ್ಥಳಕ್ಕೆ ಧಾವಿಸಿ ಗಾಯಾಳುಗಳನ್ನು ರಕ್ಷಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು. ವಿಷಯ ತಿಳಿದ ಕೂಡಲೇ ಸಚಿವ ರುದ್ರಪ್ಪ ಲಮಾಣಿ ಅವರು ಹಾವೇರಿ ಜಿಲ್ಲಾಸ್ಪತ್ರೆಗೆ ಭೇಟಿ ನೀಡಿ ಗಾಯಾಳುಗಳ ಆರೋಗ್ಯ ವಿಚಾರಿಸಿದರು.
ಈ ಕುರಿತು ಗುತ್ತಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಮುಂದಿನ ತನಿಖೆ ಕೈಗೊಂಡಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/CtZPUt7bwkaJkX2T6hAwZI
