ಬೆಂಗಳೂರು: ವಿಧಾನಸಭೆ ಕಲಾಪದ ವೇಳೆ ರಾಜ್ಯದ ಪ್ರಮುಖ ಸಮಸ್ಯೆಗಳು ಹಾಗೂ ಬೆಂಗಳೂರು ನಗರದ ಬೆಳವಣಿಗೆಯ ಕುರಿತು ಚರ್ಚೆ ನಡೆಯುತ್ತಿದ್ದ ಸಂದರ್ಭದಲ್ಲಿ, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಬೆಂಗಳೂರಿಗೆ ಬಂದು ನೆಲೆಸಿರುವ ಶಾಸಕರ ಕುರಿತು ನೀಡಿರುವ ಹೇಳಿಕೆಯೊಂದು ರಾಜ್ಯ ರಾಜಕೀಯದಲ್ಲಿ ತೀವ್ರ ಕುತೂಹಲ ಹಾಗೂ ಚರ್ಚೆಗೆ ಗ್ರಾಸವಾಗಿದೆ.
ಬೆಂಗಳೂರು ನಗರದ ಜನಸಂಖ್ಯೆ ಮತ್ತು ಅಲ್ಲಿನ ಪರಿಸ್ಥಿತಿಯ ಕುರಿತು ಮಾತನಾಡುತ್ತಾ ಸಿಎಂ ಡಿ.ಕೆ. ಶಿವಕುಮಾರ್, “ಒಮ್ಮೆ ಬೆಂಗಳೂರಿಗೆ ಬಂದವರು ಯಾರೂ ವಾಪಸ್ ತಮ್ಮ ಊರುಗಳಿಗೆ ಹೋಗುವುದಿಲ್ಲ. ಇಲ್ಲಿನ ಕಾವೇರಿ ನೀರು ಹಾಗೂ ಹವಾಮಾನವೇ ಹಾಗಿದೆ. ವಕೀಲರಾಗಿರಲಿ ಅಥವಾ ರಾಜಕೀಯಕ್ಕಾಗಿ ಬೆಂಗಳೂರಿಗೆ ಬಂದ ಶಾಸಕರಾಗಿರಲಿ, ಇಲ್ಲಿಗೆ ಬಂದು ನೆಲೆಸಿದ ನಂತರ ಎರಡೆರಡು ಮದುವೆಯಾಗಿದ್ದಾರೆ” ಎಂದು ಬಹಿರಂಗವಾಗಿ ಹೇಳಿದರು.
ಮುಂದುವರೆದು ಮಾತನಾಡಿದ ಅವರು, “ಅಂತಹ ಡಜನ್ ಗಟ್ಟಲೆ ಶಾಸಕರ ಸಂಪೂರ್ಣ ಪಟ್ಟಿ (ಲಿಸ್ಟ್) ನನ್ನ ಬಳಿ ಇದೆ. ಧಾರವಾಡ, ಕಾರವಾರ, ದಕ್ಷಿಣ ಕನ್ನಡ ಸೇರಿದಂತೆ ವಿವಿಧ ಜಿಲ್ಲೆಗಳಿಂದ ಬಂದು ಇಲ್ಲಿ ನೆಲೆಸಿರುವವರ ಇತಿಹಾಸ ನನಗೆ ತಿಳಿದಿದೆ. ಆದರೆ ಈಗ ಆ ಇತಿಹಾಸವನ್ನೆಲ್ಲಾ ಇಲ್ಲಿ ಬಿಚ್ಚಿಡುವುದು ಬೇಡ” ಎಂದು ತಿಳಿಸಿದರು.
ಶಾಸಕರ ಹಾಸ್ಯಮಯ ತಿರುಗೇಟು:
ಮುಖ್ಯಮಂತ್ರಿಗಳ ಈ ‘ಎರಡು ಮದುವೆ’ ಹೇಳಿಕೆ ಬರುತ್ತಿದ್ದಂತೆ ತಕ್ಷಣವೇ ಮಧ್ಯಪ್ರವೇಶಿಸಿದ ಶಾಸಕ ಬಿ.ಪಿ. ಹರೀಶ್, “ಸರ್ ಅದೇನೋ ಎರಡು-ಮೂರು ಮದುವೆ ಅಂತ ಹೇಳ್ತಿದ್ದೀರಲ್ಲ, ಯಾರದ್ದು ಸರ್ ಅದು? ಅವರ ಕಥೆ ನಿಮಗೆ ಹೇಗೆ ಗೊತ್ತು ಸರ್? ಇದನ್ನು ನೋಡಿದರೆ ನೀವು ಎಂತಾ ಮಹಾನ್ ಕಲಾವಿದ ಇರಬೇಕು ಸರ್!” ಎಂದು ತಮಾಷೆಯಾಗಿ ಕಾಲೆಳೆದರು.
ಶಾಸಕರ ಈ ಹಾಸ್ಯಮಯ ಪ್ರಶ್ನೆಗೆ ಪ್ರತಿಕ್ರಿಯಿಸಿದ ಡಿ.ಕೆ. ಶಿವಕುಮಾರ್, “ಅದೆಲ್ಲಾ ಈಗ ಬೇಡ ಬಿಡಿ, ವೈಯಕ್ತಿಕ ವಿಷಯಗಳನ್ನು ಸದನದಲ್ಲಿ ಚರ್ಚಿಸುವುದು ಬೇಡ. ಅದನ್ನೆಲ್ಲಾ ಆಮೇಲೆ ಪರ್ಸನಲ್ ಆಗಿ ಕುಳಿತು ಮಾತನಾಡೋಣ” ಎಂದು ನಗುತ್ತಾ ವಿಷಯಕ್ಕೆ ತೆರೆ ಎಳೆದರು.
ಸಿಎಂ ಹೇಳಿಕೆಗೆ ಬಿಜೆಪಿ ಶಾಸಕ ಎಸ್. ಸುರೇಶ್ ಕುಮಾರ್ ತೀವ್ರ ಆಕ್ಷೇಪ
ಸಿಎಂ ಸದನದಲ್ಲಿ ನೀಡಿರುವ ಹೇಳಿಕೆ ಬಗ್ಗೆ ಬಿಜೆಪಿ ಹಿರಿಯ ನಾಯಕ ಹಾಗೂ ಶಾಸಕ ಎಸ್. ಸುರೇಶ್ ಕುಮಾರ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ನಿನ್ನೆ ನಾನು ಸಂಜೆ ನನ್ನ ಗೆಳೆಯರೊಬ್ಬರು ಆಸ್ಪತ್ರೆಯಲ್ಲಿ ಇದ್ದ ಕಾರಣ ಅವರನ್ನು ಕಾಣಲು ಸದನದಿಂದ ಕೊಂಚ ಮುಂಚೆ ಹೊರಟೆ. ಮುಖ್ಯಮಂತ್ರಿಗಳು ಸದನದಲ್ಲಿ ಉತ್ತರ ಕೊಡುವಾಗ ನಾನು ಇರಲು ಸಾಧ್ಯವಾಗಿರಲಿಲ್ಲ.
ಮುಖ್ಯಮಂತ್ರಿಗಳು ನೀಡಿರುವ ಉತ್ತರ ಲಘುವಾಗಿಯೇ ಇರಬಹುದು. ಆದರೆ ಈ ರೀತಿಯ ಉತ್ತರ ವಿಧಾನಸಭಾ ವೇದಿಕೆಯಿಂದ ಮಾತನಾಡುವುದು ಯಾರಿಗೂ ಘನತೆ ತರುವ ವಿಚಾರವಲ್ಲ. ನಾಡಿನ ಮುಖ್ಯಮಂತ್ರಿಗಳು ಈ ರೀತಿ ಹೇಳಬಾರದಿತ್ತು. ಇದು ಯಾರಿಗೂ ಗೌರವ ತರುವ ಸಂಗತಿಯಲ್ಲ. ಸದನದ ಗಾಂಭೀರ್ಯತೆಗೆ ತಕ್ಕ ಸಂಗತಿಯಲ್ಲ. ನಾನು ಸದನದಲ್ಲಿ ಇದ್ದಿದ್ದರೆ ಕೂಡಲೇ ಪ್ರತಿಕ್ರಿಯಿಸುತ್ತಿದ್ದೆ ಎಂದು ಹೇಳಿದ್ದಾರೆ.
ಮೊದಲೇ ವಿಧಾನಸಭಾ ಸದನವನ್ನು, ಅಲ್ಲಿ ನಡೆಯುವ ಚರ್ಚೆಯನ್ನು, ಶಾಸಕರನ್ನು ನಾಡಿನ ಜನತೆ ಗಂಭೀರವಾಗಿ ಪರಿಗಣಿಸದ ಸ್ಥಿತಿ ತಲುಪಿರುವುದರಿಂದ, ಡಿ.ಕೆ.ಶಿವಕುಮಾರ್ ಅವರ ಈ ಅಸಂಬದ್ಧ ಹೇಳಿಕೆ ಒಟ್ಟು ವಿಧಾನಮಂಡಲದ ಮತ್ತು ಜನಪ್ರತಿನಿಧಿಗಳ ವ್ಯಕ್ತಿತ್ವವನ್ನು ಇನ್ನಷ್ಟು ಅಧಃಪತನಕ್ಕೆ ತೆಗೆದುಕೊಂಡು ಹೋಗುತ್ತದೆ. ಯಾರೇ ಸಾರ್ವಜನಿಕ ವೇದಿಕೆಗಳಿಂದ ಮಾತನಾಡುವ ಮುನ್ನ ಸ್ವಲ್ಪ ಯೋಚಿಸಿ ಮುಂದುವರೆದರೆ ಈ ರೀತಿಯ ಅವಘಡ ಸಂಭವಿಸುವುದಿಲ್ಲ. ಮುಖ್ಯಮಂತ್ರಿಗಳ ವೇಷಭೂಷಣ, ನಡೆ ನುಡಿ ಎಲ್ಲವನ್ನು ನಿರ್ದೇಶಿಸುತ್ತಿರುವ ವೃತ್ತಿ ತಂಡ ಈ ಬಗ್ಗೆಯೂ ಗಮನ ನೀಡಬೇಕಿದೆ ಎಂದು ಸುರೇಶ್ ಕುಮಾರ್ ಹೇಳಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/CtZPUt7bwkaJkX2T6hAwZI
