ಬೆಂಗಳೂರು: ರಾಜ್ಯದಲ್ಲಿ ಮಳೆ ಕೊರತೆಯಿಂದ ಉಂಟಾಗಿರುವ ಬರ ಪರಿಸ್ಥಿತಿಯಿಂದಾಗಿ ಒಟ್ಟು ನಷ್ಟದ ಪ್ರಮಾಣ ₹40,000 ಕೋಟಿಗೂ ಅಧಿಕವಾಗುವ ಸಾಧ್ಯತೆಯಿದೆ ಎಂದು ಉಪಮುಖ್ಯಮಂತ್ರಿ ಜಿ. ಪರಮೇಶ್ವರ್ ತಿಳಿಸಿದ್ದಾರೆ. ಬೆಂಗಳೂರಿನ ಸದಾಶಿವನಗರದಲ್ಲಿರುವ ತಮ್ಮ ನಿವಾಸದ ಬಳಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬರ ಪರಿಹಾರ ಮತ್ತು ರೈತರ ಸಂಕಷ್ಟದ ಕುರಿತು ಪ್ರಮುಖ ಮಾಹಿತಿಗಳನ್ನು ಹಂಚಿಕೊಂಡಿದ್ದಾರೆ.
ಬರದಿಂದ ಸಂಕಷ್ಟಕ್ಕೊಳಗಾಗಿರುವ ರೈತರಿಗೆ ತಕ್ಷಣದ ನೆರವು ನೀಡುವ ಉದ್ದೇಶದಿಂದ ರಾಜ್ಯ ಸರ್ಕಾರವು ಮೊದಲ ಹಂತದಲ್ಲಿ ಪ್ರತಿ ರೈತರಿಗೆ ₹2,500ರಂತೆ ಇನ್ ಪುಟ್ ಸಬ್ಸಿಡಿ ನೀಡಲು ನಿರ್ಧರಿಸಿದೆ. ಈ ನೆರವಿನಿಂದ ಸುಮಾರು 45 ರಿಂದ 50 ಲಕ್ಷ ರೈತರಿಗೆ ಪ್ರಯೋಜನವಾಗಲಿದ್ದು, ರಾಜ್ಯ ಸರ್ಕಾರದ ಬೊಕ್ಕಸಕ್ಕೆ ಸುಮಾರು ₹1,250 ಕೋಟಿ ವೆಚ್ಚವಾಗಲಿದೆ. ಕೇಂದ್ರ ಸರ್ಕಾರದ ಎನ್ ಡಿಆರ್‌ಎಫ್ (NDRF) ನೆರವಿಗಾಗಿ ಕಾಯುತ್ತಿದ್ದರೂ, ರೈತರ ಪ್ರಸ್ತುತ ಸಂಕಷ್ಟವನ್ನು ಪರಿಗಣಿಸಿ ರಾಜ್ಯ ಸರ್ಕಾರವೇ ತಕ್ಷಣದ ನೆರವು ನೀಡುತ್ತಿದೆ ಎಂದು ಡಿಸಿಎಂ ಸ್ಪಷ್ಟಪಡಿಸಿದರು.
ಇದಲ್ಲದೆ, ರೈತರಿಗೆ ಕೃಷಿ ಪಂಪ್ ಸೆಟ್ ಗಳಿಗೆ ಉಚಿತ ವಿದ್ಯುತ್ ಒದಗಿಸಲು ರಾಜ್ಯ ಸರ್ಕಾರದಿಂದ ಸುಮಾರು ₹22,000 ಕೋಟಿ ವಿದ್ಯುತ್ ಸಬ್ಸಿಡಿ ನೀಡಲಾಗುತ್ತಿದೆ ಎಂದೂ ಅವರು ತಿಳಿಸಿದರು.
ರಾಜ್ಯದಲ್ಲಿ ಉಂಟಾಗಿರುವ ನಷ್ಟದ ಕುರಿತು ಈಗಾಗಲೇ ಮೊದಲ ಹಂತದ ಮೆಮೊರಾಂಡಂ ಅನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸಲಾಗಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಮೆಮೊರಾಂಡಂಗಳನ್ನು ಸಲ್ಲಿಸಲಾಗುವುದು. ಅಂತಿಮವಾಗಿ ಸಂಪೂರ್ಣ ನಷ್ಟದ ಅಂದಾಜು ಸಿದ್ಧಪಡಿಸಿ, ಎನ್ ಡಿಆರ್ ಎಫ್ ಮಾರ್ಗಸೂಚಿಗಳನ್ವಯ ರಾಜ್ಯಕ್ಕೆ ಎಷ್ಟು ಪರಿಹಾರ ಬೇಕು ಎಂಬುದನ್ನು ಕೇಂದ್ರಕ್ಕೆ ಸಲ್ಲಿಸಲಾಗುವುದು ಎಂದು ತಿಳಿಸಿದರು.
ಬರ ಪರಿಸ್ಥಿತಿಯ ಅಧ್ಯಯನಕ್ಕಾಗಿ ಐಎಎಸ್ ಅಧಿಕಾರಿಯೊಬ್ಬರ ನೇತೃತ್ವದ ಕೇಂದ್ರದ ತಂಡವು ರಾಜ್ಯಕ್ಕೆ ಭೇಟಿ ನೀಡಲಿದೆ. ಈ ತಂಡವು ನಷ್ಟವನ್ನು ಮೌಲ್ಯಮಾಪನ ಮಾಡಿದ ಬಳಿಕ ಅಂತಿಮ ಪರಿಹಾರದ ಮೊತ್ತ ಎಷ್ಟು ಎಂಬುದು ಸ್ಪಷ್ಟವಾಗಲಿದೆ ಎಂದರು.
ದೆಹಲಿಗೆ ಸರ್ವಪಕ್ಷ ನಿಯೋಗ:
ಬರ ಪರಿಹಾರಕ್ಕೆ ಸಂಬಂಧಿಸಿದಂತೆ ಸರ್ವಪಕ್ಷ ಸಭೆ ನಡೆಸಿ, ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ದೆಹಲಿಗೆ ಸರ್ವಪಕ್ಷ ನಿಯೋಗವನ್ನು ಕರೆದೊಯ್ಯಲು ನಿರ್ಧರಿಸಲಾಗಿದೆ. ಪ್ರಧಾನಮಂತ್ರಿ, ಕೇಂದ್ರ ಗೃಹ ಸಚಿವರು ಹಾಗೂ ಕೃಷಿ ಸಚಿವರನ್ನು ಭೇಟಿ ಮಾಡಿ ರಾಜ್ಯದ ಬರ ಪರಿಸ್ಥಿತಿ ಹಾಗೂ ರೈತರ ಸಂಕಷ್ಟವನ್ನು ಮನವರಿಕೆ ಮಾಡಿಕೊಡಲಾಗುವುದು. ವಿರೋಧ ಪಕ್ಷದವರು ಬರಲು ಸಿದ್ಧರಿದ್ದರೆ, ಅವರನ್ನೂ ಜೊತೆಯಲ್ಲಿ ಕರೆದೊಯ್ಯಲು ಸರ್ಕಾರ ಸಿದ್ಧವಿದೆ ಎಂದು ಡಿಸಿಎಂ ಜಿ.ಪರಮೇಶ್ವರ್ ತಿಳಿಸಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/CtZPUt7bwkaJkX2T6hAwZI
