ಬೀದರ್: ಕಚೇರಿಗೆ ಸರಿಯಾದ ಸಮಯಕ್ಕೆ ಬಾರದೆ ನಿರ್ಲಕ್ಷ್ಯ ವಹಿಸುತ್ತಿದ್ದ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಗೇಟ್ ಬಂದ್ ಮಾಡಿ ಬಿಸಿ ಮುಟ್ಟಿಸಿದ ಘಟನೆ ಬೀದರ್ ನಲ್ಲಿ ನಡೆದಿದೆ. ಜಿಪಂ ಸಿಇಒ ಗಿತ್ತೆ ಮಾದವ್ ವಿಠಲರಾವ್ ಅವರು ನಡೆಸಿದ ಈ ದಿಢೀರ್ ಕಾರ್ಯಾಚರಣೆಯ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ.
ಜಿಪಂ ಸಿಇಒ ಗಿತ್ತೆ ಮಾದವ್ ವಿಠಲರಾವ್ ಅವರು ಕಚೇರಿಗೆ ಅನಿರೀಕ್ಷಿತ ಭೇಟಿ ನೀಡಿ ಹಾಜರಾತಿ ಹಾಗೂ ಕಾರ್ಯವೈಖರಿಯನ್ನು ಪರಿಶೀಲಿಸಿದರು. ಈ ವೇಳೆ ಕಚೇರಿ ವೇಳೆಗೆ ಸರಿಯಾಗಿ ಹಾಜರಾಗದ ಅಧಿಕಾರಿಗಳು ಹಾಗೂ ಸಿಬ್ಬಂದಿಗಾಗಿ ಕಚೇರಿಯ ಮುಖ್ಯ ಗೇಟ್ ಅನ್ನು ಬಂದ್ ಮಾಡಿಸಿ, ತಡವಾಗಿ ಬಂದವರನ್ನು ಹೊರಗೆ ನಿಲ್ಲಿಸಲಾಯಿತು. ಕಚೇರಿಯೊಳಗೆ ತೆರಳಿ ಕೊಠಡಿಗಳನ್ನು ಪರಿಶೀಲಿಸಿದಾಗ ಅಧಿಕಾರಿಗಳ ಚೇರ್ ಗಳು ಖಾಲಿ ಖಾಲಿಯಾಗಿರುವುದನ್ನು ಕಂಡು ಸಿಇಒ ಅಚ್ಚರಿ ಹಾಗೂ ಆಕ್ರೋಶ ವ್ಯಕ್ತಪಡಿಸಿದರು.
ಬಳಿಕ ಗೇಟ್ ಬಳಿ ನಿಂತು ತಡವಾಗಿ ಬಂದ ಅಧಿಕಾರಿಗಳು ಹಾಗೂ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡ ಸಿಇಒ, ಕಡ್ಡಾಯವಾಗಿ ಕರ್ತವ್ಯ ಆ್ಯಪ್ ಬಳಸಬೇಕು ಎಂಬ ನಿಯಮವಿದ್ದರೂ ಏಕೆ ತಡವಾಗಿ ಬಂದಿದ್ದೀರಿ ಎಂದು ಪ್ರಶ್ನಿಸಿದರು. ಒಂದು ವೇಳೆ ಕ್ಷೇತ್ರ ಭೇಟಿ (ಫೀಲ್ಡ್) ತೆರಳಿದ್ದರೆ ಅದನ್ನು ಆ್ಯಪ್ ನಲ್ಲಿ ಯಾಕೆ ನಮೂದಿಸಿಲ್ಲ ಎಂದು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು. ಸಿಬ್ಬಂದಿಯಿಂದ ಯಾವುದೇ ಸಮಂಜಸವಾದ ಉತ್ತರ ಬಾರದ ಹಿನ್ನೆಲೆಯಲ್ಲಿ, ಕರ್ತವ್ಯಕ್ಕೆ ತಡವಾಗಿ ಆಗಮಿಸಿದವರ ಒಂದು ದಿನದ ಸಂಬಳ ಕಟ್ ಮಾಡುವುದಾಗಿ ಖಡಕ್ ಎಚ್ಚರಿಕೆ ನೀಡಿದರು.
ಸರ್ಕಾರಿ ಕಚೇರಿಗಳಲ್ಲಿ ಆಡಳಿತಾತ್ಮಕ ಶಿಸ್ತು ಕಾಪಾಡುವ ಮತ್ತು ಸಾರ್ವಜನಿಕರ ಕೆಲಸಗಳು ಸಕಾಲದಲ್ಲಿ ವಿಲೇವಾರಿಯಾಗುವಂತೆ ನೋಡಿಕೊಳ್ಳುವ ನಿಟ್ಟಿನಲ್ಲಿ ಸಿಇಒ ಅವರ ಈ ದಿಢೀರ್ ತಪಾಸಣೆಗಳು ಸಿಬ್ಬಂದಿಗೆ ಬಿಸಿ ಮುಟ್ಟಿಸಿದೆ.
ವರದಿ: ಅರವಿಂದ ಮಲ್ಲೀಗೆ, ಬೀದರ್
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/CtZPUt7bwkaJkX2T6hAwZI
