ಕೊಡಗು: ಕೊಡಗು ಜಿಲ್ಲೆಯ ವಿರಾಜಪೇಟೆಯಲ್ಲಿ ಶುಕ್ರವಾರ ತಡರಾತ್ರಿ ಗಣೇಶ ವಿಸರ್ಜನಾ ಮೆರವಣಿಗೆಯ ಸಂಭ್ರಮದ ನಡುವೆ ನಡೆದ ಅನಿರೀಕ್ಷಿತ ವಿದ್ಯುತ್ ಅವಘಡದಲ್ಲಿ ಐವರು ಗಾಯಗೊಂಡಿದ್ದು, ಇಬ್ಬರ ಸ್ಥಿತಿ ಗಂಭೀರವಾಗಿದೆ.
ಅಲಂಕೃತ ಮಂಟಪಗಳ ಮೆರವಣಿಗೆ ಸಾಗುತ್ತಿದ್ದ ಸಂದರ್ಭದಲ್ಲಿ ಅನಿರೀಕ್ಷಿತವಾಗಿ ಡಿಜೆ ವಾಹನಕ್ಕೆ ಹೈಟೆನ್ಷನ್ ಅಥವಾ ವಿದ್ಯುತ್ ತಂತಿ ತಗುಲಿದೆ. ಈ ದುರ್ಘಟನೆಯಲ್ಲಿ ವಾಹನದ ಮೇಲಿದ್ದ ಐವರಿಗೆ ವಿದ್ಯುತ್ ಪ್ರವಹಿಸಿ (ಕರೆಂಟ್ ಶಾಕ್) ಅಸ್ವಸ್ಥಗೊಂಡಿದ್ದಾರೆ. ಘಟನೆಯಲ್ಲಿ ಓರ್ವನ ಮೈಮೇಲಿನ ಬಟ್ಟೆಗಳಿಗೆ ಬೆಂಕಿ ಹೊತ್ತಿಕೊಂಡಿದ್ದು, ಇಬ್ಬರು ಸ್ಥಳದಲ್ಲೇ ಪ್ರಜ್ಞಾಹೀನರಾಗಿದ್ದರು. ಅದೃಷ್ಟವಶಾತ್ ಸ್ಥಳದಲ್ಲಿದ್ದ ಇತರರ ಸಮಯೋಚಿತ ಮಧ್ಯಪ್ರವೇಶದಿಂದ ದೊಡ್ಡ ಅನಾಹುತವೊಂದು ತಪ್ಪಿದಂತಾಗಿದೆ.
ಘಟನೆಯಲ್ಲಿ ಗಾಯಗೊಂಡವರ ಪೈಕಿ ಹುಬ್ಬಳ್ಳಿ-ಧಾರವಾಡ ಮೂಲದ ಬಸವರಾಜು ಹಾಗೂ ಮತ್ತೊಬ್ಬರ ಸ್ಥಿತಿ ಗಂಭೀರವಾಗಿದೆ. ಹೆಚ್ಚಿನ ಚಿಕಿತ್ಸೆಗಾಗಿ ಇಬ್ಬರನ್ನೂ ಮೈಸೂರು ಆಸ್ಪತ್ರೆಗೆ ದಾಖಲಿಸಲಾಗಿದೆ. ಉಳಿದ ಮೂವರು ಗಾಯಾಳುಗಳನ್ನು ಮಡಿಕೇರಿಯ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಅವಘಡದ ಸುದ್ದಿ ತಿಳಿಯುತ್ತಿದ್ದಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್.ಎನ್. ಬಿಂದುಮಣಿ ಹಾಗೂ ಇತರ ಪೊಲೀಸ್ ಅಧಿಕಾರಿಗಳು ತಕ್ಷಣವೇ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಹಾಗೆಯೇ, ವಿರಾಜಪೇಟೆ ಶಾಸಕ ಎ.ಎಸ್. ಪೊನ್ನಣ್ಣ ಅವರು ಆಸ್ಪತ್ರೆಗೆ ಭೇಟಿ ನೀಡಿ, ಗಾಯಗೊಂಡವರ ಆರೋಗ್ಯ ಸ್ಥಿತಿಯ ಬಗ್ಗೆ ವಿಚಾರಿಸಿ, ವೈದ್ಯರೊಂದಿಗೆ ಚರ್ಚೆ ನಡೆಸಿ ಸೂಕ್ತ ಚಿಕಿತ್ಸೆ ನೀಡುವಂತೆ ಸೂಚಿಸಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/CtZPUt7bwkaJkX2T6hAwZI
