ಬೆಂಗಳೂರು: ಸಾರ್ವಜನಿಕ ಸ್ಥಳದಲ್ಲಿ ಮೂತ್ರ ವಿಸರ್ಜನೆ ಮಾಡಲಾಗಿದೆ ಎಂದು ಆರೋಪಿಸಿ ಬಿಜೆಪಿ ಶಾಸಕ ಮುನಿರತ್ನ ಅವರನ್ನು ಯುವಕನೋರ್ವ ತರಾಟೆಗೆ ತೆಗೆದುಕೊಂಡಿರುವ ಘಟನೆ ನಡೆದಿದ್ದು, ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ.
ಬೆಂಗಳೂರಿನ ಸದಾಶಿವನಗರದ ಖಾಲಿ ನಿವೇಶನವೊಂದರ ಬಳಿ ಈ ಘಟನೆ ಜರುಗಿದೆ. ಶಾಸಕ ಮುನಿರತ್ನ ಅವರು ಸಾರ್ವಜನಿಕ ಸ್ಥಳದಲ್ಲಿ ಮೂತ್ರ ವಿಸರ್ಜನೆ ಮಾಡುತ್ತಿದ್ದ ವೇಳೆ ಯುವಕನೊಬ್ಬ ಅದನ್ನು ಪ್ರಶ್ನಿಸಿದ್ದಾನೆ. ಈ ವೇಳೆ ಇಬ್ಬರ ನಡುವೆ ವಾಗ್ವಾದ ತಾರಕಕ್ಕೇರಿದ್ದು, ಯುವಕ ಆಕ್ರೋಶಗೊಂಡು ಶಾಸಕರ ಕತ್ತಿನ ಪಟ್ಟಿ ಹಿಡಿದು ತರಾಟೆಗೆ ತೆಗೆದುಕೊಂಡಿದ್ದಾನೆ ಎಂದು ವರದಿಯಾಗಿದೆ.
ಶಾಸಕರು ತಮ್ಮೊಂದಿಗೆ ಅಸಭ್ಯ ಹಾಗೂ ಅವಾಚ್ಯ ಪದಗಳನ್ನು ಬಳಸಿದ್ದಾರೆ ಮತ್ತು ತನ್ನ ತಾಯಿಯ ಬಗ್ಗೆಯೂ ಕೇವಲವಾಗಿ ಮಾತನಾಡಿದ್ದಾರೆ ಎಂದು ಯುವಕ ಈ ವೇಳೆ ಆರೋಪಿಸಿದ್ದಾನೆ.
ಸ್ಥಳದಲ್ಲಿದ್ದ ಸಾರ್ವಜನಿಕರು ಶಾಸಕರು ಹಾಗೂ ಯುವಕನ ನಡುವಿನ ಈ ಜಟಾಪಟಿಯ ದೃಶ್ಯವನ್ನು ತಮ್ಮ ಮೊಬೈಲ್ ಕ್ಯಾಮೆರಾದಲ್ಲಿ ಸೆರೆಹಿಡಿದಿದ್ದಾರೆ. ಪರಿಸ್ಥಿತಿ ವಿಕೋಪಕ್ಕೆ ಹೋಗುತ್ತಿದ್ದಂತೆ ಶಾಸಕರು ಸಮಾಧಾನದಿಂದ ವರ್ತಿಸಿದ್ದು ಕಂಡುಬಂದಿದೆ. ಬಳಿಕ ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಸ್ಥಿತಿಯನ್ನು ತಿಳಿಗೊಳಿಸಿ, ಜನರನ್ನು ಚದುರಿಸಿದ್ದಾರೆ.
ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದ್ದು, ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/CtZPUt7bwkaJkX2T6hAwZI
