ಬೆಂಗಳೂರು: ರಾಜಧಾನಿಯಲ್ಲಿ ಟ್ರಾಫಿಕ್ ನಿಯಮ ಉಲ್ಲಂಘನೆ ಪತ್ತೆ ಹಚ್ಚಲು ಅಳವಡಿಸಲಾಗಿರುವ ಅತ್ಯಾಧುನಿಕ AI (ಕೃತಕ ಬುದ್ಧಿಮತ್ತೆ) ಕ್ಯಾಮೆರಾಗಳ ಎಡವಟ್ಟುಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಸವಾರರಿಗೆ ತಲೆನೋವಾಗಿ ಪರಿಣಮಿಸಿವೆ. ಇತ್ತೀಚೆಗೆ ಕಾರು ಚಾಲಕನಿಗೆ ಹೆಲ್ಮೆಟ್ ಧರಿಸಿಲ್ಲ ಎಂದು ದಂಡ ವಿಧಿಸಿದ್ದ ಕ್ಯಾಮೆರಾಗಳು, ಇದೀಗ ಬೈಕ್ ಸವಾರನ ಬೆನ್ನಿನಲ್ಲಿದ್ದ ‘ಗಿಟಾರ್ ಬ್ಯಾಗ್’ ಅನ್ನು ಹಿಂಬದಿ ಸವಾರ ಎಂದು ತಪ್ಪಾಗಿ ಭಾವಿಸಿ ₹500 ದಂಡ ವಿಧಿಸಿರುವ ಹಾಸ್ಯಾಸ್ಪದ ಘಟನೆ ಬೆಳಕಿಗೆ ಬಂದಿದೆ.
ಸೌವಿಕ್ ದತ್ತ ಎಂಬುವವರು ತಮ್ಮ ಸ್ಕೂಟರ್ನಲ್ಲಿ ಹೆಬ್ಬಾಳದಿಂದ ಟಿನ್ ಫ್ಯಾಕ್ಟರಿ ಕಡೆಗೆ ಸಂಚರಿಸುತ್ತಿದ್ದರು. ಈ ವೇಳೆ ಅವರು ತಮ್ಮ ಗಿಟಾರ್ ಅನ್ನು ಬೆನ್ನಿಗೆ ಬ್ಯಾಗ್ ರೀತಿಯಲ್ಲಿ ತಗುಲಿಸಿಕೊಂಡಿದ್ದರು. ಹೆಬ್ಬಾಳದ ಟಿನ್ ಫ್ಯಾಕ್ಟರಿ ಟ್ರಾಫಿಕ್ ಸಿಗ್ನಲ್ ಬಳಿ ಇರುವ ಇಂಟೆಲಿಜೆಂಟ್ ಟ್ರಾಫಿಕ್ ಎನ್ ಫೋರ್ಸ್ಮೆಂಟ್ ಮ್ಯಾನೇಜ್ ಮೆಂಟ್ ಸಿಸ್ಟಮ್ (ITEMS) AI ಕ್ಯಾಮೆರಾವು, ಸವಾರನ ಬೆನ್ನಿನಲ್ಲಿದ್ದ ಗಿಟಾರ್ ಬ್ಯಾಗ್ ಅನ್ನು ಪ್ರತ್ಯೇಕ ಹಿಂಬದಿ ಸವಾರ (Pillion Rider) ಎಂದು ತಪ್ಪಾಗಿ ಗುರುತಿಸಿದೆ.
ಅಷ್ಟೇ ಅಲ್ಲದೆ, ಆ ಗಿಟಾರ್ ಸವಾರ ಹೆಲ್ಮೆಟ್ ಧರಿಸಿಲ್ಲ ಎಂದು ಸ್ವಯಂಚಾಲಿತವಾಗಿ ನಿರ್ಧರಿಸಿ, ನಿಯಮ ಉಲ್ಲಂಘನೆಯಡಿ ₹500 ದಂಡದ ಇ–ಚಲನ್ ಅನ್ನು ಸವಾರನ ಪತ್ನಿಯ ಮೊಬೈಲ್ ನಂಬರ್ಗೆ ಕಳುಹಿಸಿದೆ.
ಆನ್ ಲೈನ್ ನಲ್ಲಿ ಬಂದ ಚಲನ್ ಮತ್ತು ಅದರಲ್ಲಿ ಗಿಟಾರ್ ಬ್ಯಾಗ್ ಅನ್ನು ಹಿಂಬದಿ ಸವಾರನೆಂದು ತೋರಿಸಿರುವ ಫೋಟೋವನ್ನು ಕಂಡು ಶಾಕ್ ಆದ ಸವಾರ, ಈ ತಾಂತ್ರಿಕ ಯಡವಟ್ಟನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಈ ಪೋಸ್ಟ್ ಭಾರೀ ಚರ್ಚೆಗೆ ಗ್ರಾಸವಾಗಿದ್ದು, ಸಾರ್ವಜನಿಕರು AI ಕ್ಯಾಮೆರಾಗಳ ಕಾರ್ಯವೈಖರಿಯ ಬಗ್ಗೆ ತಮಾಷೆಯಾಗಿ ಹಾಗೂ ಆಕ್ರೋಶದಿಂದ ಪ್ರತಿಕ್ರಿಯಿಸುತ್ತಿದ್ದಾರೆ. ಈ ವೈರಲ್ ಪೋಸ್ಟ್ಗೆ ಬೆಂಗಳೂರು ಸಂಚಾರ ಪೊಲೀಸರು ಪ್ರತಿಕ್ರಿಯಿಸಿದ್ದು, ಪರಿಶೀಲನೆಗಾಗಿ ತಮ್ಮನ್ನು ಸಂಪರ್ಕಿಸುವಂತೆ ಸೂಚಿಸಿದ್ದಾರೆ.
ಸಾಮಾನ್ಯವಾಗಿ ಸಾರ್ವಜನಿಕ ರಸ್ತೆಗಳಲ್ಲಿ ಸುರಕ್ಷತೆಗಾಗಿ ಇರುವ ಇಂತಹ ಅತ್ಯಾಧುನಿಕ ಕ್ಯಾಮೆರಾಗಳು ಕಳುಹಿಸುವ ದಂಡದ ಚಲನ್ಗಳನ್ನು ಪೊಲೀಸರು ಆನ್ಲೈನ್ನಲ್ಲಿ ಅಪ್ಲೋಡ್ ಮಾಡುವ ಮುನ್ನ ಮ್ಯಾನುವಲ್ ಆಗಿ (ಮನುಷ್ಯರೇ ಖುದ್ದಾಗಿ) ಪರಿಶೀಲಿಸಬೇಕು ಎಂಬ ನಿಯಮವಿದೆ. ಆದರೆ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಇಂತಹ ತಪ್ಪುಗಳು ತಿದ್ದುಪಡಿಯಾಗದೆ ನೇರವಾಗಿ ಸಾರ್ವಜನಿಕರ ಕೈ ಸೇರುತ್ತಿವೆ ಎಂದು ವಾಹನ ಸವಾರರು ದೂರಿದ್ದಾರೆ. ಇತ್ತೀಚೆಗಷ್ಟೇ ಬೆಳಗಾವಿಯಲ್ಲಿ ಕಾರು ಚಾಲಕನಿಗೂ ಹೆಲ್ಮೆಟ್ ಹಾಕಿಲ್ಲವೆಂದು ದಂಡ ವಿಧಿಸಿದ್ದ ಘಟನೆ ರಾಜ್ಯಾದ್ಯಂತ ಚರ್ಚೆಗೆ ಕಾರಣವಾಗಿತ್ತು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/CtZPUt7bwkaJkX2T6hAwZI
