ಬೀದರ್: ತಾಲೂಕಿನ ಅಮಲ್ಲಾಪುರ ಗ್ರಾಮದ ಸರ್ವೆ ನಂ. 71ರ ಜಾಗವನ್ನು ದಲಿತ ಸಮುದಾಯದ ಅಧಿಕೃತ ಸ್ಮಶಾನ ಭೂಮಿ ಎಂದು ಈ ವಾರದಲ್ಲೇ ಪಹಣಿಯಲ್ಲಿ ದಾಖಲಿಸಬೇಕು. ಇಲ್ಲದಿದ್ದರೆ ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಿ ಹೋರಾಟವನ್ನು ತೀವ್ರಗೊಳಿಸಲಾಗುವುದು ಎಂದು ಹೋರಾಟಗಾರರು ಎಚ್ಚರಿಸಿದ್ದಾರೆ.
ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಹೋರಾಟಗಾರ ರಾಹುಲ ಖಂದಾರೆ ಮಾತನಾಡಿ, ದಲಿತ ಸಮುದಾಯಕ್ಕಾಗಿ ಇರುವ ಸ್ಮಶಾನ ಭೂಮಿ ಸಮಸ್ಯೆ ಬಗೆಹರಿಸಬೇಕೆಂದು ಆಗ್ರಹಿಸಿ ಗ್ರಾಮಸ್ಥರು ಕಳೆದ 18 ದಿನಗಳಿಂದ ಬೀದರ್ ತಹಶೀಲ್ದಾರ್ ಕಚೇರಿ ಎದುರು ಧರಣಿ ನಡೆಸುತ್ತಿದ್ದಾರೆ. ಆದರೆ, ಜಿಲ್ಲಾಡಳಿತ ಇಲ್ಲಿಯವರೆಗೆ ಯಾವುದೇ ಸ್ಪಂದನೆ ನೀಡಿಲ್ಲ ಎಂದು ದೂರಿದರು. ಅಮಲ್ಲಾಪುರ ಗ್ರಾಮಸ್ಥರು ಕಳೆದ ಹಲವು ವರ್ಷಗಳಿಂದ ಸರ್ವೆ ನಂ. 71ರ ಜಾಗದಲ್ಲಿಯೇ ಅಂತ್ಯಸಂಸ್ಕಾರ ನಡೆಸಿಕೊಂಡು ಬರುತ್ತಿದ್ದಾರೆ. ಈ ಜಾಗವನ್ನು ಅಧಿಕೃತವಾಗಿ ಸ್ಮಶಾನ ಭೂಮಿಯೆಂದು ಪಹಣಿಯಲ್ಲಿ ದಾಖಲಿಸಬೇಕೆಂಬುದು ಧರಣಿನಿರತರ ಪ್ರಮುಖ ಹಕ್ಕೊತ್ತಾಯವಾಗಿದೆ. ಆದರೆ, ಈವರೆಗೆ ಸಮಸ್ಯೆ ಬಗೆಹರಿಸಲು ಜಿಲ್ಲಾಡಳಿತ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಅವರು ಬೇಸರ ವ್ಯಕ್ತಪಡಿಸಿದರು.
ಸುಮಾರು 40 ವರ್ಷಗಳಿಂದ ಇದೇ ಸ್ಥಳದಲ್ಲಿ ಅಂತ್ಯಸಂಸ್ಕಾರ ನಡೆಸಲಾಗುತ್ತಿದ್ದರೂ, ಅಧಿಕಾರಿಗಳು ಪಹಣಿ ದಾಖಲಿಸಲು ವಿನಾಕಾರಣ ವಿಳಂಬ ಮಾಡುತ್ತಿದ್ದಾರೆ ಎಂದು ದಲಿತ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ವಿನೋದ ರತ್ನಾಕರ ಆರೋಪಿಸಿದರು. ಸ್ಮಶಾನ ಭೂಮಿ ಇಲ್ಲದ ಜಿಲ್ಲೆಯ ಎಲ್ಲ ಗ್ರಾಮಗಳಲ್ಲಿ ದಲಿತ ಸಮುದಾಯಕ್ಕೆ ಕೂಡಲೇ ಸ್ಮಶಾನ ಭೂಮಿ ಮಂಜೂರು ಮಾಡಬೇಕು ಮತ್ತು ಜಿಲ್ಲಾಧಿಕಾರಿಗಳು ನೇರವಾಗಿ ಧರಣಿ ಸ್ಥಳಕ್ಕೆ ಭೇಟಿ ನೀಡಿ ಗ್ರಾಮಸ್ಥರ ಸಮಸ್ಯೆ ಆಲಿಸಬೇಕು ಎಂದು ಅವರು ಒತ್ತಾಯಿಸಿದರು.
ಜಿಲ್ಲಾ ಉಸ್ತುವಾರಿ ಸಚಿವರು ಧರಣಿ ಸ್ಥಳಕ್ಕೆ ಭೇಟಿ ನೀಡಿ ಒಂದು ವಾರದೊಳಗೆ ಪಹಣಿ ಮಾಡಿಕೊಡುವುದಾಗಿ ಭರವಸೆ ನೀಡಿದ್ದಾರೆ. ಅದರಂತೆ ಕೂಡಲೇ ಕ್ರಮ ಕೈಗೊಳ್ಳಬೇಕು. ವಾರದೊಳಗೆ ಪಹಣಿ ಮಾಡಿಕೊಡದಿದ್ದರೆ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಈ ಸುದ್ದಿಗೋಷ್ಠಿಯಲ್ಲಿ ಪ್ರಕಾಶ ರಾವಣ, ಹನುಮಂತ ಮಟ್ಟೆ, ಸಾಗರ್, ಸತ್ಯಾದೀಪ ಹಾವನೂರ ಸೇರಿದಂತೆ ಮುಂತಾದ ಪ್ರಮುಖರು ಉಪಸ್ಥಿತರಿದ್ದರು.
ವರದಿ: ಅರವಿಂದ ಮಲ್ಲೀಗೆ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/CtZPUt7bwkaJkX2T6hAwZI
