ಬೀದರ್: ಗ್ರಾಮ ಪಂಚಾಯತ್ ಗಳ ಆಡಳಿತಾವಧಿ ಮುಕ್ತಾಯಗೊಂಡು ಚುನಾವಣೆ ವಿಳಂಬವಾಗಿರುವ ಹಿನ್ನೆಲೆಯಲ್ಲಿ ಆಡಳಿತಾಧಿಕಾರಿಗಳು ಮತ್ತು ಪಿಡಿಒಗಳೇ ಪಂಚಾಯತ್‌ಗಳನ್ನು ನಡೆಸುತ್ತಿದ್ದು, ಯಾವುದೇ ಅಂಕುಶವಿಲ್ಲದೆ ಹಣ ದುರುಪಯೋಗದ ಆರೋಪಗಳು ಹೆಚ್ಚುತ್ತಿವೆ. ಇದರ ಬೆನ್ನಲ್ಲೇ ಕಮಲನಗರ ತಾಲೂಕಿನ ಚಾಂದೋರಿ ಗ್ರಾಮ ಪಂಚಾಯತ್‌ನಲ್ಲಿ ಒಟ್ಟು 48,92,270 ರೂ. ಅಕ್ರಮ ಹಣ ವರ್ಗಾವಣೆ ಹಗರಣ ಬೆಳಕಿಗೆ ಬಂದಿದ್ದು, ದೊಡ್ಡ ವಿವಾದ ಸೃಷ್ಟಿಸಿದೆ.
ಕಮಲನಗರ ತಾಲೂಕಿನ ಚಾಂದೋರಿ ಗ್ರಾಮ ಪಂಚಾಯತ್‌ನಲ್ಲಿ 14ನೇ ಹಣಕಾಸು ಯೋಜನೆಯ ಹಣ ಹಾಗೂ ಸಿಎಂ ಗ್ರಾಮ ವಿಕಾಸ ಯೋಜನೆಯ ಹಣದಲ್ಲಿ ಭಾರಿ ಅವ್ಯವಹಾರ ನಡೆದಿರುವುದು ದಾಖಲೆಗಳಿಂದ ದೃಢಪಟ್ಟಿದೆ. ಕುಶನೂರು ಪೊಲೀಸ್ ಠಾಣೆಯಲ್ಲಿ ಸೆಪ್ಟೆಂಬರ್ 24ರಂದು ದಾಖಲಾದ ಎಫ್‌ಐಆರ್ ಪ್ರಕಾರ, ಫೆಬ್ರವರಿ 17ರಂದು ಕಿಸಾನ್ ಮೆಷಿನರಿಗೆ 2,77,500 ರೂ. ಮತ್ತು 2,55,600 ರೂ., ಜೂನ್ ಹಾಗೂ ಜುಲೈ ತಿಂಗಳುಗಳಲ್ಲಿ ವಿವಿಧ ದಿನಗಳಂದು ಕಿಸಾನ್ ಮೆಷಿನರಿ ಹಾಗೂ ಬೀರಿ (ಕೆ)ಯ ಹಾವಪ್ಪ ಅವರ ಖಾತೆಗೆ ಲಕ್ಷಾಂತರ ರೂ. ಜಮೆಯಾಗಿವೆ. ಅಲ್ಲದೆ, ಜನವರಿ 20ರಂದು ಸಿಎಂ ಗ್ರಾಮ ವಿಕಾಸ ಯೋಜನೆಯ ಐಸಿಐಸಿಐ ಬ್ಯಾಂಕ್ ಖಾತೆಯಿಂದ 23,25,670 ರೂ. ವರ್ಗಾವಣೆಯಾಗಿದ್ದು, ಒಟ್ಟು 48,92,270 ರೂ. ಅಕ್ರಮವಾಗಿ ವರ್ಗಾವಣೆಯಾಗಿರುವುದು ಬ್ಯಾಂಕ್ ದಾಖಲೆಗಳಿಂದ ತಿಳಿದುಬಂದಿದೆ.
ಮಾಜಿ ಪಿಡಿಒ ಮತ್ತು ಆಡಳಿತಾಧಿಕಾರಿಗಳು ಯಾವುದೇ ಚೆಕ್‌ಗೆ ಸಹಿ ಮಾಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಆದರೆ, ಹಾಲಹಳ್ಳಿಯ ತೆರಿಗೆ ಸಂಗ್ರಾಹಕ ಮಹಾದೇವ ಎಂಬಾತ ಪಿಡಿಒ ಹೆಸರಿನಲ್ಲಿ ಚೆಕ್ ಬುಕ್ ಪಡೆದು ಈ ಅಕ್ರಮ ಹಣ ವರ್ಗಾವಣೆ ಮಾಡಿದ್ದಾನೆ ಎಂದು ಬ್ಯಾಂಕ್ ಸಿಬ್ಬಂದಿ ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಬೀದರ್ ಜಿಲ್ಲಾ ಪಂಚಾಯತ್ ಸಿಇಒ ಗಿಟ್ಟೆ ಮಾಧವ ವಿಠ್ಠಲರಾವ್ ಅವರು ಮಹಾದೇವನನ್ನು ಬಂಧಿಸಿರುವುದಾಗಿ ಖಚಿತಪಡಿಸಿದ್ದಾರೆ.
ಮಾಧ್ಯಮ ವರದಿಗಳನ್ನು ಗಂಭೀರವಾಗಿ ಪರಿಗಣಿಸಿರುವ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಈಶ್ವರ ಬಿ. ಖಂಡ್ರೆ ಅವರು ಉನ್ನತ ಮಟ್ಟದ ತನಿಖೆಗೆ ಆದೇಶಿಸಿದ್ದಾರೆ. ಉಪ ಕಾರ್ಯದರ್ಶಿ ದರ್ಜೆಯ ಅಧಿಕಾರಿ ನೇತೃತ್ವದ ತಂಡದಿಂದ ಪರಿಶೀಲನೆ ನಡೆಸಿ, 7 ದಿನಗಳಲ್ಲಿ ವರದಿ ಸಲ್ಲಿಸುವಂತೆ ಜಿ.ಪಂ. ಸಿಇಒಗೆ ಸೂಚಿಸಲಾಗಿದೆ. ಚಾಂದೋರಿ ಜೊತೆಗೆ ಕೋರೆಕಲ್ ಗ್ರಾಮ ಪಂಚಾಯತ್‌ನಲ್ಲಿ 6 ಲಕ್ಷಕ್ಕೂ ಅಧಿಕ ಹಣ ವರ್ಗಾವಣೆಯ ಆರೋಪದ ಬಗ್ಗೆಯೂ ತನಿಖೆ ನಡೆಸಲು ತಿಳಿಸಲಾಗಿದ್ದು, ಜಿಲ್ಲೆಯ ಎಲ್ಲ ಪಂಚಾಯತ್‌ಗಳಲ್ಲಿಯೂ ಪರಿಶೀಲನೆ ನಡೆಸಿ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕಠಿಣ ಶಿಸ್ತುಕ್ರಮ ಕೈಗೊಳ್ಳಲು ಶಿಫಾರಸು ಮಾಡುವಂತೆ ಸೂಚನೆ ನೀಡಲಾಗಿದೆ.
ವರದಿ: ಅರವಿಂದ ಮಲ್ಲೀಗೆ, ಬೀದರ್
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/CtZPUt7bwkaJkX2T6hAwZI
