ಮೈಸೂರು/ಕೊಪ್ಪಳ: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ–2026ರ ಉದ್ಘಾಟನಾ ಸಮಾರಂಭದ ಆಹ್ವಾನವನ್ನು ಕೊಪ್ಪಳದ ಗವಿಮಠದ ಮಹಾಸಂಸ್ಥಾನದ ಶ್ರೀಗಳಾದ ಶ್ರೀ ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿ ಅವರು ತಿರಸ್ಕರಿಸಿದ್ದಾರೆ ಎಂಬ ವದಂತಿಗಳನ್ನು ಗವಿಮಠದ ಮೂಲಗಳು ಅಧಿಕೃತವಾಗಿ ತಳ್ಳಿಹಾಕಿವೆ.
ಶ್ರೀಗಳು ದಸರಾ ಉದ್ಘಾಟನೆಯ ಆಹ್ವಾನವನ್ನು ಅತ್ಯಂತ ಸಂತೋಷದಿಂದ ಸ್ವೀಕರಿಸಿದ್ದಾರೆ ಎಂದು ಮಠ ಸ್ಪಷ್ಟಪಡಿಸಿದೆ.
ಕಳೆದ ಒಂದು ವಾರದಿಂದ ಮೌನ ವ್ರತದಲ್ಲಿದ್ದ ಸ್ವಾಮೀಜಿಯವರು ಶನಿವಾರ ಮಧ್ಯಾಹ್ನ ತಮ್ಮ ಮೌನ ವ್ರತ ಅಂತ್ಯಗೊಳಿಸಿದ್ದರು. ಈ ಸಂದರ್ಭದಲ್ಲಿ ಕೆಲವರು ಜನರಲ್ಲಿ ಗೊಂದಲ ಮೂಡಿಸುವ ದುರುದ್ದೇಶದಿಂದ ಇಂತಹ ಸುಳ್ಳು ವದಂತಿಗಳನ್ನು ಹರಡುತ್ತಿದ್ದಾರೆ ಎಂದು ಮಠ ತಿಳಿಸಿದೆ.
ಮುಖ್ಯಮಂತ್ರಿಗಳು ಮೈಸೂರು ದಸರಾ ಉತ್ಸವ ಉದ್ಘಾಟನೆಗೆ ಶ್ರೀಗಳನ್ನು ಆಹ್ವಾನಿಸಿದ್ದು, ಅವರು ಅದನ್ನು ಸ್ವೀಕರಿಸಿದ್ದಾರೆ. ಗವಿಶ್ರೀಗಳು ದಸರಾ ಉತ್ಸವ ಉದ್ಘಾಟಿಸುವುದು ನಾಡಿಗೆ ಹೆಮ್ಮೆಯ ವಿಷಯವಾಗಿದ್ದು, ಆಹ್ವಾನ ತಿರಸ್ಕರಿಸಿರುವ ಕುರಿತು ಮಠವಾಗಲಿ ಅಥವಾ ಸ್ವಾಮೀಜಿಯವರಾಗಲಿ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ. ಅನಗತ್ಯ ಗೊಂದಲ ಸೃಷ್ಟಿಸಲು ಪ್ರಯತ್ನಿಸುತ್ತಿರುವವರ ಮಾತುಗಳಿಗೆ ಸಾರ್ವಜನಿಕರು ಕಿವಿಗೊಡಬಾರದು ಎಂದು ಗವಿಮಠ ಮನವಿ ಮಾಡಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/CtZPUt7bwkaJkX2T6hAwZI
