ಹೊಳೆನರಸೀಪುರ: ರಾಷ್ಟ್ರೀಯ ಪೋಷಣ್ ಮಾಸಾಚರಣೆಯ ಅಂಗವಾಗಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಅಂಗನವಾಡಿ ಕೇಂದ್ರದ ವತಿಯಿಂದ ತಾಲೂಕಿನ ಮಲ್ಲಪ್ಪನಹಳ್ಳಿ ಅಂಗನವಾಡಿ ಕೇಂದ್ರದಲ್ಲಿ “ನಮ್ಮ ಅಂಗನವಾಡಿ, ನಮ್ಮ ಜವಾಬ್ದಾರಿ” ಶೀರ್ಷಿಕೆಯಡಿ ಪೋಷಣ್ ಅಭಿಯಾನ ಕಾರ್ಯಕ್ರಮವನ್ನು ವಿಜೃಂಭಣೆಯಿಂದ ಹಮ್ಮಿಕೊಳ್ಳಲಾಯಿತು.
ಕಾರ್ಯಕ್ರಮದಲ್ಲಿ ಗರ್ಭಿಣಿಯರು, ಬಾಣಂತಿಯರು, ಮಕ್ಕಳು ಹಾಗೂ ಪೋಷಕರಿಗೆ ಪೌಷ್ಟಿಕ ಆಹಾರ, ಆಹಾರದ ವೈವಿಧ್ಯತೆ, ಸ್ವಚ್ಛತೆ, ಆರೋಗ್ಯಕರ ಜೀವನಶೈಲಿ ಮತ್ತು ಮಕ್ಕಳ ಆರಂಭಿಕ ಬೆಳವಣಿಗೆಯ ಕುರಿತು ವ್ಯಾಪಕ ಜಾಗೃತಿ ಮೂಡಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಅಂಗನವಾಡಿ ಮೇಲ್ವಿಚಾರಕಿ ಶ್ರೀ ಪಂಕಜ ರವರು, ಮಕ್ಕಳ ದೈಹಿಕ ಹಾಗೂ ಮಾನಸಿಕ ಬೆಳವಣಿಗೆಗೆ ಸಮತೋಲಿತ ಪೌಷ್ಟಿಕ ಆಹಾರ ಅತ್ಯಂತ ಅವಶ್ಯಕವಾಗಿದೆ. ಸ್ಥಳೀಯವಾಗಿ ಲಭ್ಯವಿರುವ ಸಿರಿಧಾನ್ಯಗಳು, ಬೇಳೆಕಾಳುಗಳು, ತರಕಾರಿಗಳು, ಹಣ್ಣುಗಳು, ಹಾಲು ಹಾಗೂ ಇತರ ಪೌಷ್ಟಿಕ ಆಹಾರ ಪದಾರ್ಥಗಳನ್ನು ದೈನಂದಿನ ಆಹಾರ ಪದ್ಧತಿಯಲ್ಲಿ ಕಡ್ಡಾಯವಾಗಿ ಬಳಸಬೇಕು ಎಂದು ಕಿವಿಮಾತು ಹೇಳಿದರು.
ಕಾರ್ಯಕ್ರಮದಲ್ಲಿ ಸ್ಥಳೀಯವಾಗಿ ಸಿಗುವ ಪದಾರ್ಥಗಳ ಬಳಕೆ ಕುರಿತು ಪೌಷ್ಟಿಕ ಆಹಾರ ಪ್ರದರ್ಶನ, ಆರೋಗ್ಯ ಮತ್ತು ಪೌಷ್ಟಿಕತೆ ಕುರಿತು ಮಾಹಿತಿ, ಹಾಗೂ ಮಕ್ಕಳ ಬೆಳವಣಿಗೆಯ ಬಗ್ಗೆ ಪ್ರಾಯೋಗಿಕ ಪ್ರಾತ್ಯಕ್ಷಿಕೆ ಮತ್ತು ಜಾಗೃತಿ ಕಾರ್ಯಕ್ರಮಗಳನ್ನು ನಡೆಸಲಾಯಿತು. “ನಮ್ಮ ಅಂಗನವಾಡಿ, ನಮ್ಮ ಜವಾಬ್ದಾರಿ” ಎಂಬ ಆಶಯದಂತೆ ಅಂಗನವಾಡಿ ಕೇಂದ್ರಗಳ ಮೂಲಕ ಮಕ್ಕಳ ಪೌಷ್ಟಿಕತೆ, ಆರೈಕೆ ಮತ್ತು ಆರಂಭಿಕ ಬಾಲ್ಯದ ಬೆಳವಣಿಗೆಯಲ್ಲಿ ಸಮುದಾಯದ ಸಹಭಾಗಿತ್ವವನ್ನು ಹೆಚ್ಚಿಸುವುದು ಈ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿತ್ತು.
ಕಾರ್ಯಕ್ರಮದಲ್ಲಿ ಮೇಲ್ವಿಚಾರಕಿಯರಾದ ಪಣಿಬಂದ್, ಪುಷ್ಪಲತಾ ಮಹೇಶ್, ಅಂಗನವಾಡಿ ಕಾರ್ಯಕರ್ತೆಯರು, ಇಲಾಖೆಯ ಸಿಬ್ಬಂದಿ, ಪೋಷಕರು ಹಾಗೂ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.
ವರದಿ: ಮಂಜು ಶ್ರವಣೂರು, ಹೊಳೆನರಸೀಪುರ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/CtZPUt7bwkaJkX2T6hAwZI
