ಮೈಸೂರು: ಪೊಲೀಸ್ ಠಾಣೆಯ ಅಕ್ಕಪಕ್ಕವೇ ಭದ್ರತೆ ಇರುತ್ತದೆ ಎಂಬ ನಂಬಿಕೆಯನ್ನು ಹುಸಿಗೊಳಿಸುವಂತೆ, ಮೈಸೂರಿನಲ್ಲಿ ಸ್ವತಃ ಪೊಲೀಸ್ ಠಾಣೆ ಮುಂದೆಯೇ ನಿಲ್ಲಿಸಿದ್ದ ಕೆಎಸ್ ಆರ್ ಟಿಸಿ ಬಸ್ ನ ಎರಡು ಬ್ಯಾಟರಿಗಳು ಕಳ್ಳತನವಾಗಿರುವ ವಿಚಿತ್ರ ಘಟನೆ ಬೆಳಕಿಗೆ ಬಂದಿದೆ. ನಗರದ ದೇವರಾಜ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
ಹೆಚ್.ಡಿ. ಕೋಟೆ–ಮೈಸೂರು ಹಾಗೂ ಬೆಂಗಳೂರು–ವಿರಾಜಪೇಟೆ ಮಾರ್ಗದಲ್ಲಿ ಸಂಚರಿಸುವ ಕೆಎಸ್ ಆರ್ ಟಿಸಿ ಬಸ್ (KA–09—F–5345) ಸೆಪ್ಟೆಂಬರ್ 26ರಂದು ಹೆಚ್.ಡಿ. ಕೋಟೆಯಿಂದ ವಿರಾಜಪೇಟೆಗೆ ತೆರಳಿ ರಾತ್ರಿ ಅಲ್ಲಿಯೇ ನಿಂತಿತ್ತು. ಮರುದಿನ (ಸೆ.27) ಬೆಳಗ್ಗೆ 5 ಗಂಟೆಗೆ ವಿರಾಜಪೇಟೆಯಿಂದ ಹೊರಟು ವಾಪಸ್ ಬಂದ ಬಸ್, ಮಧ್ಯಾಹ್ನ 3:15ರ ಸುಮಾರಿಗೆ ಮೈಸೂರು ಗ್ರಾಮಾಂತರ ಬಸ್ ನಿಲ್ದಾಣದ ಒಳಗೆ ಪ್ರವೇಶಿಸುವಾಗ ಆಟೋವೊಂದಕ್ಕೆ ತಗುಲಿದೆ.
ಈ ಸಣ್ಣ ಅಪಘಾತದ ವಿಚಾರವಾಗಿ ಬಸ್ ಚಾಲಕ ಬಸಂತ್ ಕುಮಾರ್, ನಿರ್ವಾಹಕ ಲಕ್ಷ್ಮಿಪುತ್ರ ಹಾಗೂ ಆಟೋ ಚಾಲಕನ ನಡುವೆ ವಾಗ್ವಾದ ನಡೆದಿದೆ. ಈ ವೇಳೆ ಸ್ಥಳದಲ್ಲಿದ್ದ ಸಂಚಾರ ಪೊಲೀಸರು ಆಟೋ ಮತ್ತು ಬಸ್ ಎರಡನ್ನೂ ದೇವರಾಜ ಪೊಲೀಸ್ ಠಾಣೆಗೆ ತೆಗೆದುಕೊಂಡು ಬರುವಂತೆ ಸೂಚಿಸಿದ್ದಾರೆ.
ಠಾಣೆ ಎದುರೇ ನಡೆದ ಕಳವು:
ಪೊಲೀಸರ ಸೂಚನೆಯಂತೆ ಬಸ್ ಅನ್ನು ಠಾಣೆಯ ಪಕ್ಕದಲ್ಲಿರುವ ಅಂಬೇಡ್ಕರ್ ಭವನದ ಕಾಂಪೌಂಡ್ ಬಳಿ ನಿಲ್ಲಿಸಿ, ಮಧ್ಯಾಹ್ನ ಸುಮಾರು 3:30ಕ್ಕೆ ಚಾಲಕ ಮತ್ತು ನಿರ್ವಾಹಕ ಠಾಣೆಯೊಳಗೆ ತೆರಳಿದ್ದರು. ಬಳಿಕ ಆಟೋ ಚಾಲಕನೊಂದಿಗೆ ಮಾತುಕತೆ ನಡೆಸಿ ರಾಜಿ ಮಾಡಿಕೊಂಡು ಸಂಜೆ 5:30ಕ್ಕೆ ಠಾಣೆಯಿಂದ ಹೊರಗೆ ಬಂದಿದ್ದಾರೆ.
ನಂತರ ಬಸ್ ಚಾಲಕ ಬಸಂತ್ ಕುಮಾರ್ ಬಸ್ ಸ್ಟಾರ್ಟ್ ಮಾಡಲು ಕೀ ಹಾಕಿದರೂ ಬಸ್ ಸ್ಟಾರ್ಟ್ ಆಗಿಲ್ಲ. ಅನುಮಾನಗೊಂಡು ಬ್ಯಾಟರಿ ಬಾಕ್ಸ್ ಬಳಿ ಪರಿಶೀಲಿಸಿದಾಗ, ಬಸ್ ನಲ್ಲಿದ್ದ ಅಂದಾಜು 10,000 ರೂ. ಮೌಲ್ಯದ ಎರಡು ಬ್ಯಾಟರಿಗಳು ಕಳ್ಳತನವಾಗಿರುವುದು ಬೆಳಕಿಗೆ ಬಂದಿದೆ.
ಪೊಲೀಸ್ ಠಾಣೆ ಹಾಗೂ ಸಿಬ್ಬಂದಿಯ ಕಣ್ಣುತಪ್ಪಿಸಿ ಠಾಣೆ ಆವರಣದ ಸಮೀಪವೇ ಬಸ್ ನ ಬ್ಯಾಟರಿಗಳು ಕಳುವಾಗಿರುವುದು ಸಾರ್ವಜನಿಕರಲ್ಲಿ ಅಚ್ಚರಿ ಮೂಡಿಸಿದೆ. ಈ ಸಂಬಂಧ ದೇವರಾಜ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕಳ್ಳರ ಪತ್ತೆಗಾಗಿ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/CtZPUt7bwkaJkX2T6hAwZI
