ಬೀದರ್: ಜಿಲ್ಲೆಯ ಔರಾದ್ ತಾಲೂಕಿನಲ್ಲಿ ಅಮಾಯಕ ಜನರ ಜೀವದೊಂದಿಗೆ ಚೆಲ್ಲಾಟವಾಡುತ್ತಿದ್ದ ಮತ್ತೊಂದು ನಕಲಿ ವೈದ್ಯಕೀಯ ವೃತ್ತಿಯ ಕರಾಳ ಮುಖ ಬಯಲಾಗಿದೆ.
ಔರಾದ್ ತಾಲೂಕಿನ ಜಂಬಗಿ ಗ್ರಾಮದಲ್ಲಿ ಯಾವುದೇ ಅಧಿಕೃತ ವೈದ್ಯಕೀಯ ಅರ್ಹತೆ ಇಲ್ಲದೆ ಅಕ್ರಮವಾಗಿ ಕ್ಲಿನಿಕ್ ನಡೆಸಿ ರೋಗಿಗಳ ಪ್ರಾಣಕ್ಕೆ ಕುತ್ತು ತರುತ್ತಿದ್ದ ರಾಜಶೇಖರ ಎಂಬಾತನ ವಿರುದ್ಧ ಆರೋಗ್ಯ ಇಲಾಖೆ ಅಧಿಕಾರಿಗಳ ಸಕಾಲಿಕ ಕಾರ್ಯಾಚರಣೆಯಿಂದ ನಕಲಿ ವೈದ್ಯ ಜಾಲ ಬೆಳಕಿಗೆ ಬಂದಿದೆ.
ರಾಜಶೇಖರ ಅವರು ಅಗತ್ಯ ವೈದ್ಯಕೀಯ ಪದವಿ ಅಥವಾ ಯಾವುದೇ ಅಧಿಕೃತ ನೋಂದಣಿ ಪಡೆಯದೆ ಜನರ ಆರೋಗ್ಯದ ಜತೆ ಆಟವಾಡುತ್ತಿರುವುದು ಖಚಿತಗೊಂಡ ಹಿನ್ನೆಲೆಯಲ್ಲಿ, ಆರೋಗ್ಯ ಇಲಾಖೆ ಅಧಿಕಾರಿಗಳ ತಂಡವು ಸೋಮವಾರ ಮಧ್ಯಾಹ್ನ ಈ ಕ್ಲಿನಿಕ್ ಮೇಲೆ ಅನಿರೀಕ್ಷಿತ ದಾಳಿ ನಡೆಸಿದೆ. ತಪಾಸಣೆಯ ವೇಳೆ ಆತನ ಬಳಿ ವೈದ್ಯಕೀಯ ವೃತ್ತಿ ನಡೆಸಲು ಯಾವುದೇ ಅರ್ಹತೆ ಇಲ್ಲದಿರುವುದು ಸಾಬೀತಾಗುತ್ತಿದ್ದಂತೆ, ಅಧಿಕಾರಿಗಳು ಕೂಡಲೇ ಕ್ಲಿನಿಕ್ ಅನ್ನು ಸೀಜ್ ಮಾಡಿ ಕಠಿಣ ಕ್ರಮ ಜರುಗಿಸಿದ್ದಾರೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ತಿಳಿಸಿದ್ದಾರೆ.
ಈ ದಿಢೀರ್ ಕಾರ್ಯಾಚರಣೆಯಲ್ಲಿ ಜಿಲ್ಲಾ ಕೆಪಿಎಂಇ ನೋಡಲ್ ಅಧಿಕಾರಿ ಡಾ. ದಿಲೀಪ್ ಡೋಂಗ್ರೆ, ಔರಾದ್ ತಾಲೂಕು ಆರೋಗ್ಯಾಧಿಕಾರಿ ಡಾ. ಅನಿಲಕುಮಾರ್, ಕೆಪಿಎಂಇ ವಿಷಯ ನಿರ್ವಾಹಕ ಮಹೇಶ್ವರ್ ರೆಡ್ಡಿ ಹಾಗೂ ಬಲಭೀಮ್ ಮತ್ತಿತರರು ಭಾಗಿಯಾಗಿದ್ದರು.
ಕೇವಲ ಒಂದೆರಡು ಕಡೆ ಕ್ಲಿನಿಕ್ ಸೀಜ್ ಮಾಡಿದರೆ ಸಾಲದು ಎಂಬುದು ಸಾರ್ವಜನಿಕರ ತೀವ್ರ ಆಕ್ರೋಶದ ನುಡಿಯಾಗಿದೆ. ಗ್ರಾಮೀಣ ಭಾಗದಲ್ಲಿ ಮೂಲೆಯೊಂದರಲ್ಲಿ ಅಡಗಿ ಕುಳಿತು ಮುಗ್ಧ ಜನರ ಪ್ರಾಣದೊಂದಿಗೆ ಚೆಲ್ಲಾಟವಾಡುತ್ತಿರುವ ಇಂತಹ ನಕಲಿ ವೈದ್ಯರ ಜಾಲವನ್ನು ಬುಡಸಹಿತ ಕಿತ್ತುಹಾಕಲು ರಾಜ್ಯದ ಆರೋಗ್ಯ ಸಚಿವರು ಹಾಗೂ ಉನ್ನತ ಮಟ್ಟದ ಅಧಿಕಾರಿಗಳು ಕೂಡಲೇ ಕಟ್ಟುನಿಟ್ಟಿನ ವಿಶೇಷ ತನಿಖೆ ಹಾಗೂ ರಾಜ್ಯವ್ಯಾಪಿ ಕಠಿಣ ಕಾರ್ಯಾಚರಣೆಯನ್ನು ಕೈಗೊಳ್ಳಬೇಕು ಎಂಬ ಬಲವಾದ ಆಗ್ರಹ ಈ ಮೂಲಕ ಕೇಳಿಬಂದಿದೆ.
ವರದಿ: ಅರವಿಂದ ಮಲ್ಲಿಗೆ, ಬೀದರ್
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/CtZPUt7bwkaJkX2T6hAwZI
