ಬೆಂಗಳೂರು: ಬೆಂಗಳೂರು ಹೊರವಲಯದಲ್ಲಿ ತೀವ್ರ ಆತಂಕ ಸೃಷ್ಟಿಸಿ, ವೃದ್ಧರೊಬ್ಬರ ಸಾವಿಗೆ ಕಾರಣವಾಗಿದ್ದ ಕಾಡಾನೆಯನ್ನು ಅರಣ್ಯ ಇಲಾಖೆ ಸಿಬ್ಬಂದಿ ಯಶಸ್ವಿಯಾಗಿ ಮರಳಿ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದ ಅರಣ್ಯ ಪ್ರದೇಶಕ್ಕೆ ಕಳುಹಿಸಿದ್ದಾರೆ.
ಮೈಸೂರು ರಸ್ತೆಯ ಅಂಚೆಪಾಳ್ಯ ಬಳಿ ಸೋಮವಾರ ಮುಂಜಾನೆ ವಾಯುವಿಹಾರಕ್ಕೆ (Walking) ತೆರಳಿದ್ದ ನಾಗರಾಜ್ (60) ಎಂಬುವವರ ಮೇಲೆ ಕಾಡಾನೆ ದಾಳಿ ನಡೆಸಿ ತುಳಿದು ಕೊಂದಿತ್ತು. ಈ ಘಟನೆಯು ಸ್ಥಳೀಯರಲ್ಲಿ ಮತ್ತು ಬೆಂಗಳೂರು ನಗರದ ಜನರಲ್ಲಿ ತೀವ್ರ ಭೀತಿ ಹಾಗೂ ಆತಂಕವನ್ನುಂಟು ಮಾಡಿತ್ತು.
ಆನೆಯನ್ನು ಸೆರೆಹಿಡಿದು ಬೇರೆಡೆ ಸ್ಥಳಾಂತರಿಸುವ ಕುರಿತು ಚರ್ಚೆ ನಡೆದರೂ, ಅದರ ಚಲನವಲನಗಳನ್ನು ಗಮನಿಸಿದ ಅರಣ್ಯ ಇಲಾಖೆಯು ಅದಕ್ಕೆ ಪ್ರತ್ಯೇಕ ಸುರಕ್ಷಿತ ಮಾರ್ಗ ಕಲ್ಪಿಸಿ ಬನ್ನೇರುಘಟ್ಟದತ್ತ ಸಾಗುವಂತೆ ಮಾಡಿದೆ. ಆನೆಯು ‘ಬಿಎಂ ಕಾವಲ್’ ಅರಣ್ಯ ಪ್ರದೇಶದಿಂದ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದತ್ತ ತೆರಳಲು ದಾರಿ ಹುಡುಕುತ್ತಿದ್ದು, ಅರಣ್ಯ ಸಿಬ್ಬಂದಿ ಸೂಕ್ತ ಮಾರ್ಗ ತೋರಿಸಿ ಉದ್ಯಾನವನದೊಳಗೆ ಸೇರಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಕಾರ್ಯಾಚರಣೆ ವೇಳೆ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಎಚ್ಚರಿಕೆ ವಹಿಸಲಾಗಿತ್ತು. ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇ, ನೈಸ್ ರಸ್ತೆ ಹಾಗೂ ನಗರದ ಪ್ರಮುಖ ರಸ್ತೆಗಳಲ್ಲಿ ಕೆಲ ಕಾಲ ಸಂಚಾರವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿತ್ತು. ಮೈಸೂರು ರಸ್ತೆ, ಕನಕಪುರ ರಸ್ತೆ, ಬನ್ನೇರುಘಟ್ಟ ರಸ್ತೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳ ಜನರಿಗೆ ಎಚ್ಚರಿಕೆ ನೀಡಲಾಗಿದ್ದು, ರಾತ್ರಿ ವೇಳೆ ಹೊರಗೆ ಬಾರದಂತೆ ಸೂಚಿಸಲಾಗಿತ್ತು. ಆನೆಯ ಪ್ರತಿಯೊಂದು ಚಲನವಲನಗಳ ಮೇಲೆ ನಿಗಾ ಇಡಲು ಡ್ರೋನ್ ಗಳನ್ನು ಬಳಸಲಾಗಿತ್ತು.
ಬೆಂಗಳೂರು ನಗರ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ವೈ. ಚಕ್ರಪಾಣಿ ಮಾತನಾಡಿ, ಆನೆಗೆ ರೇಡಿಯೋ ಕಾಲರ್ ಅಳವಡಿಸುವ ಅಗತ್ಯವಿಲ್ಲದಿದ್ದರೂ ಅದರ ವರ್ತನೆ ಮತ್ತು ಚಲನವಲನದ ಮೇಲೆ ನಿರಂತರ ನಿಗಾ ಇರಿಸಲಾಗಿದೆ ಎಂದು ತಿಳಿಸಿದ್ದಾರೆ. ಇನ್ನು ಕಾಡಾನೆ ದಾಳಿಗೆ ಬಲಿಯಾದ ನಾಗರಾಜ್ ಅವರ ಕುಟುಂಬಕ್ಕೆ 20 ಲಕ್ಷ ರೂ.ಗಳ ಪರಿಹಾರ ಘೋಷಿಸಲಾಗಿದೆ. ಇಡೀ ಕಾರ್ಯಾಚರಣೆಯು ಯಶಸ್ವಿಯಾಗಿ ಮುಕ್ತಾಯಗೊಂಡಿದ್ದು, ಸಾರ್ವಜನಿಕರು ನಿರಾಳರಾಗಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/CtZPUt7bwkaJkX2T6hAwZI
