ಹಾಸನ ನಗರದ ಹೇಮಾವತಿ ನಗರದ ರಾಯಲ್ ಅಪೋಲೊ ಸ್ಕೂಲ್ ಹಿಂಭಾಗದಲ್ಲಿ ವಿಕಟ ಸೇವಾ ಟ್ರಸ್ಟ್ ಮತ್ತು ವಾಲಿಬಾಲ್ ಗೆಳೆಯರ ಬಳಗದ ವತಿಯಿಂದ ಪ್ರತಿಷ್ಠಾಪಿಸಿದ್ದ ಶ್ರೀ ಗಣಪತಿ ದೇವರ ವಿಸರ್ಜನಾ ಕಾರ್ಯಕ್ರಮವು ಅತ್ಯಂತ ಭಕ್ತಿಭಾವ ಹಾಗೂ ಹಬ್ಬದ ಸಂಭ್ರಮದೊಂದಿಗೆ ಅದ್ದೂರಿಯಾಗಿ ನೆರವೇರಿತು.
ಗಣಪತಿ ವಿಸರ್ಜನೆ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ಮೆರವಣಿಗೆಯಲ್ಲಿ ಹಾಸ್ಯ ಗೊಂಬೆಗಳು, ವೀರಗಾಸೆ ಹಾಗೂ ಡೊಳ್ಳುಕುಣಿತದ ಪ್ರದರ್ಶನಗಳು ನೆರೆದಿದ್ದ ಜನರನ್ನು ಮಂತ್ರಮುಗ್ಧರನ್ನಾಗಿಸಿದವು. ವಿಶೇಷವಾಗಿ ಹೊಳೆನರಸೀಪುರ ತಾಲ್ಲೂಕಿನ ಶ್ರವಣೂರು ಗ್ರಾಮದ ಶ್ರೀ ಶಿವರದಮ್ಮ ಮತ್ತು ಗರಡಾಳೇಶ್ವರ ಕಲಾವಿದರ ಸಂಘದವರು ಪ್ರದರ್ಶಿಸಿದ ಹಳ್ಳಿಯ ಸೊಗಡಿನ ರಂಗ ಕುಣಿತ ಎಲ್ಲರ ಗಮನ ಸೆಳೆಯಿತು. ತಮಟೆ ವಾದ್ಯಗಳ ಸದ್ದಿಗೆ ತಕ್ಕಂತೆ ಕಲಾವಿದರ ಅದ್ಭುತ ಹೆಜ್ಜೆಗೆ ಸಾರ್ವಜನಿಕರು ಮನಸೋತರು. ವಿಶೇಷವೆಂದರೆ, ಕಲಾವಿದರೊಂದಿಗೆ ಸ್ಥಳೀಯ ಮಹಿಳೆಯರು ಹಾಗೂ ಮಕ್ಕಳು ಕೂಡ ಉತ್ಸಾಹದಿಂದ ರಂಗಕುಣಿತಕ್ಕೆ ಹೆಜ್ಜೆಹಾಕಿ ಖುಷಿಪಟ್ಟರು.
ಗಣಪತಿ ಮೂರ್ತಿಯ ಮೆರವಣಿಗೆಯಲ್ಲಿ ಅಪಾರ ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಂಡಿದ್ದರು. ಭಕ್ತಿಗೀತೆಗಳು ಹಾಗೂ ಗಣಪತಿ ಘೋಷಣೆಗಳೊಂದಿಗೆ ಇಡೀ ಪ್ರದೇಶವೇ ಸಂಭ್ರಮದಿಂದ ಕೂಡಿತ್ತು. ಯುವಕರು, ಮಹಿಳೆಯರು ಮತ್ತು ಮಕ್ಕಳು ಅತ್ಯಂತ ಸಡಗರದಿಂದ ಭಾಗವಹಿಸಿದ್ದರು. ನಂತರ ಸಾಂಪ್ರದಾಯಿಕ ಧಾರ್ಮಿಕ ವಿಧಿವಿಧಾನಗಳೊಂದಿಗೆ ವಿಘ್ನನಿವಾರಕ ಶ್ರೀ ಗಣಪತಿ ಮೂರ್ತಿಯನ್ನು ಶಾಸ್ತ್ರೋಕ್ತವಾಗಿ ವಿಸರ್ಜನೆ ಮಾಡಲಾಯಿತು.
ಈ ಸಂಪೂರ್ಣ ಕಾರ್ಯಕ್ರಮದ ಯಶಸ್ಸಿಗಾಗಿ ಟ್ರಸ್ಟ್‌ನ ಪದಾಧಿಕಾರಿಗಳು, ಸಮಿತಿಯ ಸದಸ್ಯರು ಹಾಗೂ ಸ್ಥಳೀಯ ಸಾರ್ವಜನಿಕರು ಕೈಜೋಡಿಸಿ ಉತ್ತಮ ಸಹಕಾರ ನೀಡಿದರು. ಮನರಂಜನೆ ಹಾಗೂ ಭಕ್ತಿಯ ಸಂಗಮವಾಗಿ ಮೂಡಿಬಂದ ಈ ವಿಸರ್ಜನಾ ಕಾರ್ಯಕ್ರಮವು ಸಾರ್ವಜನಿಕರ ಅಪಾರ ಮೆಚ್ಚುಗೆಗೆ ಪಾತ್ರವಾಯಿತು.
ವರದಿ: ಮಂಜು ಶ್ರವಣೂರು, ಹೊಳೆನರಸೀಪುರ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/CtZPUt7bwkaJkX2T6hAwZI
