ಬೀದರ್: ಹುಮನಾಬಾದ್ ತಾಲೂಕು ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯಲ್ಲಿ ಹೊರರೋಗಿಗಳು, ಹೆರಿಗೆಗೆ ಬರುವ ಮಹಿಳೆಯರು ಸೇರಿದಂತೆ ಬಡ ಹಾಗೂ ಗ್ರಾಮೀಣ ಜನರಿಗೆ ಸಮರ್ಪಕ ವೈದ್ಯಕೀಯ ಸೇವೆ ದೊರೆಯುತ್ತಿಲ್ಲ ಎಂದು ಆರೋಪಿಸಿ ವಿವಿಧ ಸಂಘಟನೆಗಳ ಕಾರ್ಯಕರ್ತರು ಆಸ್ಪತ್ರೆ ಎದುರು ಗುರುವಾರ ಉಗ್ರ ಪ್ರತಿಭಟನೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಮಾತನಾಡಿದ ಮುಖಂಡರು, ಸೆಪ್ಟೆಂಬರ್ 29ರಂದು ರಾತ್ರಿ ಸುಮಾರು 11.30ರ ವೇಳೆಗೆ ಹೆರಿಗೆಗಾಗಿ ಆಸ್ಪತ್ರೆಗೆ ಬಂದಿದ್ದ ಮಹಿಳೆಗೆ ತುರ್ತು ಸಂದರ್ಭದಲ್ಲಿ ಸೂಕ್ತ ವೈದ್ಯಕೀಯ ಸೇವೆ ದೊರೆತಿಲ್ಲ ಎಂದು ದೂರಿದರು. ಬಳಿಕ ಆಗಮಿಸಿದ ವೈದ್ಯರು ಅಗತ್ಯ ವ್ಯವಸ್ಥೆ ಇಲ್ಲವೆಂದು ತಿಳಿಸಿ ಬೇರೆ ಆಸ್ಪತ್ರೆಗೆ ಕರೆದೊಯ್ಯುವಂತೆ ಸೂಚಿಸಿರುವ ಪ್ರಕರಣವನ್ನು ವಿಶೇಷವಾಗಿ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು. ತುರ್ತು ಪರಿಸ್ಥಿತಿಯಲ್ಲಿ ರೋಗಿಯನ್ನು ಬೇರೆ ಆಸ್ಪತ್ರೆಗೆ ಕಳುಹಿಸುವುದು ಅನಿವಾರ್ಯವಾಗಿದ್ದರೆ, ಅದಕ್ಕೆ ಸಂಬಂಧಿಸಿದ ವೈದ್ಯಕೀಯ ಕಾರಣವನ್ನು ರೋಗಿಯ ದಾಖಲಾತಿಗಳಲ್ಲಿ ಸ್ಪಷ್ಟವಾಗಿ ನಮೂದಿಸಬೇಕು. ಸರ್ಕಾರಿ ಆಸ್ಪತ್ರೆಯಲ್ಲಿಯೇ ಚಿಕಿತ್ಸೆ ಹಾಗೂ ಹೆರಿಗೆ ಸೇವೆ ನೀಡಲು ಸಾಧ್ಯವಿದ್ದರೂ ರೋಗಿಯನ್ನು ಬೇರೆಡೆಗೆ ಕಳುಹಿಸಲಾಗಿದೆಯೇ ಎಂಬುದನ್ನೂ ತನಿಖೆಗೊಳಪಡಿಸಬೇಕು ಎಂದು ಆಗ್ರಹಿಸಿದರು.
ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ಬರುವ ಕೆಲವು ರೋಗಿಗಳಿಗೆ ಖಾಸಗಿ ಆಸ್ಪತ್ರೆಗಳಿಗೆ ತೆರಳುವಂತೆ ಸೂಚಿಸಲಾಗುತ್ತಿದೆ ಎಂಬ ಸಾರ್ವಜನಿಕ ಆರೋಪಗಳ ಬಗ್ಗೆಯೂ ಸಮಗ್ರ ತನಿಖೆ ನಡೆಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು. ಆಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸುವ ವೈದ್ಯರು ಹಾಗೂ ಸಿಬ್ಬಂದಿ ನಿಗದಿತ ಸಮಯಕ್ಕೆ ಕಡ್ಡಾಯವಾಗಿ ಹಾಜರಾಗುವಂತೆ ಕ್ರಮ ಕೈಗೊಳ್ಳಬೇಕು ಮತ್ತು ಹಾಜರಾತಿ ವ್ಯವಸ್ಥೆಯನ್ನು ಕಟ್ಟುನಿಟ್ಟಾಗಿ ಮೇಲ್ವಿಚಾರಣೆ ಮಾಡಬೇಕು. ಯಾವ ವೈದ್ಯರು ಯಾವ ವಿಭಾಗದಲ್ಲಿ ಹಾಗೂ ಯಾವ ಸಮಯದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ ಎಂಬ ಮಾಹಿತಿಯನ್ನು ಸಾರ್ವಜನಿಕರಿಗೆ ತಿಳಿಯುವಂತೆ ನಾಮಫಲಕ ಹಾಗೂ ಕರ್ತವ್ಯ ವಿವರಗಳನ್ನು ಪ್ರದರ್ಶಿಸಬೇಕು ಎಂದು ಕೋರಿದರು.
ರಕ್ತ ಪರೀಕ್ಷೆ ಸೇರಿದಂತೆ ಅಗತ್ಯ ಪ್ರಯೋಗಾಲಯ ಸೇವೆಗಳನ್ನು ಆಸ್ಪತ್ರೆಯಲ್ಲಿಯೇ ಸಮರ್ಪಕವಾಗಿ ಒದಗಿಸಬೇಕು ಹಾಗೂ ಹೊರಗಿನ ಪ್ರಯೋಗಾಲಯಕ್ಕೆ ಪರೀಕ್ಷೆ ಕಳುಹಿಸುವ ಸಂದರ್ಭಗಳಲ್ಲಿ ಅದರ ಕಾರಣ ಹಾಗೂ ಸಂಬಂಧಿತ ನಿಯಮಗಳನ್ನು ರೋಗಿಗಳು ಮತ್ತು ಸಾರ್ವಜನಿಕರಿಗೆ ಸ್ಪಷ್ಟವಾಗಿ ತಿಳಿಸಬೇಕು. ಆಸ್ಪತ್ರೆಯ ಆವರಣದಲ್ಲಿನ ಪಾರ್ಕಿಂಗ್ ವ್ಯವಸ್ಥೆಯನ್ನು ನಿಯಮಬದ್ಧಗೊಳಿಸಿ, ರೋಗಿಗಳು ಹಾಗೂ ಆಂಬ್ಯುಲೆನ್ಸ್ಗಳ ಸಂಚಾರಕ್ಕೆ ಯಾವುದೇ ತೊಂದರೆಯಾಗದಂತೆ ಕ್ರಮ ಕೈಗೊಳ್ಳಬೇಕು. ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ಬರುವ ಪ್ರತಿಯೊಬ್ಬ ರೋಗಿಯ ಜೀವ ಹಾಗೂ ಆರೋಗ್ಯದ ಸುರಕ್ಷತೆಗೆ ಆದ್ಯತೆ ನೀಡಿ, ಗುಣಮಟ್ಟದ ವೈದ್ಯಕೀಯ ಸೇವೆ ಒದಗಿಸಬೇಕೆಂದು ಒತ್ತಾಯಿಸಿದರು.
ಪ್ರತಿಭಟನಾ ಸ್ಥಳಕ್ಕೆ ಜಿಲ್ಲಾ ಆರೋಗ್ಯ ಇಲಾಖೆಯ ಅಧಿಕಾರಿ ಡಾ.ದಿಲೀಪ ಡೊಂಗರೆ ಹಾಗೂ ತಾಲೂಕು ವೈದ್ಯಾಧಿಕಾರಿಗಳು ಆಗಮಿಸಿದಾಗ, ಪ್ರತಿಭಟನಾಕಾರರು ಆಸ್ಪತ್ರೆಯಲ್ಲಿನ ಸಮಸ್ಯೆಗಳ ಕುರಿತು ವಿವರವಾಗಿ ವಿವರಿಸಿ ಹಕ್ಕೊತ್ತಾಯ ಪತ್ರ ಸಲ್ಲಿಸಿದರು. ಅಲ್ಲದೆ, ಒಂದು ವಾರದೊಳಗೆ ಸಮಗ್ರ ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದರು.
ಈ ಪ್ರತಿಭಟನೆಯಲ್ಲಿ ಯುವರಾಜ್ ಎಸ್. ಐಹೋಳ್ಳಿ, ಭೀಮರೆಡ್ಡಿ ಸಿಂಧನಕೇರಾ, ಅರವಿಂದ ಜೋಗಿರೆ, ದಯಾನಂದ ಮೇತ್ರೆ, ಶಶಿಕಾಂತ್ ಡಾಂಗೆ, ರಾಹುಲ್ ಉದ್ದಾ, ಅನೀಲ ದೊಡ್ಡಿ, ಗಣಪತಿ ಅಷ್ಟೂರೆ, ಮನೋಜಕುಮಾರ ಸಿತಾಳೆ, ಪವನಗೊಂಡಾ, ಶಿವುರೆಡ್ಡಿ, ವಿಜಯ ಪವಾರ್, ನಾಗೇಶ ಹುಮನಾಬಾದ್ ಸೇರಿದಂತೆ ಹಲವರು ಭಾಗವಹಿಸಿದ್ದರು.
ವರದಿ: ಅರವಿಂದ ಮಲ್ಲೀಗೆ, ಬೀದರ್
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/CtZPUt7bwkaJkX2T6hAwZI
