ಬೆಂಗಳೂರು: ನೈಸ್ (NICE) ಯೋಜನೆಗಾಗಿ ಭೂ ಕಬಳಿಕೆ ವಿಚಾರದಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ನಡುವಿನ ಆರೋಪ-ಪ್ರತ್ಯಾರೋಪಗಳು ತೀವ್ರಗೊಂಡಿವೆ. ಇದರ ಮಧ್ಯೆ, ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ಕೆಂಗೇರಿ ಬಳಿಯ ಬಿ.ಎಂ. ಕಾವೆಲ್ನಲ್ಲಿ ಸಿಎಂ ಡಿ.ಕೆ. ಶಿವಕುಮಾರ್ ಕುಟುಂಬಕ್ಕೆ ಸೇರಿದ ಎನ್ನಲಾದ 200 ಎಕರೆಗೂ ಹೆಚ್ಚಿನ ಭೂಮಿಯನ್ನು ನೇರವಾಗಿ ವೀಕ್ಷಿಸಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣ ‘ಎಕ್ಸ್’ (X) ನಲ್ಲಿ ಮಾಹಿತಿ ಹಂಚಿಕೊಂಡಿರುವ ಕುಮಾರಸ್ವಾಮಿ, ಬಡ ರೈತರ ಜಮೀನುಗಳು ನೈಸ್ ಪಾಲಾಗುತ್ತಿದ್ದರೆ, ಪ್ರಭಾವಿ ವ್ಯಕ್ತಿಗಳ ಕುಟುಂಬಕ್ಕೆ ನೂರಾರು ಎಕರೆ ಸಿಗುತ್ತಿದೆ ಎಂದು ತೀವ್ರ ವಾಗ್ದಾಳಿ ನಡೆಸಿದ್ದಾರೆ. ಸಣ್ಣಪುಟ್ಟ ರೈತರ ಒಂದು-ಎರಡು ಎಕರೆ ಜಮೀನೆಲ್ಲ ನೈಸ್ ಪಾಲಾಗಿದ್ದರೆ, ಬಿ.ಎಂ. ಕಾವೆಲ್ನಲ್ಲಿ ವಿಶಾಲವಾಗಿ ಕಾಣುವ 200 ಎಕರೆಗೂ ಹೆಚ್ಚಿನ ಭೂಮಿ ರಾಜ್ಯದ ಹಾಲಿ ಮುಖ್ಯಮಂತ್ರಿ ಮತ್ತು ಅವರ ಕುಟುಂಬದ ಸದಸ್ಯರಿಗೆ ಸೇರಿದೆ ಎಂದು ಅವರು ಕಿಡಿಕಾರಿದ್ದಾರೆ. ನೈಸ್ ಕಂಪನಿಯು ಸಿದ್ದಗಂಗಾ ಮಠಕ್ಕಾಗಲಿ ಅಥವಾ ಬಡ ರೈತರಿಗಾಗಲಿ ಎನ್ಒಸಿ ನೀಡುವುದಿಲ್ಲ, ಆದರೆ ಪ್ರಭಾವಿಗಳಿಗೆ ಅದು ಸುಲಭವಾಗಿ ಲಭ್ಯವಾಗುತ್ತದೆ ಎಂದೂ ಅವರು ಆರೋಪಿಸಿದ್ದಾರೆ.
ಬೆಂಗಳೂರು-ಮೈಸೂರು ಇನ್ಫ್ರಾಸ್ಟ್ರಕ್ಚರ್ ಕಾರಿಡಾರ್ (BMIC) ಯೋಜನೆಗಾಗಿ ಕೆಐಎಡಿಬಿ (KIADB) ಸ್ವಾಧೀನಪಡಿಸಿಕೊಂಡಿದ್ದ ಸುಮಾರು 300 ಎಕರೆಗೂ ಅಧಿಕ ಭೂಮಿಯನ್ನು ಡಿ.ಕೆ. ಶಿವಕುಮಾರ್, ಅವರ ಸಹೋದರ ಡಿ.ಕೆ. ಸುರೇಶ್, ತಾಯಿ ಗೌರಮ್ಮ ಹಾಗೂ ಪುತ್ರಿ ಆಭರಣ ಹೆಸರಿಗೆ ಪಡೆದುಕೊಳ್ಳಲಾಗಿದೆ ಎಂದು ಕುಮಾರಸ್ವಾಮಿ ಇತ್ತೀಚೆಗೆ ದಾಖಲೆ ಬಿಡುಗಡೆ ಮಾಡಿದ್ದರು. 2004ರಲ್ಲಿ ಡಿ.ಕೆ. ಶಿವಕುಮಾರ್ ಅವರು ನಗರಾಭಿವೃದ್ಧಿ ಸಚಿವರಾಗಿದ್ದಾಗ ಮೂಲ ಒಪ್ಪಂದವನ್ನು ಬದಲಿಸಿ ಜಮೀನು ಮರುಹಂಚಿಕೆ ಮಾಡಿಕೊಂಡಿದ್ದಾರೆ ಎಂಬುದು ಅವರ ಮುಖ್ಯ ಆರೋಪವಾಗಿದೆ. ಅಲ್ಲದೆ, ಕಾನೂನುಬಾಹಿರವಾಗಿ ಜಮೀನು ಖರೀದಿಸಿರುವುದನ್ನು ಸಾಬೀತುಪಡಿಸಿದರೆ ಸಾರ್ವಜನಿಕವಾಗಿ ನೇಣು ಹಾಕಿಕೊಳ್ಳುವುದಾಗಿ ಅವರು ಸವಾಲು ಹಾಕಿದ್ದಾರೆ.
ಮತ್ತೊಂದೆಡೆ, ತಮ್ಮ ಮತ್ತು ಕುಟುಂಬದವರ ಮೇಲಿನ ಭೂಕಬಳಿಕೆ ಆರೋಪಗಳನ್ನು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸಂಪೂರ್ಣವಾಗಿ ತಳ್ಳಿಹಾಕಿದ್ದಾರೆ. ತಾನು ಹಾಗೂ ತಮ್ಮ ಕುಟುಂಬ ಮಾಡಿರುವ ಎಲ್ಲ ವ್ಯವಹಾರಗಳು ಮತ್ತು ಆಸ್ತಿಗಳು ಆದಾಯ ತೆರಿಗೆ ಇಲಾಖೆ ಹಾಗೂ ಚುನಾವಣಾ ಆಯೋಗದ ಅಫಿಡವಿಟ್ ಗಳಲ್ಲಿ ಸ್ಪಷ್ಟವಾಗಿ ಘೋಷಿಸಲಾಗಿದೆ ಎಂದು ಅವರು ತಿರುಗೇಟು ನೀಡಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/CtZPUt7bwkaJkX2T6hAwZI
