ಬೀದರ್: ಜಿಲ್ಲೆಯಲ್ಲಿ ಅಕ್ರಮವಾಗಿ ಪಿಸ್ತೂಲ್ ಹಾಗೂ ಜೀವಂತ ಗುಂಡುಗಳನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದ ದೊಡ್ಡ ಜಾಲವೊಂದನ್ನು ಬೀದರ್ ಉಪನಗರ ಠಾಣೆ ಪೊಲೀಸರು ಯಶಸ್ವಿಯಾಗಿ ಪತ್ತೆಹಚ್ಚಿದ್ದಾರೆ. ಕಾರ್ಯಾಚರಣೆ ನಡೆಸಿದ ಪೊಲೀಸರು ಮುಖ್ಯ ಆರೋಪಿ ಸೇರಿದಂತೆ ನಾಲ್ವರನ್ನು ಬಂಧಿಸಿದ್ದು, ಅವರಿಂದ ಮಾರಕ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಂಡಿದ್ದಾರೆ.
ಜುಲೈ 15ರಂದು ಬೀದರ್ ನಗರದ ಹೊರವಲಯದ ಜ್ಞಾನಸುಧಾ ಶಾಲೆ ಸಮೀಪದ ರಿಂಗ್ ರಸ್ತೆಯಲ್ಲಿ ಪೊಲೀಸರು ದಾಳಿ ನಡೆಸಿ ಅಮನ್ ಸಿಂಗ್ ಹಾಗೂ ವೆಂಕಟೇಶ ಎಂಬಿಬ್ಬರು ಆರೋಪಿಗಳನ್ನು ಬಂಧಿಸಿದ್ದರು. ಆ ಸಂದರ್ಭದಲ್ಲಿ 5 ಪಿಸ್ತೂಲ್, 26 ಜೀವಂತ ಗುಂಡುಗಳು, 10 ಎಂ.ಟಿ.ಕೇಸ್, 5 ತಲ್ವಾರ್ ಹಾಗೂ ಕೃತ್ಯಕ್ಕೆ ಬಳಸಿದ್ದ ದ್ವಿಚಕ್ರ ವಾಹನ ಸೇರಿದಂತೆ ಒಟ್ಟು ₹6.73 ಲಕ್ಷ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿತ್ತು. ಆದರೆ, ಅಂದು ಪ್ರಮುಖ ಆರೋಪಿ ಬಲಬೀರ್ ಸಿಂಗ್ ತಲೆಮರೆಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದ.
ತಲೆಮರೆಸಿಕೊಂಡಿದ್ದ ಪ್ರಮುಖ ಆರೋಪಿಯ ಬಗ್ಗೆ ಖಚಿತ ಮಾಹಿತಿ ಕಲೆಹಾಕಿದ ಪೊಲೀಸರ ವಿಶೇಷ ತಂಡ, ಮಹಾರಾಷ್ಟ್ರದ ನಾಂದೇಡ್ ಮೂಲದ ಬಲಬೀರಸಿಂಗ್ ಅಲಿಯಾಸ್ ಶೇರಾ ಜಾಧವ್ನನ್ನು ಹೈದರಾಬಾದ್ನಲ್ಲಿ ಬಂಧಿಸುವಲ್ಲಿ ಯಶಸ್ವಿಯಾಗಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯ ಆರೋಪಿ ಬಲಬೀರ್ ಸಿಂಗ್ ಜೊತೆಗೆ ಆನಂದಕುಮಾರ, ಈಶ್ವರ ಹಾಗೂ ಅಶ್ವಿನ್ ಎಂಬ ಮೂವರು ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದೆ. ಒಟ್ಟು ನಾಲ್ವರು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಬಂಧಿತರಿಂದ ಒಟ್ಟು 5 ಪಿಸ್ತೂಲ್ ಹಾಗೂ 12 ಜೀವಂತ ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಪ್ರಮುಖ ಆರೋಪಿ ಬಲಬೀರಸಿಂಗ್ ಅಲಿಯಾಸ್ ಶೇರಾ ಜಾಧವ್ ವಿರುದ್ಧ ಮಹಾರಾಷ್ಟ್ರದ ಇತವಾರ್, ಲಿಂಬೆಗಾಂವ್ ಹಾಗೂ ನಾಂದೇಡ್ ಗ್ರಾಮೀಣ ಪೊಲೀಸ್ ಠಾಣೆಗಳಲ್ಲಿ ಪ್ರತ್ಯೇಕ 5 ಗಂಭೀರ ಪ್ರಕರಣಗಳು ದಾಖಲಾಗಿರುವುದು ತನಿಖೆಯಿಂದ ತಿಳಿದುಬಂದಿದೆ. ಈ ಕುರಿತು ಹೆಚ್ಚಿನ ತನಿಖೆ ಮುಂದುವರಿದಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ ಗುಂಟಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಈ ಕಾರ್ಯಾಚರಣೆಯನ್ನು ಡಿವೈಎಸ್ಪಿ ಎನ್.ಡಿ. ಸನದಿ ಅವರ ನೇತೃತ್ವದಲ್ಲಿ, ಸೆನ್ (CEN) ಠಾಣೆ ಸಿಪಿಐ ಸಂತೋಷ್ ತಟ್ಟೆಪಳ್ಳಿ ಹಾಗೂ ಸಿಬ್ಬಂದಿಗಳಾದ ಎಮ್.ಡಿ. ಆರಿಫ್, ಪ್ರಶಾಂತ್, ನಾಗೇಶ, ಗಂಗಾಧರ, ಸೂರ್ಯಕಾಂತ, ಅನಿಲ್, ಹಣಮಂತ, ಮಂಜುನಾಥ, ರಮೇಶ, ಗುರುನಾಥ, ಶೇಖ ಮೊದಿನ್, ರಾಜಕುಮಾರ ದಾನಾ, ರಮೇಶ, ಉಮೇಶ ಮತ್ತು ರಾಜಕುಮಾರ ಅವರನ್ನೊಳಗೊಂಡ ತಂಡ ಯಶಸ್ವಿಗೊಳಿಸಿದೆ.
ವರದಿ: ಅರವಿಂದ ಮಲ್ಲೀಗೆ, ಬೀದರ್
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/CtZPUt7bwkaJkX2T6hAwZI
