ಬೀದರ್: ನಿಷೇಧಿತ ಭಯೋತ್ಪಾದಕ ಸಂಘಟನೆಗಳ ಸದಸ್ಯರೊಂದಿಗೆ ಸಂಪರ್ಕ ಹೊಂದಿರುವ ಹಾಗೂ ಅಕ್ರಮ ಶಸ್ತ್ರಾಸ್ತ್ರಗಳ ಕಳ್ಳಸಾಗಣೆಯಲ್ಲಿ ತೊಡಗಿರುವ ಗಂಭೀರ ಆರೋಪದ ಮೇರೆಗೆ ರಾಷ್ಟ್ರೀಯ ತನಿಖಾ ದಳ (NIA) ಹಾಗೂ ಸ್ಥಳೀಯ ಪೊಲೀಸರ ತಂಡವು ಬೀದರ್ ಜಿಲ್ಲೆಯ ಭಾಲ್ಕಿ ತಾಲ್ಲೂಕಿನ ಏಣಕೂರ (ಯಣಕೂರು) ಗ್ರಾಮದ ವಿಶಾಲಕುಮಾರ್ ಮೇತ್ರೆ (24) ಎಂಬಾತನನ್ನು ಬಂಧಿಸಿದೆ.
ಆರೋಪಿ ವಿಶಾಲಕುಮಾರ್ ಮೇತ್ರೆ ಪಾಕಿಸ್ತಾನ ಮೂಲದ ನಿಷೇಧಿತ ಸಂಘಟನೆಗಳ ಸದಸ್ಯರೆಂದು ಶಂಕಿಸಲಾಗಿರುವ ಶಹಜಾದ್ ಭಟ್ಟಿ, ರಾಣಾ ಹುನೈನಿ ಹಾಗೂ ನೋಮಿ ಖಾನ್ ಅವರೊಂದಿಗೆ ಇನ್ ಸ್ಟಾಗ್ರಾಮ್ ಮತ್ತು ವಾಟ್ಸಾಪ್ ಸೇರಿದಂತೆ ವಿವಿಧ ಸಾಮಾಜಿಕ ಜಾಲತಾಣಗಳ ಮೂಲಕ ನಿರಂತರ ಸಂಪರ್ಕದಲ್ಲಿದ್ದ ಎಂದು ತನಿಖಾಧಿಕಾರಿಗಳು ಆರೋಪಿಸಿದ್ದಾರೆ.
ಉತ್ತರ ಪ್ರದೇಶದ ಅಶು ಶರ್ಮಾ ಹಾಗೂ ಮಧ್ಯಪ್ರದೇಶದ ರಾಜು ಭಾಯ್ ಎಂಬುವರ ಮೂಲಕ ಅಕ್ರಮವಾಗಿ ಶಸ್ತ್ರಾಸ್ತ್ರಗಳನ್ನು ಸಂಗ್ರಹಿಸಿ, ಅವುಗಳನ್ನು ಕಳ್ಳಸಾಗಣೆ ಮೂಲಕ ಮಾರಾಟ ಮಾಡುತ್ತಿದ್ದನೆಂಬ ಗಂಭೀರ ಆರೋಪವೂ ಈತನ ಮೇಲಿದೆ. ದೇಶದ ಐಕ್ಯತೆ, ಸಾರ್ವಭೌಮತೆ ಹಾಗೂ ಸಮಗ್ರತೆಗೆ ಧಕ್ಕೆ ತರುವಂತಹ ದೇಶವಿರೋಧಿ ಚಟುವಟಿಕೆಗಳಲ್ಲಿ ಈ ಯುವಕ ಭಾಗಿಯಾಗಿರುವುದು ಮೇಲ್ನೋಟಕ್ಕೆ ಸಾಬೀತಾಗಿದೆ ಎಂದು ಭಾಲ್ಕಿ ತಾಲೂಕಿನ ಖಟಕ ಚಿಂಚೋಳಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಎಫ್ ಐಆರ್ ನಲ್ಲಿ ಉಲ್ಲೇಖಿಸಲಾಗಿದೆ.
ಗುಪ್ತಚರ ಇಲಾಖೆಯ ತೀವ್ರ ನಿಗಾ:
ಆರೋಪಿ ವಿಶಾಲಕುಮಾರ್‌ನ ಅನುಮಾನಾಸ್ಪದ ಚಲನವಲನಗಳ ಮೇಲೆ ಗುಪ್ತಚರ ಇಲಾಖೆ ಹಾಗೂ ಭದ್ರತಾ ಸಂಸ್ಥೆಗಳು ಹಲವು ತಿಂಗಳಿಂದ ಹದ್ದಿನ ಕಣ್ಣಿಟ್ಟಿದ್ದವು. ಖಚಿತ ಮಾಹಿತಿ ಆಧರಿಸಿ ಕಾರ್ಯಾಚರಣೆ ನಡೆಸಿದ ಎನ್‌ಐಎ ಹಾಗೂ ಸ್ಥಳೀಯ ಪೊಲೀಸರು ಆತನನ್ನು ವಶಕ್ಕೆ ಪಡೆದಿದ್ದಾರೆ.
ಭಾಲ್ಕಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಕಾನೂನುಬಾಹಿರ ಚಟುವಟಿಕೆಗಳ (ತಡೆ) ಕಾಯ್ದೆ (ಯುಎಪಿಎ) ಹಾಗೂ ಬಿಎನ್ ಎಸ್ ಕಾಯ್ದೆಯ ವಿವಿಧ ಸೆಕ್ಷನ್ ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಸದ್ಯ ಎನ್ ಐಎ ಅಧಿಕಾರಿಗಳು ಪ್ರಕರಣದ ತನಿಖೆಯನ್ನು ಚುರುಕುಗೊಳಿಸಿದ್ದು, ವಿಶಾಲಕುಮಾರ್‌ಗೆ ದೇಶದ ವಿವಿಧ ಭಾಗಗಳಲ್ಲಿ ಹಾಗೂ ವಿದೇಶಗಳಲ್ಲಿ ಸಂಪರ್ಕ ಹೊಂದಿರುವ ಇತರ ವ್ಯಕ್ತಿಗಳು ಮತ್ತು ಅಕ್ರಮ ಶಸ್ತ್ರಾಸ್ತ್ರ ಜಾಲದ ಮೂಲದ ಕುರಿತು ತೀವ್ರ ವಿಚಾರಣೆ ಮುಂದುವರಿಸಿದ್ದಾರೆ.
ವರದಿ: ಅರವಿಂದ ಮಲ್ಲಿಗೆ. ಬೀದರ್
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/CtZPUt7bwkaJkX2T6hAwZI
