ದೇಶಾದ್ಯಂತ ಕೋಟ್ಯಂತರ ಜನರು ಬಳಸುತ್ತಿರುವ ಯುಪಿಐ (UPI) ಪಾವತಿ ವ್ಯವಸ್ಥೆಯಲ್ಲಿ ಅಕ್ಟೋಬರ್ 15, 2026ರಿಂದ ಹೊಸ ಮರ್ಚೆಂಟ್ ಡಿಸ್ಕೌಂಟ್ ರೇಟ್ (MDR) ನಿಯಮ ಜಾರಿಗೆ ಬರಲಿದೆ. ಈ ಬೆಳವಣಿಗೆಯಿಂದ ಯುಪಿಐ ಬಳಕೆದಾರರು ಇನ್ನು ಮುಂದೆ ಪ್ರತಿ ವಹಿವಾಟಿಗೂ ಶುಲ್ಕ ಪಾವತಿಸಬೇಕಾಗುತ್ತದೆ ಎಂಬ ಚರ್ಚೆ ಸಾಮಾಜಿಕ ಜಾಲತಾಣಗಳಲ್ಲಿ ನಡೆಯುತ್ತಿದೆ. ಆದರೆ ವಾಸ್ತವವಾಗಿ ಸಾಮಾನ್ಯ ಗ್ರಾಹಕರಿಂದ ಪ್ರತ್ಯೇಕವಾಗಿ ಯುಪಿಐ ಶುಲ್ಕ ವಸೂಲಿ ಮಾಡುವ ವ್ಯವಸ್ಥೆ ಇದಲ್ಲ.
ಹೊಸ ನಿಯಮದ ಪ್ರಕಾರ, ವ್ಯಕ್ತಿಯಿಂದ ವ್ಯಾಪಾರಿಗೆ ನಡೆಯುವ ಆಯ್ದ ಯುಪಿಐ ವಹಿವಾಟುಗಳಲ್ಲಿ ₹2,000ಕ್ಕಿಂತ ಹೆಚ್ಚಿನ ಮೊತ್ತಕ್ಕೆ ಶೇ.0.4ರಷ್ಟು MDR ಅನ್ವಯವಾಗಲಿದೆ. ಉದಾಹರಣೆಗೆ, ₹10,000 ಮೊತ್ತವನ್ನು ವ್ಯಾಪಾರಿಗೆ ಯುಪಿಐ ಮೂಲಕ ಪಾವತಿಸಿದರೆ MDR ₹40 ಆಗಲಿದೆ. ಪ್ರತಿ ವಹಿವಾಟಿಗೆ ಗರಿಷ್ಠ ₹300ರ ಮಿತಿ ಕೂಡ ನಿಗದಿಪಡಿಸಲಾಗಿದೆ. ಮುಖ್ಯವಾಗಿ, ಈ ಮೊತ್ತವನ್ನು ಗ್ರಾಹಕರ ಬ್ಯಾಂಕ್ ಖಾತೆಯಿಂದ ಪ್ರತ್ಯೇಕವಾಗಿ ಕಡಿತಗೊಳಿಸುವ ಉದ್ದೇಶ ಇಲ್ಲ. MDR ಎಂಬುದು ಪಾವತಿ ವ್ಯವಸ್ಥೆಯಲ್ಲಿ ವ್ಯಾಪಾರಿಗಳಿಂದ ಪಾವತಿ ಸೇವಾ ಸಂಸ್ಥೆಗಳು ಮತ್ತು ಬ್ಯಾಂಕ್ಗಳಿಗೆ ಸಂಬಂಧಿಸಿದ ಶುಲ್ಕವಾಗಿದೆ. ಹಣಕಾಸು ಸಚಿವಾಲಯವು ಯುಪಿಐ ಆ್ಯಪ್ಗಳು ಗ್ರಾಹಕರ ಮೇಲೆ ಹೆಚ್ಚುವರಿ ಪ್ಲಾಟ್ಫಾರ್ಮ್ ಅಥವಾ ಗುಪ್ತ ಶುಲ್ಕ ವಿಧಿಸಬಾರದು ಎಂದು ಸ್ಪಷ್ಟಪಡಿಸಿದೆ.
ಸ್ನೇಹಿತರು, ಕುಟುಂಬ ಸದಸ್ಯರು ಅಥವಾ ಇತರ ವ್ಯಕ್ತಿಗಳ ಬ್ಯಾಂಕ್ ಖಾತೆಗೆ ಯುಪಿಐ ಮೂಲಕ ಹಣ ಕಳುಹಿಸುವ P2P ವಹಿವಾಟುಗಳಿಗೆ ಈ MDR ಅನ್ವಯಿಸುವುದಿಲ್ಲ. ಅಂದರೆ ವ್ಯಕ್ತಿಯಿಂದ ವ್ಯಕ್ತಿಗೆ ನಡೆಯುವ ಯುಪಿಐ ಹಣ ವರ್ಗಾವಣೆಗಳು ಎಂದಿನಂತೆ ಶುಲ್ಕರಹಿತವಾಗಿಯೇ ಮುಂದುವರಿಯಲಿವೆ. ಅದೇ ರೀತಿ, ಸಣ್ಣ ವ್ಯಾಪಾರಿಗಳ ಮೇಲಿನ ಹೊರೆ ಕಡಿಮೆ ಮಾಡಲು ನಿರ್ದಿಷ್ಟ ವಿನಾಯಿತಿಗಳನ್ನೂ ಮುಂದುವರಿಸಲಾಗಿದೆ. ತಿಂಗಳಿಗೆ ಯುಪಿಐ ಕ್ಯೂಆರ್ ಮೂಲಕ ₹1 ಲಕ್ಷದವರೆಗೆ ಸ್ವೀಕರಿಸುವ ಸಣ್ಣ ವ್ಯಾಪಾರಿಗಳಿಗೆ MDR ಅನ್ವಯಿಸುವುದಿಲ್ಲ ಎಂದು ವರದಿಯಾಗಿದೆ.
ತುಮಕೂರಿನ ಪ್ರಮುಖ ಕೈಗಾರಿಕಾ ಪ್ರದೇಶಗಳಲ್ಲಿ ಬೃಹತ್ ಉದ್ಯೋಗಾವಕಾಶ: ತಕ್ಷಣವೇ ನೇಮಕಾತಿ!
ಒಂದು ಅಂಗಡಿಯಲ್ಲಿ ₹2,500 ಮೌಲ್ಯದ ವಸ್ತು ಖರೀದಿಸಿ ಯುಪಿಐ ಮೂಲಕ ಪಾವತಿಸಿದರೆ, ಗ್ರಾಹಕರ ಖಾತೆಯಿಂದ ₹2,500ರಷ್ಟೇ ಕಡಿತವಾಗುತ್ತದೆ. ಇದರ ಮೇಲೆ ಗ್ರಾಹಕರಿಗೆ ಪ್ರತ್ಯೇಕವಾಗಿ MDR ಶುಲ್ಕ ಸೇರಿಸುವುದಿಲ್ಲ.ಆದರೆ MDR ವೆಚ್ಚವನ್ನು ವ್ಯಾಪಾರಿಗಳು ಹೇಗೆ ನಿರ್ವಹಿಸುತ್ತಾರೆ ಮತ್ತು ಭವಿಷ್ಯದಲ್ಲಿ ಅದರ ಪರಿಣಾಮ ಸರಕುಗಳ ಬೆಲೆಯ ಮೇಲೆ ಬೀಳುತ್ತದೆಯೇ ಎಂಬುದು ಚರ್ಚೆಯ ವಿಷಯವಾಗಿದೆ.
ಹೊಸ MDR ವ್ಯವಸ್ಥೆಯನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ಅಕ್ಟೋಬರ್ 15ರಿಂದ ನಿಯಮ ಜಾರಿಗೆ ಬರುವುದಕ್ಕೆ ಮಧ್ಯಂತರ ತಡೆ ನೀಡಲು ನಿರಾಕರಿಸಿದೆ. ಇದೇ ವೇಳೆ ಕೇಂದ್ರ ಸರ್ಕಾರ, ಭಾರತೀಯ ರಿಸರ್ವ್ ಬ್ಯಾಂಕ್ (RBI) ಮತ್ತು ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (NPCI) ಸೇರಿದಂತೆ ಸಂಬಂಧಿತ ಸಂಸ್ಥೆಗಳಿಗೆ ನೋಟಿಸ್ ನೀಡಿ ಪ್ರತಿಕ್ರಿಯೆ ಕೇಳಿದೆ. ಹೀಗಾಗಿ, ಅಕ್ಟೋಬರ್ 15ರಿಂದ ಯುಪಿಐ ಸಂಪೂರ್ಣವಾಗಿ ಶುಲ್ಕದ ವ್ಯವಸ್ಥೆಯಾಗಲಿದೆ ಎಂಬುದು ಸರಿಯಲ್ಲ. ಸಾಮಾನ್ಯ P2P ಹಣ ವರ್ಗಾವಣೆಗಳು ಉಚಿತವಾಗಿಯೇ ಇರಲಿದ್ದು, ನಿರ್ದಿಷ್ಟ ₹2,000ಕ್ಕಿಂತ ಹೆಚ್ಚಿನ ವ್ಯಾಪಾರಿ ವಹಿವಾಟುಗಳಿಗೆ MDR ಅನ್ವಯವಾಗಲಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/CtZPUt7bwkaJkX2T6hAwZI
